
ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವೇಗಿ ಓಲ್ಲಿ ರಾಬಿನ್ಸನ್ ಅವರ ಮಾರಕ ಸ್ವಿಂಗ್ ಬೌಲಿಂಗ್‌ಗೆ ತಲೆಯಾಗಿದ್ದ ಪಾಕಿಸ್ತಾನ, ಕೇವಲ 133 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ, ಸ್ಟಾರ್ ಬ್ಯಾಟರ್ ಜೋ ರೂಟ್ ಅವರ ಮನಮೋಹಕ शतಕದ (124 ರನ್) ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 453 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ಬೃಹತ್ ಹಿನ್ನಡೆಯಿಂದ ಮುಜುಗರಕ್ಕೊಳಗಾಗಿದ್ದ ಪಾಕಿಸ್ತಾನ ತಂಡಕ್ಕೆ 21 ವರ್ಷದ ಯುವ ಆಲ್‌ರೌಂಡರ್ ರಜೌಲ್ಲಾ ಮಶ್ವಾನಿ ಹೊಸ ಜೀವ ನೀಡಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸಿಕ್ಸರ್‌ಗಳ ಸುರಿಮಳೆಗೈದ ಅವರು ಕ್ರೀಡಾಂಗಣದ ಹೊರಗಿದ್ದ ಹೋಟೆಲ್‌ನ ಗಾಜನ್ನೇ ಒಡೆದು ಜಗತ್ತನ್ನೇ ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ!
ರಜೌಲ್ಲಾ ಮಶ್ವಾನಿ ಅವರ ಈ ಪಯಣ ಯಾವುದೇ ಸಿನಿಮಾ ಕಥೆಗೂ ಕಡಿಮೆಯಿಲ್ಲ. ರಜೌಲ್ಲಾ ಈ ಮುನ್ನ ಯಾವುದೇ ಪ್ರಮುಖ ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿರಲಿಲ್ಲ. ವಿದೇಶಕ್ಕೆ ಪ್ರಯಾಣಿಸಲು ಅವರ ಬಳಿ ಹಣವೂ ಇರಲಿಲ್ಲ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಪರ್ವತ ಪ್ರದೇಶದ ಬಾಡಿಗೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಹುಡುಗನ ಬಳಿ ಪಾಸ್‌ಪೋರ್ಟ್ ಕೂಡ ಇರಲಿಲ್ಲ.
ತಂಡದ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧಿಕಾರಿಗಳು, ರಜೌಲ್ಲಾನನ್ನು ಹುಡುಕಿ ಲಾಹೋರ್‌ಗೆ ಕರೆತಂದರು. ಕೇವಲ ಒಂದೇ ದಿನದಲ್ಲಿ ಅವರ ಪಾಸ್‌ಪೋರ್ಟ್ ಹಾಗೂ ವೀಸಾ ಕ್ಲಿಯರೆನ್ಸ್ ಮುಗಿಸಿ, ರಾತ್ರೋರಾತ್ರಿ ವಿಮಾನವೇರಿಸಿ ನೇರವಾಗಿ ಇಂಗ್ಲೆಂಡ್‌ಗೆ ಕಳುಹಿಸಿಕೊಟ್ಟಿದ್ದರು!
ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲೇ ರಜೌಲ್ಲಾ ತಮ್ಮ ಆಲ್‌ರೌಂಡರ್ ಸಾಮರ್ಥ್ಯ ತೋರಿಸಿದರು. ಬೌಲಿಂಗ್‌ನಲ್ಲಿ ಜೋ ರೂಟ್ ಅವರ ನಿರ್ಣಾಯಕ ವಿಕೆಟ್ ಸೇರಿದಂತೆ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದರು. ಆದರೆ ನಿಜವಾದ ಜಾದೂ ನಡೆದದ್ದು ಅವರ ಬ್ಯಾಟಿಂಗ್‌ನಲ್ಲಿ!
ಎರಡನೇ ಇನ್ನಿಂಗ್ಸ್‌ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಜೌಲ್ಲಾ, ಕೇವಲ 63 ಎಸೆತಗಳಲ್ಲಿ 9 ಸಿಕ್ಸರ್‌ಗಳ ನೆರವಿನಿಂದ 81 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಪಾಯಕಾರಿ ಬೌಲರ್ ಜೋಫ್ರಾ ಆರ್ಚರ್ ಎಸೆತಗಳಿಗೇ ಸತತ ಎರಡು ಸಿಕ್ಸರ್ ಬಾರಿಸಿದ ಅವರು, ಮೂರನೇ ದಿನದ ಕೊನೆಯಲ್ಲಿ ಲಾಗ್-ಆನ್ ಕಡೆಗೆ ಬಾರಿಸಿದ ಬೃಹತ್ ಸಿಕ್ಸರ್ ನೇರವಾಗಿ ಸ್ಟೇಡಿಯಂನ ಹೊರಗಿದ್ದ ಹೋಟೆಲ್‌ಗೆ ಅಪ್ಪಳಿಸಿತು. ಶಾಟ್‌ನ ರಭಸಕ್ಕೆ ಹೋಟೆಲ್‌ನ ಗಾಜು ಪುಡಿಪುಡಿಯಾಯಿತು! ಈ ಅದ್ಭುತ ಶಾಟ್ ನೋಡಿ ಗ್ರೌಂಡ್‌ನಲ್ಲಿದ್ದ ಜೋ ರೂಟ್ ಸೇರಿದಂತೆ ಪ್ರತಿಯೊಬ್ಬ ಆಟಗಾರನೂ ಆಘಾತಕ್ಕೊಳಗಾದರು.
ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ರಜೌಲ್ಲಾ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಹೆಸರು ಬರೆದಿದ್ದಾರೆ. 9ನೇ ಕ್ರಮಾಂಕದ ಸಿಕ್ಸರ್ ಕಿಂಗ್; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು (9) ಸಿಕ್ಸರ್ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದರು.
ಸೌಥಿ ದಾಖಲೆ ಸಮಗಟ್ಟು; ಟೆಸ್ಟ್ ಚೊಚ್ಚಲ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನ್ಯೂಜಿಲೆಂಡ್‌ನ ಟಿಮ್ ಸೌಥಿ (9 ಸಿಕ್ಸರ್) ಅವರ ದಾಖಲೆಯನ್ನು ರಜೌಲ್ಲಾ ಸರಿಗಟ್ಟಿದ್ದಾರೆ. ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇಂದು ಇಂಗ್ಲೆಂಡ್ ಅಂಗಳದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.