ಸಚಿ​ನ್‌ ಸಾಮರ್ಥ್ಯ ಟೆಸ್ಟ್‌ ಮಾಡಿದ್ದ ಕಪಿಲ್!

By Kannadaprabha News  |  First Published Oct 21, 2019, 11:36 AM IST

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಿತ್ರ ತೆರೆಕಂಡು ವರ್ಷಗಳೇ ಕಳೆದಿವೆ, ಇದೀಗ ಸಚಿನ್ ಕ್ರಿಕೆಟ್‌ ಅಂಕಿ-ಅಂಶ ತಜ್ಞ, ಲೇಖಕ ಚನ್ನಗಿರಿ ಕೇಶವಮೂರ್ತಿ ಅವರು ಬರೆದಿರುವ ‘ಭಾರತ ರತ್ನ ಸಚಿನ್‌ ತೆಂಡುಲ್ಕರ್‌’ ಜೀವನ ಕಥನ ಓದುಗರಿಗೆ ಕುತೂಹಲವವನ್ನು ನೀಗಿಸಲು ರೆಡಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ವರದಿ: ಗಣೇಶ್‌ ಪ್ರಸಾದ್‌ ಕುಂಬ್ಳೆ

ಬೆಂಗಳೂರು[ಅ.21]: 41 ಬಾರಿಯ ರಣಜಿ ಚಾಂಪಿಯನ್‌, ಟೀಂ ಇಂಡಿಯಾಗೆ ಸಾಲುಗಟ್ಟಲೆ ಕ್ರಿಕೆಟಿಗರನ್ನು ಕೊಟ್ಟ ಮುಂಬೈ ತಂಡದಲ್ಲಿ ಚಾನ್ಸ್‌ ಗಿಟ್ಟಿಸಿಕೊಳ್ಳಬೇಕೆಂದರೆ ಸುಲಭದ ಮಾತಲ್ಲ. ಬಹಳ ವರ್ಷ ಬೆವರು ಬಸಿಯಬೇಕು. ಅಂಥದ್ದರಲ್ಲಿ 15 ವರ್ಷದ ಬಾಲಕ ಸಚಿನ್‌ 1988ರಲ್ಲಿ ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾಗಿದ್ದರು. ಅಂದಿನ ಮುಂಬೈ ಹಾಗೂ ಭಾರತ ತಂಡದ ನಾಯಕರಾಗಿದ್ದ ದಿಲೀಪ್‌ ವೆಂಗ್‌ಸರ್ಕಾರ್‌ಗೆ ಈ ಹೈಸ್ಕೂಲ್ ಹುಡುಗ ಸಮರ್ಥ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನ. ಹೀಗಾಗಿ ಅಂತಿಮ 11ರಲ್ಲಿ ಸೇರಿಸಿಕೊಳ್ಳುವ ಮೊದಲು ಕಪಿಲ್ ದೇವ್‌ ಬಳಿ ಸಚಿನ್‌ಗೆ ಬೌಲಿಂಗ್‌ ಮಾಡಿಸಿ ಪರೀಕ್ಷಿಸಲು ಮುಂದಾದರು. ಕಪಿಲ್ ಪ್ರಾರಂಭದಲ್ಲಿ ಸಣ್ಣ ರನ್‌ ಅಪ್‌ನಲ್ಲಿ ಬೌಲಿಂಗ್‌ ನಡೆಸಿದರು. ಸಚಿನ್‌ ಅದಕ್ಕೆ ಬಗ್ಗುವವನಲ್ಲ ಎಂದು ಅರಿತಾಗ ತಮ್ಮ ಎಂದಿನ ರನ್‌ ಅಪ್‌ನಲ್ಲಿ ವೇಗದ ದಾಳಿಗೆ ಇಳಿದರು. ಆಗಲೂ ಸಚಿನ್‌ ಲೀಲಾಜಾಲವಾಗಿ ಆಡುವುದನ್ನು ನೋಡಿದ ಮೇಲೆ ವೆಂಗ್‌ಸರ್ಕಾರ್‌, ಸಚಿನ್‌ ಸಮರ್ಥ ಮಾತ್ರ ಅಲ್ಲ ಅಸಾಮಾನ್ಯ ಎಂಬುದನ್ನು ಖಾತ್ರಿ ಮಾಡಿಕೊಂಡರಂತೆ!

