
ಲಾಹೋರ್(ಸೆ.22): ಭದ್ರತಾ ಕಾರಣ ನೀಡಿ ಪಾಕಿಸ್ತಾನ ಪ್ರವಾಸ(Pakistan Tour) ರದ್ದುಗೊಳಿಸಿರುವ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ(Ramiz Raja), ಇನ್ನು ಮುಂದೆ ನ್ಯೂಜಿಲೆಂಡ್, ಇಂಗ್ಲೆಂಡ್ ಕೂಡಾ ನಮ್ಮ ವೈರಿ ಎಂದಿದ್ದಾರೆ.
‘ಇದುವರೆಗೆ ನಮಗೆ ಭಾರತ ಮಾತ್ರ ಬದ್ಧ ವೈರಿಯಾಗಿತ್ತು. ಆ ಪಟ್ಟಿಗೆ ಈಗ ನ್ಯೂಜಿಲೆಂಡ್, ಇಂಗ್ಲೆಂಡ್ ಸೇರಿಕೊಂಡಿವೆ. ಮುಂಬರುವ ಟಿ20 ವಿಶ್ವಕಪ್(T20 World Cup)ನಲ್ಲಿ ಅವರನ್ನು ಸೋಲಿಸಿ ತಕ್ಕ ಉತ್ತರ ನೀಡುತ್ತೇವೆ’ ಎಂದಿದ್ದಾರೆ. ‘ನ್ಯೂಜಿಲೆಂಡ್, ಇಂಗ್ಲೆಂಡ್ ಬಳಿಕ ಇದೀಗ ಆಸ್ಪ್ರೇಲಿಯಾ ಸಹ ತನ್ನ ಪ್ರವಾಸದ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ಹೇಳುತ್ತಿದೆ. ಈ ಮೂರೂ ದೇಶಗಳು ಒಂದೇ ರೀತಿ ವರ್ತಿಸುತ್ತವೆ. ನಾವು ಅಲ್ಲಿಗೆ ಹೋದಾಗ ಅವರು ಹೇಳಿದ ನಿಯಮಗಳನ್ನೆಲ್ಲಾ ಪಾಲಿಸುತ್ತೇವೆ. ಆದರೆ ನಮಗೆ ಸಿಗಬೇಕಿರುವ ಬೆಲೆ ಮಾತ್ರ ಸಿಗುವುದಿಲ್ಲ’ ಎಂದಿದ್ದಾರೆ.
ಉಗ್ರರ ಸಲಹಿದ ಪಾಕಿಸ್ತಾನಕ್ಕೆ ತಕ್ಕ ಪಾಠ; ನ್ಯೂಜಿಲೆಂಡ್ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಪಾಕ್ ಪ್ರವಾಸ ರದ್ದು!
‘ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(England Cricket Board)ಯ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ ಇದು ಪಾಕಿಸ್ತಾನ ತಂಡ ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಸಾಬೀತುಪಡಿಸುವ ಎಚ್ಚರಿಕೆಯ ಗಂಟೆ. ಪಂದ್ಯ ಮೊಟಕುಗೊಳಿಸಿದ ತಂಡಗಳನ್ನು ಕ್ಷಮಿಸದೆ ಅವರ ವಿರುದ್ಧ ಆಡಲು ನಾವು ಸಿದ್ಧವಾಗಿದ್ದೇವೆ’ ಎಂದಿದ್ದಾರೆ.
‘ನ್ಯೂಜಿಲೆಂಡ್, ಇಂಗ್ಲೆಂಡ್ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್(ಪಿಸಿಎಲ್) ಆಡಲು ಇಲ್ಲಿಗೆ ಬರುತ್ತಾರೆ. ಆಗ ಅವರಿಗೆ ಗಾಬರಿ, ಭೀತಿ ಎದುರಾಗುವುದಿಲ್ಲ. ಒಟ್ಟಾರೆಯಾಗಿ ಅವರು ಪಾಕಿಸ್ತಾನದ ಕಡೆಗೆ ವಿಭಿನ್ನ ಮನಸ್ಥಿತಿಯನ್ನು ಹೊಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2003ರ ಬಳಿಕ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿ ಪಾಕ್ ನೆಲದಲ್ಲಿ ಆಯೋಜನೆಗೊಂಡಿತ್ತು. ಮೊದಲ ಏಕದಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಕ್ಷಣೆಯ ಭೀತಿಗೆ ಒಳಗಾದ ಕಿವೀಸ್ ತಂಡವು ಹೋಟೆಲ್ ಬಿಟ್ಟು ಹೊರಬಂದಿರಲಿಲ್ಲ. ಬಳಿಕ ಪಾಕಿಸ್ತಾನದಿಂದ ತವರಿಗೆ ವಾಪಾಸಾಗಿತ್ತು. ಇದಾಗಿ ಕೆಲ ದಿನಗಳಲ್ಲೇ ಪಾಕಿಸ್ತಾನ ಪ್ರವಾಸದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.