ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್
ಕಪಿಲ್ ದೇವ್ ನಾಯಕತ್ವವನ್ನು ಕೊಂಡಾಡಿದ ಸುನಿಲ್ ಗವಾಸ್ಕರ್
1983ರ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದ್ದ ಕಪಿಲ್ ದೇವ್ ಪಡೆ
ನವದೆಹಲಿ(ಜೂ.26): ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಕ್ಯಾಪ್ಟನ್ ಕೂಲ್ ಎಂದು ಗುರುತಿಸಿಕೊಂಡಿದ್ದಾರೆ. ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದೇ ತಾಳ್ಮೆಯಿಂದ ತಂಡವನ್ನು ಮುನ್ನಡೆಸುವ ಕ್ಷಮತೆ ಹೊಂದಿರುವ ಧೋನಿ ತಮ್ಮ ತಂತ್ರಗಾರಿಕೆಯ ನಾಯಕತ್ವದಿಂದಲೇ ಜಗತ್ತಿನ ದಿಗ್ಗಜ ನಾಯಕರ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಕ್ಯಾಪ್ಟನ್ ಕೂಲ್ ಎನ್ನುವ ಪದ ಧೋನಿಗೆ ಅನ್ವರ್ಥಕ ನಾಮ ಎನ್ನುವಷ್ಟರ ಮಟ್ಟಿಗೆ ಚಿರಪರಿಚಿತವಾಗಿದೆ.
ಹೀಗಿರುವಾಗಲೇ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಕ್ಯಾಪ್ಟನ್ ಕೂಲ್ ರೇಸ್‌ನಲ್ಲಿ ಇನ್ನೊಬ್ಬ ದಿಗ್ಗಜ ನಾಯಕರಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜತೆಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ನಿಜವಾದ ಕ್ಯಾಪ್ಟನ್ ಕೂಲ್ ಎಂದು ಬಣ್ಣಿಸಿದ್ದಾರೆ.
undefined
"ಕಪಿಲ್ ದೇವ್ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ಅತ್ಯದ್ಭುತವಾಗಿತ್ತು. ಅದರಲ್ಲೂ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ವೀವ್ ರಿಚರ್ಡ್ಸ್ ಅವರ ಕ್ಯಾಚ್ ಹಿಡಿದ ರೀತಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರ ನಾಯಕತ್ವ ಕೂಡಾ ಡೈನಾಮಿಕ್ ಆಗಿತ್ತು. ಆ ಸಂದರ್ಭದಲ್ಲಿ ಆ ಮಾದರಿಯ ಕ್ರಿಕೆಟ್‌ಗೆ ಏನು ಅಗತ್ಯವಿತ್ತೋ ಆ ಗುಣ ಅವರಲ್ಲಿತ್ತು. ಅವರು ಒಂದು ವೇಳೆ ತಂಡದ ಫೀಲ್ಡರ್ ಕ್ಯಾಚ್ ಕೈಚೆಲ್ಲಿದರೆ, ಅಥವಾ ಕ್ಷೇತ್ರರಕ್ಷಣೆಯಲ್ಲಿ ವೈಫಲ್ಯ ಅನುಭವಿಸಿದರೂ ನಕ್ಕು ಸಮಾಧಾನ ಮಾಡುವ ಗುಣವಿದ್ದರಿಂದಲೇ ನಾನು ಅವರನ್ನು ನಿಜವಾದ ಕ್ಯಾಪ್ಟನ್ ಕೂಲ್ ಎಂದು ಕರೆಯುತ್ತೇನೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಭಾರತ ಗೆದ್ದ 1983ರ ಏಕದಿನ ವಿಶ್ವಕಪ್ ಫೈನಲ್ ಹೇಗಿತ್ತು?
1983 ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಇಂಗ್ಲೆಂಡ್‌ಗೆ ಬಂದಿಳಿದ ಕಪಿಲ್ ದೇವ್ ನೇತೃತ್ವದ ಭಾರತ ತಂಡವನ್ನು ಅಂಡರ್ ಡಾಗ್ ಎಂದೇ ಕರೆಯಲಾಗಿತ್ತು. ಯಾಕೆಂದರೆ, 83ರ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಜಯಿಸಿತ್ತು. ಇನ್ನೊಂದೆಡೆ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವು ಮೊದಲೆರಡು ವಿಶ್ವಕಪ್ ಗೆದ್ದು, ಹ್ಯಾಟ್ರಿಕ್ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ತಂಡವು ಆರಂಭದಲ್ಲೇ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್‌ಗೆ ಸೋಲಿನ ರುಚಿ ತೋರಿಸಿತ್ತು. ಇದಾದ ಬಳಿಕ ಘಟಾನುಘಟಿ ತಂಡಗಳನ್ನು ಮಣಿಸಿ ಭಾರತ ತಂಡವು ಫೈನಲ್‌ಗೇರಿತ್ತು.
ಜೂನ್ 25, 1983ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಂಡೀಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡವು 54.4 ಓವರ್‌ಗಳಲ್ಲಿ 183 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಮೋಹಿಂದರ್ ಅಮರ್‌ನಾಥ್, ವಿಂಡೀಸ್ ಬ್ಯಾಟರ್ ಡೆಸ್ಮಂಡ್ ಹೇಯ್ನ್ಸ್ ವಿಕೆಟ್ ಕಬಳಿಸಿದ ಬಳಿಕ ಆರಂಭ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ಇನ್ನು ಕಪಿಲ್ ದೇವ್, ವಿಂಡೀಸ್ ಅಪಾಯಕಾರಿ ಬ್ಯಾಟರ್ ಸರ್ ವೀವ್ ರಿಚರ್ಡ್ಸ್ ಅವರ ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು, ಪಂದ್ಯದ ದಿಕ್ಕನ್ನೇ ಬದಲಿಸುವಂತೆ ಮಾಡಿತು. ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ ತಂಡವು 52 ಓವರ್‌ಗಳನ್ನು ಆಡಿ ಕೇವಲ 140 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಭಾರತ 43 ರನ್ ಅಂತರದ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿತ್ತು.