
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯವಾಗಿ ಗುರುತಿಸಿಕೊಂಡಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿಗೆ ಸ್ವೀಟ್ ರಿವೇಂಜ್ ತೀರಿಸಿಕೊಂಡಿದೆ. ಇನ್ನು ಭಾರತ ಎದುರು ಪಾಕಿಸ್ತಾನ ತಂಡವು 6 ವಿಕೆಟ್ ಅಂತರದಲ್ಲಿ ಹೀನಾಯವಾಗಿ ಸೋಲುತ್ತಿದ್ದಂತೆಯೇ ಪಾಕಿಸ್ತಾನ ತಂಡದ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಭಾರತ ವಿರುದ್ಧ ಸೋಲುವುದರೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ಅಭಿಯಾನ ಅಂತ್ಯ ಗೊಂಡಿದೆ ಎಂದು ಪಾಕಿಸ್ತಾನ ನಾಯಕ ರಿಜ್ವಾನ್ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, 'ನಮ್ಮ ಅಭಿಯಾನ ಮುಗಿದಿದೆ ಎಂದೇ ಹೇಳಬಹುದು. ನಾವು ಇನ್ನು ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತರಾಗಿದ್ದೇವೆ. ಇನ್ನೂ ಒಂದು ಪಂದ್ಯ ಉಳಿದಿರುವುದರಿಂದ ಭರವಸೆ ಇದೆ. ಆದರೆ ನಾಯಕನಾಗಿ ನಾನು ಈ ಸನ್ನಿವೇಶವನ್ನು ಇಷ್ಟಪಡುವುದಿಲ್ಲ. ನಮ್ಮ ಅದೃಷ್ಟ ನಮ್ಮ ಕೈಯಲ್ಲೇ ಇರಬೇಕು' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂದು ಬಾಂಗ್ಲಾದೇಶ ವಿರುದ್ಧ ಕಿವೀಸ್ ಗೆದ್ದರೆ ಪಾಕ್ ಮನೆಗೆ!
ಮೊಹಮ್ಮದ್ ರಿಜ್ವಾನ್ ನಾಯಕತ್ವದ ಪಾಕಿಸ್ತಾನ ತಂಡವು ತವರಿನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿತ್ತು. ಹೀಗಾಗಿ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಪಾಕಿಸ್ತಾನ ತಂಡವು ಭಾರತದ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಇದೀಗ ಭಾರತ ಎದುರು ಪಾಕ್ ಹೀನಾಯ ಸೋಲು ಅನುಭವಿಸಿದೆ. ಇನ್ನು ಪಾಕಿಸ್ತಾನ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಇಂದು ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಒಂದು ವೇಳೆ ನ್ಯೂಜಿಲೆಂಡ್ ತಂಡವು ಗೆದ್ದರೇ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಅಧಿಕೃತವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿವೆ.
ಒಂದು ವೇಳೆ ಇಂದು ಬಾಂಗ್ಲಾದೇಶ ಎದುರು ನ್ಯೂಜಿಲೆಂಡ್ ಸೋತರೇ, ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಗೆದ್ದರೇ ಹಾಗೂ ಬಾಂಗ್ಲಾದೇಶ ಎದುರು ಪಾಕಿಸ್ತಾನ ಭಾರೀ ಅಂತರದಲ್ಲಿ ಗೆಲುವು ಸಾಧಿಸಿ, ಬಾಂಗ್ಲಾ ಹಾಗೂ ಕಿವೀಸ್ ನೆಟ್‌ರನ್ ರೇಟ್ ಹಿಂದಿಕ್ಕಿದರಷ್ಟೇ ಭಾರತದ ಜತೆ ಪಾಕಿಸ್ತಾನ ತಂಡವು ಸೆಮೀಸ್‌ಗೇರುವ ಅವಕಾಶ ಇದೆ. ಇದು ಸಾಧ್ಯವಾಗಬೇಕಿದ್ದರೇ ಪವಾಡವೇ ನಡೆಯಬೇಕಿದೆ. ಒಂದು ನೆನಪಿರಲಿ ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಹುರಿದುಂಬಿಸಿದ ಸುಂದರಿ ಯಾರು? ದುಬೈನಲ್ಲಿ ಕಾಣಿಸಿಕೊಂಡ ಚೆಲುವೆ!
ಪಾಕ್‌ನಲ್ಲಿ ಭಾರತ ಆಡದ್ದಕ್ಕೆ ಐಸಿಸಿ, ಪಿಸಿಬಿ, ಫ್ಯಾನ್ಸ್ ನಿರಾಸೆ: ಪಿಸಿಬಿ ಮುಖ್ಯಸ್ಥ
ಕರಾಚಿ: ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡದೆ ದುಬೈನಲ್ಲಿ ಆಡುತ್ತಿರುವುದಿಂದ ಪಿಸಿಬಿ, ಐಸಿಸಿ ಹಾಗೂ ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಪಾಕ್ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿದ್ದು, ಭದ್ರತೆ ಕಾರಣಕ್ಕೆ ಭಾರತದ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ.
ಈ ಬಗ್ಗೆ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದು, 'ಭಾರತ ತಂಡ ಪಾಕಿಸ್ತಾನದಲ್ಲಿ ಆಡುತ್ತಿಲ್ಲ ಎಂಬುದು ನಿಸ್ಸಂದೇಹವಾಗಿ ನಿರಾಶಾದಾಯಕ. ಇದರಿಂದ ಪಿಸಿಬಿಗೆ ಮಾತ್ರವಲ್ಲ, ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ, ಐಸಿಸಿ, ವಾಣಿಜ್ಯ ಪಾಲುದಾರರಿಗೆ ಸಹ ನಿರಾಸೆಯಾಗಿದೆ. ಪಾಕ್ ಹಲವು ಸಲ ಭಾರತ ಪ್ರವಾಸ ಮಾಡಿದೆ. ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಮೂಲಕ ಭಾರತ ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಆಶಿಸಿದ್ದೆವು. ದುರಾದೃಷ್ಟವಶಾತ್ ಅದು ಕಾರ್ಯರೂಪಕ್ಕೆ ಬಂದಿಲ್ಲ' ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.