
ದುಬೈ: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಮೂರನೇ ಸೀಸನ್‌ನಿಂದ ಪಾಕಿಸ್ತಾನ ಚಾಂಪಿಯನ್ಸ್ ತಂಡ ಅಧಿಕೃತವಾಗಿ ಹಿಂದೆ ಸರಿದಿದೆ. ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಧಿಸಿದ್ದ ಕಠಿಣ ಷರತ್ತುಗಳನ್ನು ಆಯೋಜಕರು ತಿರಸ್ಕರಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ತಂಡ ನಿರಾಕರಿಸಿತ್ತು. ಇದನ್ನೇ ಈಗ ಪಟ್ಟು ಹಿಡಿದ ಪಾಕ್, ಭಾರತೀಯ ಆಟಗಾರರಿಂದ ವಿಚಿತ್ರ ಬೇಡಿಕೆಯಿಟ್ಟಿತ್ತು.
ಹೌದು, ಕಳೆದ ಸೀಸನ್ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಗ್ರೂಪ್ ಹಂತ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ಭಾರತ ಬಹಿಷ್ಕರಿಸಿದ್ದರಿಂದ, ಪಾಕಿಸ್ತಾನ ವಾಕ್ ಓವರ್ ಪಡೆದು ಫೈನಲ್ ತಲುಪಿತ್ತು. ಅಂದು ಪಾಕ್ ಆಟಗಾರರೊಂದಿಗೆ ಕೈಕುಲುಕಲು ಕೂಡ ಭಾರತೀಯ ಆಟಗಾರರು ಸಿದ್ಧರಿರಲಿಲ್ಲ. ಕಳೆದ ವರ್ಷದ ಈ ಘಟನೆಗಳ ಬಗ್ಗೆ ಭಾರತದ ಆಟಗಾರರು ಲಿಖಿತವಾಗಿ ಕ್ಷಮೆ ಕೇಳಬೇಕು ಮತ್ತು ಈ ಬಾರಿ ಕೈಕುಲುಕಲು ಒಪ್ಪಬೇಕು ಎಂಬುದು ಪಿಸಿಬಿಯ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಈ ಷರತ್ತುಗಳನ್ನು ಒಪ್ಪಿಕೊಳ್ಳಲು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಆಡಳಿತ ಮಂಡಳಿ ನಿರಾಕರಿಸಿದೆ.
ಆಯೋಜಕರು ಕೇವಲ ವಾಣಿಜ್ಯ ಷರತ್ತುಗಳನ್ನು ಮಾತ್ರ ಒಪ್ಪಿಕೊಂಡಿದ್ದಾರೆ. ಕ್ಷಮೆ ಕೇಳಬೇಕೆಂಬ ಪಿಸಿಬಿ ಬೇಡಿಕೆಯನ್ನು ಆಯೋಜಕರು ತಳ್ಳಿಹಾಕಿದ ತಕ್ಷಣ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎನ್‌ಒಸಿ (NOC) ನೀಡಲು ನಿರಾಕರಿಸಿತು. ಹೀಗಾಗಿ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದೆ. ಅಕ್ಟೋಬರ್ 10ರಂದು ಅಭಿಮಾನಿಗಳು ಕಾಯುತ್ತಿದ್ದ ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಾಗಿತ್ತು. ಆದರೆ ಪಾಕ್ ಹಿಂದೆ ಸರಿದಿದ್ದರಿಂದ ಈ ಪಂದ್ಯ ರದ್ದಾಗಿದೆ.
ಶಾಹಿದ್ ಅಫ್ರಿದಿ ನಾಯಕತ್ವದ ಪಾಕಿಸ್ತಾನ ತಂಡದ ಮೊದಲ ಪಂದ್ಯಗಳನ್ನು ತಾಂತ್ರಿಕ ಕಾರಣಗಳಿಂದ ಈ ಹಿಂದೆಯೇ ಮುಂದೂಡಲಾಗಿತ್ತು. ಕಳೆದ ಎರಡು ಸೀಸನ್‌ಗಳಲ್ಲಿ ರನ್ನರ್ ಅಪ್ ಆಗಿದ್ದ ಪಾಕಿಸ್ತಾನಕ್ಕೆ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಎನ್‌ಒಸಿ ಸಿಗದ ಕಾರಣ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಮತ್ತು ಮಂಡಳಿಯ ನಿರ್ಧಾರವನ್ನು ಗೌರವಿಸುವುದಾಗಿ ಪಾಕಿಸ್ತಾನ ಚಾಂಪಿಯನ್ಸ್ ಮ್ಯಾನೇಜ್‌ಮೆಂಟ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಗೋಯಾ: ಇತ್ತೀಚೆಗೆ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಾಕಿ ಸೆಮಿಫೈನಲ್ ಹಾಗೂ ಕ್ರಿಕೆಟ್ ಫೈನಲ್, ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಗರಿಷ್ಠ ವೀಕ್ಷಣೆ ಪಂದ್ಯಗಳು ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ(ಒಸಿಎ) ತಿಳಿಸಿದೆ. ಆದರೆ ವೀಕ್ಷಣೆ ಅಂಕಿಅಂಶ, ಈ ಎರಡು ಪಂದ್ಯಗಳ ಪೈಕಿ ಯಾವುದು ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯ ಎಂಬುದನ್ನು ಬಹಿರಂಗಪಡಿಸಿಲ್ಲ.
ಈ ಬಗ್ಗೆ ಮಾತನಾಡಿರುವ ಒಸಿಎ ಸಮನ್ವಯ ಸಮಿತಿ ಅಧ್ಯಕ್ಷ ತಯ್ಯಬ್ ಇಕ್ರಮ್, ‘ಏಷ್ಯಾಡ್‌ನ 2 ಪಂದ್ಯಗಳು ವೀಕ್ಷಣೆಯಲ್ಲಿ ದಾಖಲೆ ನಿರ್ಮಿಸಿವೆ. ಭಾರತ-ಪಾಕ್ ಕ್ರಿಕೆಟ್ ಫೈನಲ್, ಹಾಕಿ ಸೆಮಿಫೈನಲ್ ಪಂದ್ಯಗಳು ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯಗಳು’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.