ಮನಿ ಗೇಮಿಂಗ್‌ ಬ್ಯಾನ್‌ಗೆ ಕ್ರಿಕೆಟ್‌ ಆರ್ಥಿಕತೆ ತಲ್ಲಣ! ₹10,000 ಕೋಟಿ ನಷ್ಟ!

Naveen Kodase   | Kannada Prabha
Published : Aug 27, 2025, 08:49 AM IST
Dream 11

ಸಾರಾಂಶ

ಆನ್‌ಲೈನ್ ಗೇಮಿಂಗ್ ನಿಷೇಧದಿಂದ ಕ್ರಿಕೆಟ್ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. ಜಾಹೀರಾತು, ಪ್ರಾಯೋಜಕತ್ವದಿಂದ ಬರುತ್ತಿದ್ದ ಆದಾಯ ಕಡಿಮೆಯಾಗಲಿದ್ದು, ಐಪಿಎಲ್ ತಂಡಗಳು ಮತ್ತು ಆಟಗಾರರ ಮೇಲೆ ಪರಿಣಾಮ ಬೀರಲಿದೆ.

ನವದೆಹಲಿ: ನೈಜ ಹಣವಿಟ್ಟು ಆಡುವ ಎಲ್ಲಾ ರೀತಿಯ ಆನ್‌ಲೈನ್‌ ಗೇಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದರಿಂದ ಕೇವಲ ಬಿಸಿಸಿಐಗೆ ಮಾತ್ರ ನಷ್ಟವಲ್ಲ. ಅದು ಇಡೀ ಕ್ರಿಕೆಟ್‌ ಆರ್ಥಿಕತೆಯನ್ನೇ ತಲ್ಲಣಗೊಣಿಸಲಿದೆ. ಐಪಿಎಲ್‌ ಫ್ರಾಂಚೈಸಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಮತ್ತು ಭಾರತೀಯ ಕ್ರಿಕೆಟಿಗರಿಗೂ ಭಾರೀ ಹೊಡೆತ ನೀಡಲಿದೆ. ತಜ್ಞರು ಹೇಳುವ ಪ್ರಕಾರ, ಜಾಹೀರಾತು ಉದ್ಯಮವು ವಾರ್ಷಿಕವಾಗಿ 8000ದಿಂದ 10000 ಕೋಟಿವರೆಗೂ ನಷ್ಟ ಅನುಭವಿಸಲಿದೆ.

ಭಾರತೀಯ ತಂಡದ ಜೆರ್ಸಿ ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದಿದೆ. ಸಾಂಪ್ರದಾಯಿಕವಾಗಿ ಕಾರ್ಪೊರೇಟ್‌ಗಳು ಮತ್ತು ಜಾಹೀರಾತುದಾರರಿಗೆ ಅಂಟಿಕೊಂಡಿರುವ ಬಿಸಿಸಿಐ, ಶೀಘ್ರದಲ್ಲೇ ಈ ಹೊಡೆತದಿಂದ ಚೇತರಿಸಿಕೊಳ್ಳಬಹುದು. ಏಷ್ಯಾಕಪ್‌ಗೂ ಮುನ್ನವೇ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳಬಹುದು. ಆದರೆ ರಿಯಲ್ ಮನಿ ಗೇಮಿಂಗ್ ನಿಷೇಧ ಇಡೀ ಕ್ರಿಕೆಟ್‌ ವಲಯವನ್ನೇ ಅತಂತ್ರಗೊಳಿಸುವುದು ಖಚಿತ.

