
ದುಬೈ: ಭಾನುವಾರ ನಡೆದ ಭಾರತ- ಪಾಕ್ ಏಷ್ಯಾಕಪ್ ಪಂದ್ಯದ ವೇಳೆ ಅರ್ಧಶತಕ ದಾಖಲಿಸಿದ್ದಕ್ಕೆ “ಎಕೆ-47 ಗನ್ ಶಾಟ್' ರೀತಿ ಸಂಭ್ರಮಿಸಿ ಅನೇಕರಿಂದ ಆಕ್ರೋಶಕ್ಕೆ ಗುರಿಯಾಗಿದ್ದ ಪಾಕಿಸ್ತಾನ ಆರಂಭಿಕ ಆಟಗಾರ ಶಾಹಿಬ್‌ಝಾದ್ ಫರ್ಹಾನ್ ತಮ್ಮ ಉದ್ಧಟತನ ಮುಂದುವರೆಸಿದ್ದು, 'ಜನರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ, ಅದಕ್ಕೆಲ್ಲ ನಾನು ಕೇರ್‌ಮಾಡಲ್ಲ' ಎಂದಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ' ಅ ಸಮಯದಲ್ಲಿ ಸಂಭ್ರಮಾಚರಣೆ ಕೇವಲ ಒಂದು ಕ್ಷಣವಾಗಿತ್ತು. ಸಾಮಾನ್ಯವಾಗಿ ಅರ್ಧಶತಕ ಸಿಡಿಸಿದಾಗ ನಾನು ಸಂಭ್ರಮಿಸಲ್ಲ. ಆದರೆ ಆ ಕ್ಷಣಕ್ಕೆ ಸಂಭ್ರಮಿಸಬೇಕು ಎನಿಸಿತು. ಹಾಗೆ ಮಾಡಿದೆ. ಜನರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಅದು ಮುಖ್ಯವೂ ಅಲ್ಲ' ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತ ವಿರುದ್ಧದ ಪಂದ್ಯದ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಹುಚ್ಚಾಟ ಪ್ರದರ್ಶಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೌಂಡರಿ ಗೆರೆ ಬಳಿ ಫೀಲ್ಡ್ ಮಾಡುವಾಗ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ಜೆಟ್ ಗಳು ಕೆಳಕ್ಕೆ ಬೀಳುವಂತೆ ಕೈಸನ್ನೆ ಮಾಡಿದ ರೌಫ್, ಭಾರತದ 6ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ಪಾಕ್ ಸೇನೆಯ ಸುಳ್ಳು ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು 6-0 ಎಂದು ಕೈ ಸನ್ನೆ ಮಾಡಿದರು. ಪಂದ್ಯದ ಬಳಿಕ ರೌಫ್‌ರ ಪತ್ನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೌಫ್ 6-0 ಎಂದು ತೋರಿಸುತ್ತಿರುವ ಫೋಟೋವನ್ನು ಹಾಕಿ, 'ಪಂದ್ಯ ಸೋತಿರಬಹುದು ಆದರೆ ಯುದ್ಧ ಗೆದ್ದಿದ್ದೇವೆ' ಎಂದು ಪೋಸ್ಟ್ ಮಾಡಿದ್ದಾರೆ. ಇದು ಭಾರೀ ಟ್ರೋಲ್ ಆಗಿದೆ.
ದುಬೈ: ಪಾಕಿಸ್ತಾನವನ್ನು ಈ ಏಷ್ಯಾಕಪ್‌ನಲ್ಲಿ 2ನೇ ಬಾರಿಗೆ ಹೊಸಕಿ ಹಾಕಿದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮೈದಾನದಾಚೆಗೂ ಬದ್ಧವೈರಿಗೆ ತಕ್ಕ ಉತ್ತರ ನೀಡಿದ್ದಾರೆ.
