Asia Cup 2023: ಏಷ್ಯಾಕಪ್ ಟೂರ್ನಿಗೆ ಆತಿಥೇಯ ಪಾಕಿಸ್ತಾನ ತಂಡ ಪ್ರಕಟ..! ಸ್ಟಾರ್ ಕ್ರಿಕೆಟಿಗರಿಗೆ ಸ್ಥಾನ

By Naveen KodaseFirst Published Aug 10, 2023, 5:12 PM IST
Highlights

2023 ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಆರಂಭ
2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ

ಇಸ್ಲಾಮಾಬಾದ್‌(ಆ.10): ಮುಂಬರುವ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಹಾಗೂ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ.

ಇಂಜಮಾಮ್ ಉಲ್‌ ಹಕ್‌, ಪಾಕಿಸ್ತಾನ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾದ ಬಳಿಕ ಆಫ್ಘಾನಿಸ್ತಾನ ಎದುರಿನ 3 ಪಂದ್ಯಗಳ ಏಕದಿನ ಸರಣಿಗೆ 18 ಆಟಗಾರರ ತಂಡ ಹಾಗೂ ಏಷ್ಯಾಕಪ್‌ಗೆ 17 ಆಟಗಾರರನ್ನೊಳಗೊಂಡ ತಂಡವನ್ನು ಹೆಸರಿಸಲಾಗಿದೆ. ಸೌದ್ ಶಕೀಲ್ ಹೊರತುಪಡಿಸಿ ಉಳಿದೆಲ್ಲಾ ಆಫ್ಘಾನಿಸ್ತಾನ ಎದುರಿನ ಸರಣಿಗೆ ಸ್ಥಾನ ಪಡೆದ 17 ಆಟಗಾರರು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದಂತೆ ಬರೋಬ್ಬರಿ ಎರಡು ವರ್ಷಗಳ ಬಳಿಕ ಫಾಹಿಮ್ ಅಶ್ರಫ್, ಪಾಕಿಸ್ತಾನ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ಎರಡನೇ ವಿಕೆಟ್ ಕೀಪರ್ ರೂಪದಲ್ಲಿ ಮೊಹಮ್ಮದ್ ಹ್ಯಾರಿಸ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಂ ಇಂಡಿಯಾ ಅಲ್ಲವೇ ಅಲ್ಲ..! ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದ ಆರ್ ಅಶ್ವಿನ್‌..!

ಇನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಕಳೆದ ಜನವರಿಯಲ್ಲಿ ಪಾಕಿಸ್ತಾನ ತಂಡದ ಉಪನಾಯಕರಾಗಿ ನೇಮಕವಾಗಿದ್ದ ಶಾನ್ ಮಸೂದ್‌, ಇದೀಗ ಮುಂಬರುವ ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಶಾನ್ ಮಸೂದ್ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪರಿಣಾಮ ಆಯ್ಕೆ ಸಮಿತಿ ಮನಗೆಲ್ಲುವಲ್ಲಿ ಮಸೂದ್ ವಿಫಲರಾಗಿದ್ದಾರೆ.

ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್‌ ಹಕ್‌, "ಶಾನ್‌ ಮಸೂದ್ ಈ ಹಿಂದೆ ಉತ್ತಮ ಪ್ರದರ್ಶನ ತೋರಿದ್ದಾರೆ. ದುರಾದೃಷ್ಟವಶಾತ್, ಇತ್ತೀಚೆಗೆ ಅವರ ಪ್ರದರ್ಶನ ಅಷ್ಟೇನು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ನಾವು ಆಯ್ಕೆ ಮಾಡಿದ ಸಂಭಾವ್ಯ 20-21 ಆಟಗಾರರ ಪಟ್ಟಿಯಲ್ಲಿ ಶಾನ್ ಮಸೂದ್ ಹೆಸರಿತ್ತು. ಆದರೆ ಸೌದ್ ಶಕೀಲ್ ಹಾಗೂ ಮತ್ತಿತರ ಕೆಲವು ಆಟಗಾರರು ಗಮನಾರ್ಹ ಪ್ರದರ್ಶನ ತೋರಿದ್ದರಿಂದಾಗಿ ಶಾನ್ ಮಸೂದ್‌ ತಂಡದಿಂದ ಕೈಬಿಡಲಾಯಿತು ಎಂದು ಹೇಳಿದ್ದಾರೆ.

Asia Cup 2023: ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು..! ಇತಿಹಾಸದಲ್ಲೇ ಮೊದಲು, ಜೆರ್ಸಿ ಫೋಟೋ ವೈರಲ್

ಇನ್ನು ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಫಾಹಿಮ್ ಅಶ್ರಫ್‌ 2021ರ ಜುಲೈ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಫಾಹಿಮ್ ಅಶ್ರಫ್ ಅನುಪಸ್ಥಿತಿಯಲ್ಲಿ ಮತ್ತೋರ್ವ ವೇಗದ ಬೌಲರ್‌ ನಮಗೆ ಸಿಕ್ಕಿಲ್ಲ. ಮುಂಬರುವ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ನಾವು ಫಾಹಿಮ್ ಅಶ್ರಫ್ ಅವರಿಗೆ ಪಾಕ್‌ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಆತಿಥೇಯ ಪಾಕಿಸ್ತಾನ ತಂಡವು ಆಗಸ್ಟ್ 30ರಂದು ನೇಪಾಳ ವಿರುದ್ದ ಮುಲ್ತಾನ್‌ನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಸೆಪ್ಟೆಂಬರ್ 02ರಂದು ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಕಾದಾಟ ನಡೆಸಲಿದೆ. ಇನ್ನುಳಿದಂತೆ ಸಪ್ಟೆಂಬರ್ 10ರಂದು ಸೂಪರ್ 4 ಹಂತದಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡುವುದು ಬಹುತೇಕ ಖಚಿತ ಎನಿಸಿದೆ.

ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಹೀಗಿದೆ ನೋಡಿ:

ಬಾಬರ್ ಅಜಂ(ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್(ಉಪನಾಯಕ), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಸೌದ್ ಶಕೀಲ್(ಕೇವಲ ಆಪ್ಘಾನಿಸ್ತಾನ ಎದುರಿನ ಸರಣಿಗೆ ಮಾತ್ರ), ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹಮ್ಮದ್, ಮೊಹಮ್ಮದ್ ನವಾಜ್, ಉಸ್ಮಾನ್ ಮಿರ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್‌ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಾಹೀಮ್ ಅಶ್ರಫ್, ಮೊಹಮ್ಮದ್ ವಾಸೀಂ.

click me!