Latest Videos

undefined

ವಿಜಯ್‌ ಹಜಾರೆ ಟ್ರೋಫಿ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಇದು ಕ್ರಿಕೆಟ್‌ ಅಂಕಿ-ಅಂಶ ತಜ್ಞ, ಲೇಖಕ ಚನ್ನಗಿರಿ ಕೇಶವಮೂರ್ತಿ ಅವರು ಬರೆದಿರುವ ‘ಭಾರತ ರತ್ನ ಸಚಿನ್‌ ತೆಂಡುಲ್ಕರ್‌’ ಜೀವನ ಕಥನದಲ್ಲಿ ಬರುವ ಸಚಿನ್‌ ಬದುಕಿನ ಒಂದು ಘಟನೆ. ಹೊರಜಗತ್ತಿಗೆ ತಿಳಿಯದ ಇಂತಹ ಅನೇಕ ಕುತೂಹಲಕಾರಿ ಸಂಗತಿಗಳನ್ನು ಲೇಖಕರು ಸಂಗ್ರಹಿಸಿ ನೀಡಿದ್ದಾರೆ.

ಸಚಿನ್‌ ಮುನ್ನುಡಿ ಇದರ ವಿಶೇಷ!

ಮಾಸ್ಟರ್‌ ಬ್ಲಾಸ್ಟರ್‌ ಬಗ್ಗೆ ಅಷ್ಟೂ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಲೇಖನಗಳು ಬಂದಾಗಿವೆ. ಆತ್ಮಚರಿತ್ರೆಯೂ ಪ್ರಕಟವಾಗಿ ಕೆಲ ವರ್ಷಗಳೇ ಉರುಳಿದವು. ಸಿನಿಮಾವೂ ಬಂದ ಮೇಲೆ ಆ ಮೇರು ಪ್ರತಿಭೆಯ ಬಗ್ಗೆ ಬರೆಯುವುದೇನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಅದ್ಭುತ ನಿರೂಪಣೆಯಿಂದ ಕೂಡಿರುವ ಈ ಪುಸ್ತಕದ ಹೂರಣವನ್ನು ಮೆಚ್ಚಿ ಸ್ವತಃ ಸಚಿನ್‌ ಆವರೇ ಮುನ್ನುಡಿ ಬರೆದಿರುವುದೇ ಇದರ ಮಹತ್ವಕ್ಕೆ ಸಾಕ್ಷಿ. ಈ ಭಾಗ್ಯ ಸಚಿನ್‌ ಬಗ್ಗೆ ಬಂದಿರುವ ಅದೆಷ್ಟೋ ಇಂಗ್ಲಿಷ್‌ ಕೃತಿಗಳಿಗೇ ಸಿಕ್ಕಿಲ್ಲ!

ಮೊದಲೇ ಅಂದಹಾಗೇ ಇದು ಚನ್ನಗಿರಿ ಕೇಶವಮೂರ್ತಿಯವರು ಸಚಿನ್‌ ಬಗ್ಗೆ ಸ್ವತಃ ಮಾಹಿತಿ ಕಲೆ ಹಾಕಿ ಬರೆದ ಜೀವನ ಕಥನವೇ ಹೊರತು ಸಚಿನ್‌ ಆತ್ಮಚರಿತ್ರೆ Playing it my Wayಯ ಅನುವಾದವಲ್ಲ. ಸಚಿನ್‌ ಆತ್ಮಕತೆ, ಸಿನಿಮಾಗಳಲ್ಲಿ ಬಂದಿರುವ ಕೆಲವೊಂದು ಸಂಗತಿಗಳು ಇಲ್ಲಿ ಉಲ್ಲೇಖವಾಗಿವೆಯಾದರೂ ನಿರೂಪಣೆಯ ಶೈಲಿಯಿಂದಾಗಿ ಆಪ್ತವಾಗುತ್ತವೆ.