ಆಟಗಾರರ ಮೇಲೆ ಪರಿಣಾಮ

ಗೇಮಿಂಗ್ ಕಂಪನಿಗಳು ಜಾಹೀರಾತುಗಳಿಗೆ ಭಾರೀ ಪ್ರಮಾಣದಲ್ಲಿ ಖರ್ಚು ಮಾಡುತ್ತವೆ. ಐಪಿಎಲ್‌ನಲ್ಲಿ ಆಡುವ ಬಹುತೇಕ ಭಾರತೀಯ ಕ್ರಿಕೆಟಿಗರು ರಿಯಲ್‌ ಮನಿ ಗೇಮಿಂಗ್ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ವಿರಾಟ್ ಕೊಹ್ಲಿ, ಎಂ.ಎಸ್‌.ಧೋನಿ, ರೋಹಿತ್‌ ಶರ್ಮಾ ಹೀಗೆ ಸ್ಟಾರ್‌ಗಳಿಂದ ಶುರುವಾಗಿ, ಯುವ ಆಟಗಾರರವರೆಗೂ ಹಲವರು ಗೇಮಿಂಗ್‌ ಕಂಪೆನಿಗಳ ಜೊತೆ ಸಂಬಂಧ ಹೊಂದಿದ್ದಾರೆ. ಆದರೆ ಈಗ ನಿಷೇಧದಿಂದಾಗಿ ಐಪಿಎಲ್‌ ತಂಡಗಳು, ಆಟಗಾರರು ಮಾಡಿಕೊಂಡಿರುವ ಒಪ್ಪಂದಗಳು ಮುರಿದು ಬೀಳಲಿವೆ.

ರೋಹಿತ್‌, ಬುಮ್ರಾ, ಕೆ.ಎಲ್‌.ರಾಹುಲ್, ರಿಷಭ್‌ ಪಂತ್, ಹಾರ್ದಿಕ್‌, ಕೃನಾಲ್ ಪಾಂಡ್ಯ ಸೇರಿ ಪ್ರಮುಖರು ಡ್ರೀಮ್‌ 11 ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸೌರವ್‌ ಗಂಗೂಲಿ, ಶುಭ್‌ಮನ್‌ ಗಿಲ್‌, ಜೈಸ್ವಾಲ್‌, ಗಾಯಕ್ವಾಡ್‌, ರಿಂಕು ಸಿಂಗ್‌ ಸೇರಿ ಹಲವರು ಮೈ11 ಸರ್ಕಲ್‌ನ ಪ್ರಚಾರಕರು. ಉಳಿದಂತೆ ವಿರಾಟ್‌ ಕೊಹ್ಲಿ ಎಂಪಿಎಲ್‌, ಧೋನಿ ವಿನ್ಜೋ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಕೊಹ್ಲಿ ವಾರ್ಷಿಕವಾಗಿ 10ರಿಂದ 12 ಕೋಟಿ ರು, ಧೋನಿ, ರೋಹಿತ್‌ ಅಂದಾಜು 6ರಿಂದ 7 ಕೋಟಿ ರು. ಪಡೆಯುತ್ತಿದ್ದಾರೆ. ಇತರ ಕ್ರಿಕೆಟಿಗರಿಗೆ ವಾರ್ಷಿಕ ₹1 ಕೋಟಿ ಆದಾಯ ಬರುತ್ತದೆ. ಒಟ್ಟಾರೆಯಾಗಿ ಭಾರತೀಯ ಕ್ರಿಕೆಟಿಗರು ಮನಿ ಗೇಮಿಂಗ್‌ ಜಾಹೀರಾತು, ಪ್ರಚಾರ ಮೂಲಕ ವಾರ್ಷಿಕ 150ರಿಂದ 200 ಕೋಟಿ ರು. ಗಳಿಸುತ್ತಿದ್ದಾರೆ. ಆದರೆ ಗೇಮಿಂಗ್‌ ನಿಷೇಧದಿಂದಾಗಿ ಆಟಗಾರರು ಈ ಹಣ ಕಳೆದುಕೊಳ್ಳಲಿದ್ದಾರೆ.

ಐಪಿಎಲ್‌ ಮೇಲೆ ಭಾರೀ ಹೊಡೆತ

ಮನಿ ಗೇಮಿಂಗ್‌ ನಿಷೇಧ ಮೊದಲ ಹೊಡೆತ ನೀಡಿದ್ದು ಬಿಸಿಸಿಐಗೆ. ಆದರೆ ಶೀಘ್ರದಲ್ಲೇ ಐಪಿಎಲ್‌, ಫ್ರಾಂಚೈಸಿಗಳಿಗೂ ಇದರಿಂದ ನಷ್ಟವಾಗಲಿದೆ. ಮೈ11 ಸರ್ಕಲ್‌ ಐಪಿಎಲ್‌ನ ಸಹ ಪ್ರಾಯೋಜಕತ್ವ ಹೊಂದಿದ್ದು, ವಾರ್ಷಿಕವಾಗಿ ಬಿಸಿಸಿಐಗೆ ₹125 ಕೋಟಿ ಪಾವತಿಸುತ್ತಿದೆ. ಇದರ ಒಪ್ಪಂದ ಅವಧಿ ಇನ್ನೂ 3 ವರ್ಷವಿದೆ. ಅಂದರೆ ಈ ಹಣ ಬಿಸಿಸಿಐಗೆ ಸಿಗಲ್ಲ.

