
ಲಾಹೋರ್: ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಗಿಟ್ಟಿದ್ದಕ್ಕೆ ಪ್ರತೀಕಾರ ಎಂಬಂತೆ ಟೂರ್ನಿಗೆ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ ಪಾಕಿಸ್ತಾನ ತನ್ನ ನಿಲುವು ಬದಲಿಸಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತನ್ನ ಆಟಗಾರರನ್ನು ವಿಶ್ವಕಪ್‌ಗಾಗಿ ಶ್ರೀಲಂಕಾಗೆ ಕಳುಹಿಸಲು ತಯಾರಿ ನಡೆಸುತ್ತಿದೆ ಎಂದು ಪಿಸಿಬಿ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಪಿಸಿಬಿ ಆಗುಹೋಗುಗಳ ಬಗ್ಗೆ ಹತ್ತಿರದಿಂದ ಬಲ್ಲ ಅಧಿಕಾರಿಯೊಬ್ಬರು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ವಿಶ್ವಕಪ್ ತಂಡವನ್ನು ಫೆ.2ರಂದು ಕೊಲಂಬೊಗೆ ಕಳುಹಿಸಲು ಪಿಸಿಬಿ ಎಲ್ಲಾ ಸಿದ್ಧತೆ ನಡೆಸುತ್ತಿದೆ’ ಎಂದಿದ್ದಾರೆ. ‘ಪಾಕಿಸ್ತಾನ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಫೈನಲ್‌ಗೇರಿದರೆ ಆ ಪಂದ್ಯವೂ ಶ್ರೀಲಂಕಾದಲ್ಲೇ ನಡೆಯಲಿದೆ. ಹೀಗಿರುವಾಗ ಟೂರ್ನಿ ಅಥವಾ ಭಾರತ ವಿರುದ್ಧ ಪಂದ್ಯವನ್ನು ಅವರು ಯಾವ ಕಾರಣಕ್ಕೆ ಬಹಿಷ್ಕರಿಸುತ್ತಾರೆ. ಪಾಕಿಸ್ತಾನ ಸರ್ಕಾರವೇ ಕ್ರೀಡೆಯಲ್ಲಿ ರಾಜಕೀಯ ಇರಬಾರದು ಎಂದು ಪ್ರತಿಪಾದಿಸುತ್ತದೆ. ಏಷ್ಯಾ ಕ್ರಿಕೆಟ್‌ನಲ್ಲೂ ಭಾರತ-ಪಾಕಿಸ್ತಾನ ಆಡುತ್ತಿದೆ. ಈಗ ಅವರು ವಿಶ್ವಕಪ್ ಅಥವಾ ಭಾರತ ಪಂದ್ಯವನ್ನು ಬಹಿಷ್ಕರಿಸುವುದರಲ್ಲಿ ಏನರ್ಥವಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಫೆ.7ರಂದು ಟೂರ್ನಿ ಆರಂಭಗೊಳ್ಳಲಿದ್ದು, ಪಾಕಿಸ್ತಾನ ತಂಡ ಉದ್ಘಾಟನಾ ಪಂದ್ಯದಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಆಡಲಿದೆ. ಭಾರತ-ಪಾಕ್ ಬಹುನಿರೀಕ್ಷಿತ ಪಂದ್ಯ ಫೆ.15ಕ್ಕೆ ನಿಗದಿಯಾಗಿದೆ.
ಬಾಂಗ್ಲಾದ ವೇಗಿ ಮುಸ್ತಫಿಜುರ್ ರಹ್ಮಾನ್‌ರನ್ನು ಐಪಿಎಲ್‌ನಿಂದ ಹೊರಗಿಟ್ಟಿದ್ದಕ್ಕೆ, ಬಾಂಗ್ಲಾದೇಶವು ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡಲ್ಲ ಎಂದು ಪಟ್ಟುಹಿಡಿದಿತ್ತು. ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಕೋರಿತ್ತು. ಇದಕ್ಕೆ ಐಸಿಸಿ ಒಪ್ಪಿರಲಿಲ್ಲ. ಆದರೂ ಪಟ್ಟುಬಿಡದ ಕಾರಣ ಬಾಂಗ್ಲಾವನ್ನು ಐಸಿಸಿ ಟೂರ್ನಿಯಿಂದಲೇ ಹೊರಹಾಕಿದೆ. ಇದಕ್ಕೆ ವಿರೋಧವಾಗಿ ಪಾಕ್ ಟೂರ್ನಿ ಬಹಿಷ್ಕಾರದ ಬಗ್ಗೆ ಮಾತಾಡುತ್ತಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವೇಳಾಪಟ್ಟಿ ಹೀಗಿದೆ:
ಫೆಬ್ರವರಿ 07: ಪಾಕಿಸ್ತಾನ-ನೆದರ್‌ಲೆಂಡ್ಸ್
ಫೆಬ್ರವರಿ 10: ಪಾಕಿಸ್ತಾನ - ಯುಎಸ್‌ಎ
ಫೆಬ್ರವರಿ 15: ಪಾಕಿಸ್ತಾನ- ಭಾರತ
ಫೆಬ್ರವರಿ 18: ಪಾಕಿಸ್ತಾನ- ನಮೀಬಿಯಾ
ಈಗಾಗಲೇ ಹಲವು ಟೂರ್ನಿಗಳ ವಿಚಾರದಲ್ಲಿ ಪಾಕ್ ಕ್ರಿಕೆಟ್ ಮಂಡಳಿಯು ಐಸಿಸಿ ಜೊತೆಗಿ ಸಂಬಂಧ ಹಾಳು ಮಾಡಿಕೊಂಡಿದೆ. ಈ ಬಾರಿ ವಿಶ್ವಕಪ್ ವಿಚಾರದಲ್ಲೂ ಐಸಿಸಿ ಜೊತೆ ಕಿತ್ತಾಟಕ್ಕೆ ಇಳಿದಿದೆ. ಆದರೆ ಇದಕ್ಕೆ ಪಾಕ್‌ನ ಹಲವು ಮಾಜಿ ಕ್ರಿಕೆಟಿಗರು, ಕೋಚ್‌ಗಳು, ಕ್ರಿಕೆಟ್ ಆಡಳಿತಾಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದು, ಈಗಿನ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಾಗತಿಕ ಕ್ರಿಕೆಟ್ ಮಂಡಳಿ ಜೊತೆ ಉತ್ತಮವಾಗಿ ನಡೆದುಕೊಳ್ಳಲು ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಬಹಿಷ್ಕರಿಸುವ ತಾಕತ್ತು ಪಾಕ್‌ಗೆ ಇಲ್ಲ ಎಂದು ಭಾರತದ ಮಾಜಿ ನಾಯಕ ಅಜಿಂಕ್ಯಾ ರಹಾನೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಪಾಕ್ ವಿಶ್ವಕಪ್ ಬಹಿಷ್ಕರಿಸಲ್ಲ ಎಂದು ಭಾವಿಸುತ್ತೇನೆ. ಅದಕ್ಕೆ ಬೇಕಿರುವ ದಮ್ಮು ಅವರಲ್ಲಿಲ್ಲ. ಪಾಕ್ ತಂಡ ವಿಶ್ವಕಪ್ ಆಡಲು ಬರಲೇಬೇಕು’ ಎಂದು ಕಾಲೆಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.