ಭಾನುವಾರ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸೂರ್ಯ ನಗುತ್ತಲೇ ನೀಡಿದ ಉತ್ತರ, ಪಾಕಿಸ್ತಾನಿಯರಿಗೆ ಅರಗಿಸಿಕೊಳ್ಳಲಾಗದಂತಹ ಪೆಟ್ಟು ನೀಡಿದೆ. ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ಸೂರ್ಯರನ್ನು 'ಪಾಕ್ ತಂಡದಿಂದ ಎದುರಾದ ಪೈಪೋಟಿ ಹಾಗೂ ಆ ತಂಡವು ಭಾರತಕ್ಕೆ ಎಷ್ಟು ದೊಡ್ಡ ಪ್ರತಿಸ್ಪರ್ಧಿ?' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸೂರ್ಯ, 'ಸರ್, ದಯವಿಟ್ಟು ಪಾಕಿಸ್ತಾನ ತಂಡವನ್ನು ಭಾರತದ ಪ್ರತಿಸ್ಪರ್ಧಿ ಎಂದು ಕರೆಯುವುದನ್ನು ನಿಲ್ಲಿಸಿ' ಎಂದರು. ಆಗ ಪಾಕಿಸ್ತಾನಿ ಪತ್ರಕರ್ತ, 'ನಾನು ಪಾಕ್ ತಂಡದ ಗುಣಮಟ್ಟದ ಬಗ್ಗೆ ಕೇಳುತ್ತಿದ್ದೇನೆ, ಪ್ರತಿಸ್ಪರ್ಧೆ ಬಗ್ಗೆ ಅಲ್ಲ' ಎಂದು ಸ್ಪಷ್ಟನೆ ನೀಡಲು ಮುಂದಾದರು.
ಅದಕ್ಕೆ ಸೂರ್ಯ, 'ಸ್ಪರ್ಧೆ, ಪ್ರತಿಸ್ಪರ್ಧೆ ಹಾಗೂ ಗುಣಮಟ್ಟ ಎರಡೂ ಒಂದೇ. ಪೈಪೋಟಿ ಎಂದರೆ ಏನು ಹೇಳಿ?, ಎರಡು ತಂಡಗಳು 15 ಪಂದ್ಯಗಳಲ್ಲಿ ಸೆಣಸಿದ್ದು, 8-7 ಗೆಲುವು-ಸೋಲಿನ ದಾಖಲೆ ಹೊಂದಿದ್ದರೆ ಅದನ್ನು ಪೈಪೋಟಿ ಎನ್ನಬಹುದು. ಆದರಿಲ್ಲಿ ನಮ್ಮ ದಾಖಲೆ ಗಮನಿಸಿದರೆ ಪೈಪೋಟಿಯೇ ಇಲ್ಲ' ಎಂದು ನಗುತ್ತಲೇ ನುಡಿದರು. ಪಾಕಿಸ್ತಾನ ವಿರುದ್ಧ ಭಾರತ 15 ಟಿ20 ಪಂದ್ಯಗಳನ್ನು ಆಡಿದ್ದು 12ರಲ್ಲಿ ಗೆದ್ದು 3ರಲ್ಲಿ ಸೋತಿದೆ. 8 ಪಂದ್ಯಗಳಲ್ಲಿ ಚೇಸ್ ಮಾಡಿದ್ದು, 8ರಲ್ಲೂ ಜಯಿಸಿದೆ.
ದುಬೈ: ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನಿ ಆಟಗಾರರು, ಸಹಾಯಕ ಸಿಬ್ಬಂದಿ ಜೊತೆ 'ನೋ ಹ್ಯಾಂಡ್ ಶೇಕ್ ನಿಯಮ ಪಾಲಿಸುತ್ತಿರುವ ಭಾರತ ಕ್ರಿಕೆಟ್
ತಂಡಕ್ಕೆ, ಪ್ರಧಾನ ಕೋಚ್ ಗೌತಮ್ ಗಂಭೀರ್ 'ಅಂಪೈರ್ ಗಳಿಗಾದರೂ ಹ್ಯಾಂಡ್ ಶೇಕ್ ಮಾಡಿ' ಎಂದು ಸೂಚನೆ ನೀಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಪಾಕ್ ವಿರುದ್ಧ ಸೂಪರ್ -4 ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಂ ಬಾಗಿಲ ಬಳಿ ನಿಂತಿದ್ದ ಭಾರತೀಯ ಆಟಗಾರರು, ಸಿಬ್ಬಂದಿಯನ್ನು ಉದ್ದೇಶಿಸಿ ಗಂಭೀರ್ ಈ ಮಾತು ಹೇಳಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.