ಇದರ ಹೊರತಾಗಿ ಕೆಕೆಆರ್‌, ಲಖನೌ, ಸನ್‌ರೈಸರ್ಸ್‌ ಸೇರಿ ಕೆಲ ತಂಡಗಳು ಮನಿ ಗೇಮಿಂಗ್‌ ಮೂಲಕ ವಾರ್ಷಿಕ 10ರಿಂದ 20 ಕೋಟಿವರೆಗೂ ಗಳಿಸುತ್ತದೆ. ಅದು ಇನ್ನು ಸಿಗುವುದಿಲ್ಲ. ಉಳಿದಂತೆ ರಾಜ್ಯ ಮಟ್ಟದ ಟೂರ್ನಿಗಳು, ಲೆಜೆಂಡ್ಸ್‌ ಲೀಗ್‌ಗೂ ಹಣ ನಷ್ಟವಾಗಲಿದೆ.

ಗೇಮಿಂಗ್‌ ನಿಷೇಧದಿಂದಾಗಿ ಜಾಹೀರಾತು ಉದ್ಯಮವು ವರ್ಷಕ್ಕೆ ಸುಮಾರು 8,000-10,000 ಕೋಟಿ ರು. ನಷ್ಟವನ್ನು ಅನುಭವಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ‘ಒಟ್ಟಾರೆ ಜಾಹೀರಾತಿನಲ್ಲಿ ಈ ಗೇಮಿಂಗ್ ಕಂಪನಿಗಳು ಮಾರುಕಟ್ಟೆಯ ಸುಮಾರು 7-8 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ. ಅದರಲ್ಲಿ ಸುಮಾರು 80 ಪ್ರತಿಶತ ಕಣ್ಮರೆಯಾಗುತ್ತದೆ. ಏಕೆಂದರೆ ನೈಜ ಹಣದ ಗೇಮಿಂಗ್ ಒಟ್ಟಾರೆ ಗೇಮಿಂಗ್ ಮಾರುಕಟ್ಟೆಯಲ್ಲಿ 75-80 ಪ್ರತಿಶತದಷ್ಟಿದೆ. ಒಟ್ಟು ಜಾಹೀರಾತು ವೆಚ್ಚಗಳಲ್ಲಿ ಸರಿಸುಮಾರು 7-8 ಪ್ರತಿಶತ ಮತ್ತು ಡಿಜಿಟಲ್ ಜಾಹೀರಾತು ವೆಚ್ಚಗಳಲ್ಲಿ ಸುಮಾರು 15-20 ಪ್ರತಿಶತವು ಸಹ ಕಣ್ಮರೆಯಾಗುತ್ತದೆ’ ಎಂದು ಎಲಾರಾ ಕ್ಯಾಪಿಟಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕರಣ್ ಟೌರಾನಿ ಹೇಳಿದ್ದಾರೆ.

‘ನಿಷೇಧದಿಂದಾಗಿ ಆಟಗಾರರಿಗೆ ಹೊಡೆತ ಬೀಳುತ್ತದೆ. ಅವರ ಬ್ರಾಂಡ್ ಮೌಲ್ಯ ಮತ್ತು ಆದಾಯ ಖಂಡಿತಾ ಕುಸಿಯುತ್ತದೆ. ಆಟಗಾರರು ಬಹು ಉತ್ಪನ್ನಗಳ ಜಾಹೀರಾತು ಹೊಂದಿದ್ದರೂ, ಗೇಮಿಂಗ್ ವಿಭಾಗವು ಅವರಿಗೆ ಪ್ರಮುಖವಾದದ್ದು. ಇದರಿಂದ ಅವರು ಗಳಿಕೆಯಲ್ಲಿ ಶೇಕಡಾ 20-25ರಷ್ಟು ಕಡಿಮೆಯಾಗಬಹುದು. ಒಟ್ಟಾರೆಯಾಗಿ ಕ್ರಿಕೆಟ್‌ ಆರ್ಥಿಕತೆಯಲ್ಲಿ 8000-10000 ಕೋಟಿ ನಷ್ಟವಾಗಬಹುದು’ ಎಂದು ತಜ್ಞರು ಅಂದಾಜಿಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