
ರಾವಲ್ಪಿಂಡಿ: ಪಾಕಿಸ್ತಾನ ವಿರುದ್ದ 60 ರನ್‌ಗಳ ಭರ್ಜರಿ ಗೆಲುವಿನ ಮೂಲಕ ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕಾಲಿಟ್ಟಿರುವ ಮಾಜಿ ಚಾಂಪಿಯನ್ ನ್ಯೂಜಿಲೆಂಡ್, ಸತತ 2ನೇ ಗೆಲುವಿನ ಕಾತರದಲ್ಲಿದೆ. ತಂಡಕ್ಕೆ ಸೋಮವಾರ ಬಾಂಗ್ಲಾದೇಶ ಸವಾಲು ಎದುರಾಗಲಿದೆ. ಕಿವೀಸ್ ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿ ಯಲ್ಲಿ ಅಗ್ರ-2ಸ್ಥಾನ ಕಾಯ್ದುಕೊಳ್ಳುವುದರ ಜೊತೆಗೆ, ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಅಲ್ಲದೆ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ.
ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಬಾಂಗ್ಲಾವನ್ನು ಮಣಿಸುವ ಯೋಜನೆಯಲ್ಲಿದೆ. ಮತ್ತೊಂದೆಡೆ ಭಾರತ ವಿರುದ್ಧ ಸೋತಿರುವ ಬಾಂಗ್ಲಾದೇಶಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ, ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ತಂಡಕ್ಕೆ ಗೆಲುವು ಅತ್ಯಗತ್ಯ. ಒಂದು ವೇಳೆ ಸೋತರೆ ತಂಡ ನಾಕೌಟ್ ರೇಸ್‌ನಿಂದಲೇ ಹೊರಬೀಳುವ ಸಾಧ್ಯತೆಯಿದೆ. ತಂಡದ ಬ್ಯಾಟಿಂಗ್ ವಿಭಾಗ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.
ಇದನ್ನೂ ಓದಿ: ಪಾಕಿಸ್ತಾನ ಮಣಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ ಭಾರತ
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ
ಮತ್ತೆ ಮಂಡಿಯೂರಿದ ಪಾಕ್: ಗೆಲುವು ನಮ್ದೇ
ಕ್ರಿಕೆಟ್ ಜಗತ್ತಿನ ಕುತೂಹಲ ಕೆರಳಿಸಿದ್ದ, ಬದ್ಧವೈರಿ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಗೆದ್ದಿದೆ. ದುಬೈನಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ಭಾರತ ಪರಾಕ್ರಮ ಮೆರೆದರೆ, ಪಾಕ್ ಅಕ್ಷರಶಃ ಬರ್ನ್ ಆಗಿದೆ. ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿತು. ಆದರೆ ಆತಿಥ್ಯ ರಾಷ್ಟ್ರ ಪಾಕ್ ಸೆಮಿಫೈನಲ್ ರೇಸ್‌ನಿಂದಲೇ ಹೊರಬೀಳುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಭಾರತ 2 ಪಂದ್ಯಗಳಲ್ಲಿ ಗೆದ್ದು, ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಇದೆ. ತಂಡ ನ್ಯೂಜಿಲೆಂಡ್ ವಿರುದ್ಧ ಸೋತರೂ ಸೆಮಿಫೈನಲ್‌ಗೇರುವ ಸಾಧ್ಯತೆ ಹೆಚ್ಚು. ಅತ್ತ ಪಾಕ್ ಸತತ 2ನೇ ಸೋಲು ಕಂಡಿತು. ಇನ್ನು ಬಾಂಗ್ಲಾ ವಿರುದ್ಧ ಗೆದ್ದರೂ ತಂಡ ಸೆಮಿಫೈನಲ್‌ಗೇರಲು ಸಾಧ್ಯವಿಲ್ಲ. ಹೀಗಾಗಿ ಹಾಲಿಚಾಂಪಿಯನ್ ಪಾಕಿಸ್ತಾನ ತಂಡದ ಸೆಮೀಸ್ ಕನಸು ಗ್ರೂಪ್ ಹಂತದಲ್ಲೇ ಭಗ್ನವಾಗಿದೆ.
ಇದನ್ನೂ ಓದಿ: ದುಬೈನಲ್ಲಿ ಜಸ್ಪ್ರೀತ್ ಬುಮ್ರಾ ಎಂಟ್ರಿ! ಭಾರತೀಯ ಆಟಗಾರರು ಖುಷ್!
ಭಾರತಕ್ಕೆ ಭಾನುವಾರ ಕಿವೀಸ್ ವಿರುದ್ಧ ಪಂದ್ಯ
ಭಾರತ ತಂಡ ಗುಂಪು ಹಂತದ ಮುಂದಿನ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಬಾಂಗ್ಲಾದೇಶ ವಿರುದ್ಧ ಸೋಮವಾರ ನ್ಯೂಜಿಲೆಂಡ್ ಗೆದ್ದರೆ, ಆಗ ಭಾರತ-ನ್ಯೂಜಿಲೆಂಡ್ ಪಂದ್ಯ ಔಪಚಾರಿಕ ಎನಿಸಲಿದೆ. ಉಭಯ ತಂಡಗಳೂ ಸೆಮಿಫೈನಲ್‌ಗೇರಲಿರುವುದರಿಂದ ಗುಂಪಿನಲ್ಲಿ ಅಗ್ರಸ್ಥಾನಕ್ಕಾಗಿ ಸೆಣಸಾಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.