ಸಚಿನ್‌ನ ಎರಡೂವರೆ ದಶಕದ ಕ್ರಿಕೆಟ್‌ ಬದುಕಿನ ಜೊತೆಗೇ ಆತನ ಬಾಲ್ಯ, ಕುಟುಂಬ, ಓರಗೆಯ ಗೆಳೆಯರು, ಕ್ರಿಕೆಟ್‌ ಪ್ರೀತಿ, ಅಂಜಲಿ ಜೊತೆ ಪ್ರೇಮಾಂಕುರ, ವಿವಾಹ ಇತ್ಯಾದಿಗಳ ಸಮಗ್ರ ಚಿತ್ರಣವನ್ನು ಈ ಗ್ರಂಥ ಕಣ್ಣಿಗೆ ಕಟ್ಟಿಕೊಡುತ್ತದೆ. ಗಲ್ಲಿ ಕ್ರಿಕೆಟ್‌ ಬದುಕಿನಿಂದ ಹಿಡಿದು ರಣಜಿ, ಕೌಂಟಿ, ಟೆಸ್ಟ್‌, ಏಕದಿನ, ಐಪಿಎಲ್ ಕ್ರಿಕೆಟ್‌ವರೆಗಿನ ಆಯ್ದ ಘಟನಾವಳಿಗಳ ಕ್ರೋಢೀಕರಣವಿದೆ.

ಇವು ನಿಮಗೆ ಗೊತ್ತೇ?

- 1990ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಸಚಿನ್‌ಗೆ ಶಾಂಪೇನ್‌ ನೀಡಲಾಗಿತ್ತು. ಆದರೆ 18 ವರ್ಷವಾಗದ್ದರಿಂದ ಸಚಿನ್‌ ಅದನ್ನು ಅಂದು ಓಪನ್‌ ಮಾಡುವಂತಿರಲಿಲ್ಲ. 1998ರಲ್ಲಿ ಮಗಳು ಸಾರಾ ಹುಟ್ಟುಹಬ್ಬದಂದು ಸಚಿನ್‌ ಆ ಶಾಂಪೇನ್‌ ಬಾಟಲ್ ತೆರೆದರಂತೆ!

- ಒಮ್ಮೆ ಸಚಿನ್‌ ವಾಂಖೇಡೆ ಸ್ಟೇಡಿಯಂನಲ್ಲಿ ಸ್ಥಳೀಯ ಪಂದ್ಯವೊಂದನ್ನು ವೀಕ್ಷಿಸುತ್ತಿದ್ದರಂತೆ. ಆಗ ಅಲ್ಲಿಗೆ ಬಂದ ಅಚ್ರೇಕರ್‌, ‘ಇತರರಿಗಾಗಿ ಚಪ್ಪಾಳೆ ಹೊಡೆವ ಮುನ್ನ ನೀನು ಕಷ್ಟ ಪಟ್ಟು ಪ್ರ್ಯಾಕ್ಟೀಸ್‌ ಮಾಡು. ವಿಶ್ವದೆಲ್ಲೆಡೆ ನಿನಗೆ ಚಪ್ಪಾಳೆ ಗಿಟ್ಟುತ್ತದೆ’ ಎಂದು ಕ್ಲಾಸ್‌ ತೆಗೆದುಕೊಂಡಿದ್ದರಂತೆ!

- ಸಚಿನ್‌ ಬಾಲ್ಯದಲ್ಲಿ ಮುಂಬೈನ ಸ್ಥಳೀಯ ಪಂದ್ಯಾವಳಿಯ ಮೊದಲ ಎರಡು ಅಭ್ಯಾಸ ಪಂದ್ಯಗಳಲ್ಲಿ ಸೊನ್ನೆ ರನ್‌ಗೆ ಔಟಾಗಿದ್ದರು. ಕಾಕತಾಳೀಯವೆಂಬಂತೆ ಮೊದಲೆರಡು ಏಕದಿನ ಪಂದ್ಯಗಳಲ್ಲೂ ಡಕ್‌ಔಟ್‌!

