ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಆಡಲು ಒಪ್ಪಿಕೊಂಡ ಪಾಕ್‌; ವಿಶ್ವಕಪ್ ವೇಳಾಪಟ್ಟಿ ಪ್ರಕಟಣೆಗೆ ಕ್ಷಣಗಣನೆ

By Naveen Kodase  |  First Published Jun 26, 2023, 3:07 PM IST

ಅಹಮದಾಬಾದ್‌ನಲ್ಲಿ ಕ್ರಿಕೆಟ್ ಆಡಲು ಒಪ್ಪಿಕೊಂಡ ಪಾಕಿಸ್ತಾನ
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಣೆಗೆ ಕ್ಷಣಗಣನೆ
ಅಹಮದಾಬಾದ್‌ನಲ್ಲೇ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಕದನ


ನವದೆಹಲಿ(ಜೂ.26): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಿದ್ದ ಅಡ್ಡಿ ಆತಂಕಗಳು ಕೊನೆಗೂ ದೂರವಾಗಿವೆ. 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ. ಇನ್ನು ಭಾರತದಲ್ಲಿ ಆಯೋಜನೆಯಾಗಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಕೆಲವು ಮೈದಾನಗಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಕಣಕ್ಕಿಳಿಯುವ ಕುರಿತಂತೆ ತಕರಾರು ತೆಗೆದಿತ್ತು. ಈ ಇದೀಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತೆ ಆಗಿದ್ದು, ಅಹಮದಾಬಾದ್‌ನಲ್ಲಿ ವಿಶ್ವಕಪ್ ಪಂದ್ಯಗಳನ್ನಾಡಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಒಪ್ಪಿಕೊಂಡಿದ್ದು, ಜೂನ್ 27ರಂದು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಹೊರಬೀಳಲಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಅದೇ ರೀತಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಬೆಂಗಳೂರಿನಲ್ಲಿ ಮತ್ತು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವೆ ಚೆನ್ನೈನಲ್ಲಿ ಪಂದ್ಯ ಆಯೋಜಿಸುವ ಕುರಿತಂತೆಯೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಕರಾರು ತೆಗೆದಿತ್ತು. ಈ ಕುರಿತಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಳಿ, ಪಿಸಿಬಿ ಮೈದಾನಗಳನ್ನು ಬದಲಿಸುವಂತೆ ಮನವಿ ಮಾಡಿಕೊಂಡಿತ್ತು. ಇದೀಗ ಜೂನ್ 27ರಂದು ಅಂದರೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ 100 ದಿನಗಳು ಬಾಕಿ ಇರುವಂತೆಯೇ ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಬೆಳಗ್ಗೆ 11.30ಕ್ಕೆ ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ವರದಿಯಾಗಿದೆ.

Latest Videos

undefined

ಸರ್ಫರಾಜ್‌ ಖಾನ್‌ಗೆ ಮುಳುವಾಯ್ತಾ ಚೇತನ್ ಶರ್ಮಾ ಮುಂದೆ ಮಾಡಿದ ಅಗ್ರೆಸಿವ್ ಸೆಲಿಬ್ರೇಷನ್‌..?

"ಏಕದಿನ ವಿಶ್ವಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿಯು ಮಂಗಳವಾರ ಪ್ರಕಟವಾಗಲಿದೆ. ಐಸಿಸಿ ಆಯೋಜಿಸಿದ ವೇಳಾಪಟ್ಟಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಐಸಿಸಿ ಈಗಾಗಲೇ ಸಿದ್ದಪಡಿಸಿರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು  InsideSport ಮಾಧ್ಯಮಕ್ಕೆ ತಿಳಿಸಿದ್ದಾರೆಂದು ವರದಿಯಾಗಿದೆ.

ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಮುಂಬರುವ ಅಕ್ಟೋಬರ್ 05ರಂದು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಫೈನಲ್ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ-ಪಾಕ್ ಕದನಕ್ಕೆ ಮೋದಿ ಸ್ಟೇಡಿಯಂ ಆತಿಥ್ಯ:

ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಜರುಗಲಿದೆ. ರಾಜಕೀಯ ಕಾರಣಕ್ಕಾಗಿ ಅಹಮದಾದ್‌ನಲ್ಲಿ ನಡೆಯಬೇಕಿರುವ ಪಂದ್ಯವನ್ನು ಬೆಂಗಳೂರು, ಚೆನ್ನೈ ಅಥವಾ ಕೋಲ್ಕತಾಗೆ ಸ್ಥಳಾಂತರ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಬಳಿ ಮನವಿ ಮಾಡಿಕೊಂಡಿತ್ತು. ಆದರೆ ಪಿಸಿಬಿ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳೆಂದು ಗುರುತಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಮೈದಾನದಲ್ಲಿಯೇ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿರುತ್ತದೆ. ಸುಮಾರು 1.30 ಲಕ್ಷ ಮಂದಿ ಏಕಕಾಲದಲ್ಲಿ ಪಂದ್ಯ ವೀಕ್ಷಿಸುವ ವ್ಯವಸ್ಥೆಯನ್ನು ಹೊಂದಿದ್ದು, ಈ ಪಂದ್ಯದ ಟಿಕೆಟ್ ಕೂಡಾ ಕೆಲವೇ ಗಂಟೆಗಳಲ್ಲಿ ಸೋಲ್ಡೌಟ್ ಆಗುವ ನಿರೀಕ್ಷೆಯಿದೆ. ಈ ಕಾರಣಕ್ಕಾಗಿಯೇ ಬಿಸಿಸಿಐ ಹಾಗೂ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ಪುರಸ್ಕರಿಸಿಲ್ಲ.

ಕ್ರಿಕೆಟ್ ವೆಬ್‌ಸೈಟ್‌ ESPNCricinfo ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. 10 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್, ಮುಂಬೈ ಹಾಗೂ ತಿರುವನಂತಪುರಂ ಸೇರಿದಂತೆ ಒಟ್ಟು ದೇಶದ 12 ನಗರಗಳಲ್ಲಿ ಪಂದ್ಯಾಟಗಳು ಜರುಗಲಿವೆ ಎಂದು ವರದಿಯಾಗಿದೆ. ಈಗಾಗಲೇ ಎಂಟು ತಂಡಗಳು 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನು ಪಡೆದಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು, ಏಕದಿನ ವಿಶ್ವಕಪ್‌ ಪ್ರಧಾನ ಸುತ್ತಿಗೆ ಲಗ್ಗೆಯಿಡಲಿವೆ. 

click me!