
ಅಬುದಾಬಿ: ಹ್ಯಾಂಡ್‌ಶೇಕ್ ವಿವಾದದ ಬಿಸಿ ಆರುವ ಮುನ್ನವೇ ಪಾಕಿಸ್ತಾನ ತಂಡ ಐಸಿಸಿಗೆ ಮತ್ತೊಂದು ದೂರು ನೀಡಿದೆ. ಈ ಬಾರಿ ಪಾಕ್ ತಂಡದ ದೂರು ಭಾರತದ ಪಂದ್ಯವನ್ನು ನಿಯಂತ್ರಿಸಿದ ಟಿವಿ ಅಂಪೈರ್ ವಿರುದ್ಧ. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಬಗ್ಗೆ ಪಾಕಿಸ್ತಾನ ತಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಐಸಿಸಿ ಬಳಿ ದೂರು ದಾಖಲಿಸಿದೆ. ಉತ್ತಮ ಫಾರ್ಮ್‌ನಲ್ಲಿದ್ದ ಫಖರ್ ಜಮಾನ್ ಅವರ ವಿಕೆಟ್, ಟಿವಿ ಅಂಪೈರ್‌ನ ತಪ್ಪು ನಿರ್ಧಾರದಿಂದಾಗಿದ್ದು, ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದು ಪಾಕಿಸ್ತಾನ ತಂಡ ವಾದಿಸಿದೆ. ಟಿವಿ ಅಂಪೈರ್ ವಿರುದ್ಧ ಪಾಕಿಸ್ತಾನ ತಂಡದ ಮ್ಯಾನೇಜರ್ ನವೀದ್ ಚೀಮಾ ಮೊದಲು ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಅವರನ್ನು ಸಂಪರ್ಕಿಸಿದ್ದರು.
ಆದರೆ, ಪೈಕ್ರಾಫ್ಟ್ ದೂರು ಸ್ವೀಕರಿಸಲಿಲ್ಲ. ಇದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಮ್ಯಾಚ್ ರೆಫ್ರಿ ಉತ್ತರಿಸಿದರು. ಇದಾದ ನಂತರ ಪಾಕ್ ತಂಡದ ಆಡಳಿತ ಮಂಡಳಿ ಐಸಿಸಿಗೆ ದೂರು ನೀಡಿತು. ಮೂರನೇ ಓವರ್‌ನಲ್ಲಿ ಒಂಬತ್ತು ಎಸೆತಗಳಲ್ಲಿ 15 ರನ್ ಗಳಿಸಿದ್ದಾಗ ಫಖರ್ ಜಮಾನ್, ಸಂಜು ಹಿಡಿದ ಕ್ಯಾಚ್‌ಗೆ ಔಟಾದರು. ಟಿವಿ ಅಂಪೈರ್ ವಿವರವಾದ ಪರಿಶೀಲನೆಯ ನಂತರ ಔಟ್ ಎಂದು ತೀರ್ಪು ನೀಡಿದ್ದರು. ಅಂಪೈರ್ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಫಖರ್ ಜಮಾನ್ ಪೆವಿಲಿಯನ್‌ಗೆ ಮರಳಿದರು.
ಅಂಪೈರ್ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಆಟಗಾರರಾದ ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಟೀಕಿಸಿದ್ದಾರೆ. ಫಖರ್ ಜಮಾನ್ ಔಟ್ ಆಗಿರಲಿಲ್ಲ ಮತ್ತು ಅನುಮಾನದ ಲಾಭ ಬ್ಯಾಟರ್‌ಗೆ ಸಿಗಬೇಕಿತ್ತು ಎಂದು ಅಖ್ತರ್ ಹೇಳಿದ್ದಾರೆ. ಈ ಹಿಂದೆ, ಭಾರತ ವಿರುದ್ಧದ ಮೊದಲ ಪಂದ್ಯದ ಹ್ಯಾಂಡ್‌ಶೇಕ್ ವಿವಾದದ ನಂತರ, ಮ್ಯಾಚ್ ರೆಫ್ರಿ ಪೈಕ್ರಾಫ್ಟ್ ಅವರನ್ನು ಏಷ್ಯಾಕಪ್‌ನಿಂದ ಬದಲಾಯಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿತ್ತು. ಆದರೆ ಪಾಕ್ ತಂಡದ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು.
ಇದೇ ವೇಳೆ, ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಐಸಿಸಿ ಪಾಕಿಸ್ತಾನವನ್ನು ಬಿಡುತ್ತಿಲ್ಲ. ಸೂಪರ್ ಫೋರ್‌ನಲ್ಲಿ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೂ ಆಂಡಿ ಪೈಕ್ರಾಫ್ಟ್ ಅವರನ್ನೇ ಮ್ಯಾಚ್ ರೆಫ್ರಿಯಾಗಿ ನೇಮಿಸಿದೆ. ಸೂಪರ್ 4 ಹಂತದಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನೂ ಪೈಕ್ರಾಫ್ಟ್ ಅವರೇ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಹ್ಯಾಂಡ್‌ಶೇಕ್ ವಿವಾದದ ನಂತರ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೂ ಐಸಿಸಿ ಪೈಕ್ರಾಫ್ಟ್ ಅವರನ್ನೇ ನೇಮಿಸಿದೆ. ಮ್ಯಾಚ್ ರೆಫ್ರಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲು ಬಿಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಲಾಹೋರ್: ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಸೋತಿರುವ ಪಾಕಿಸ್ತಾನ ತಂಡವನ್ನು ಮಾಜಿ ಕ್ರಿಕೆಟಿಗ, ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವ್ಯಂಗ್ಯವಾಡಿದ್ದು, ಪಾಕಿಸ್ತಾನ ಕ್ರಿಕೆಟ್ ಮ೦ಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಸೇನಾ ಮುಖ್ಯಸ್ಥ ಜ. ಆಸೀಮ್ ಮುನೀರ್ ಆರಂಭಿಕ ಆಟಗಾರ ರಾಗಿ ಆಡಿದರೆ ಮಾತ್ರ ಸೋಲಿಸಲು ಸಾಧ್ಯ'ಎಂದಿದ್ದಾರೆ.
ಸದ್ಯ ಜೈಲಿನಲ್ಲಿರುವ ಇಮ್ರಾನ್ ಈ ರೀತಿ ಹೇಳಿದ್ದಾರೆ ಎಂದು ಸಹೋದರಿ ಅಲೀಮಾ ಖಾನ್ ಹೇಳಿಕೊಂಡಿದ್ದಾರೆ. ಇಮ್ರಾನ್ ಈ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಮುಖಾಮುಖಿಯಲ್ಲಿ ಭಾರತ ತಂಡದ ಎದುರು ಪಾಕಿಸ್ತಾನ 7 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಇನ್ನು ಇದಾದ ಬಳಿಕ ಸೂಪರ್ 4 ಹಂತದ ಮುಖಾಮುಖಿಯಲ್ಲೂ ಭಾರತ ತಂಡವು ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಸೋಲುಣಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.