- ಮುಂಬೈ ಕ್ರಿಕೆಟ್‌ ಅಸೋಸಿಯೇಶನ್‌ನ ಬೆಸ್ಟ್‌ ಜೂನಿಯರ್‌ ಕ್ರಿಕೆಟರ್‌ ಪ್ರಶಸ್ತಿ ಸಚಿನ್‌ಗೆ ದೊರಕಿರಲಿಲ್ಲ. ಆಗ ಸಚಿನ್‌ಗೆ ‘ನಿರಾಸೆಗೊಳ್ಳಬೇಡ. ಈ ಪ್ರಶಸ್ತಿ ಪಡೆದಿರುವ ಆಟಗಾರರ ಪಟ್ಟಿಯಿಂದ ಇನ್ನೊಂದು ಹೆಸರು ತಪ್ಪಿಹೋಗಿದೆ. ಆ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಷ್ಟೇನೂ ಕಳಪೆ ಪ್ರದರ್ಶನ ನೀಡಿಲ್ಲ.’ ಎಂಬ ಒಕ್ಕಣೆಯಿದ್ದ ಪತ್ರವೊಂದು ಬಂದಿತ್ತು. ಆ ಪತ್ರ ಬರೆದವರು ಸುನಿಲ್ ಗವಾಸ್ಕರ್‌ ಮತ್ತು ಹಿಂದೆ ಆ ಪಟ್ಟಿಯಿಂದ ಬಿಟ್ಟು ಹೋಗಿದ್ದ ಹೆಸರು ಕೂಡ ಅವರದ್ದೇ ಆಗಿತ್ತು!

- ಶಾರದಾಶ್ರಮ ಶಾಲೆಯ ಬದ್ಧ ವೈರಿ ತಂಡವಾಗಿದ್ದ ಬಾಲಮೋಹನ್‌ ಶಾಲೆಯ ವಿರುದ್ಧ ಸಚಿನ್‌ ಸೊನ್ನೆಗೆ ಔಟಾದಾಗ ಆ ಶಾಲೆಯ ಪ್ರಿನ್ಸಿಪಾಲ್ ಖುಷಿಯಲ್ಲಿ ಶಾಲೆಗೆ ಅರ್ಧ ದಿನ ರಜೆ ಘೋಷಿಸಿದ್ದರಂತೆ!

- ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಪ್ತಾನ ಸಚಿನ್‌ ಜೊತೆ ಬ್ಯಾಟ್‌ ಮಾಡುತ್ತಿದ್ದ ದೊಡ್ಡ ಗಣೇಶ್‌ ಅವರನ್ನು ಔಟ್‌ ಮಾಡಲು ಯತ್ನಿಸಿ ವಿಫಲರಾದ ಅಲನ್‌ ಡೊನಾಲ್ಡ್‌ ಅಸಹನೆಗೊಂಡು ಸ್ಲೆಡ್ಜಿಂಗ್‌ ಮಾಡಲು ಪ್ರಾರಂಭಿಸಿದರಂತೆ. ದೊಡ್ಡ ಗಣೇಶ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಡೊನಾಲ್ಡ್‌ಗೆ ಅಚ್ಚರಿಯಾಗಿತ್ತು. ಆಗ ಡೊನಾಲ್ಡ್‌ ಬಳಿ ಸಚಿನ್‌, ‘ನೀವು ಕನ್ನಡದಲ್ಲಿ ಬೈದರೆ ಮಾತ್ರ ಅವರಿಗೆ ಅರ್ಥವಾಗುತ್ತದೆ’ ಎಂದಿದ್ದರಂತೆ!

- ಸಚಿನ್‌ ಪ್ರತಿವರ್ಷ ಸೆಪ್ಟೆಂಬರ್‌ 5ರಂದು ಮುಂಬೈನಲ್ಲಿದ್ದರೆ ರಮಾಕಾಂತ್‌ ಅಚ್ರೇಕರ್‌ ಬಳಿ ತೆರಳಿ ಗುರು ನಮನ ಅರ್ಪಿಸುತ್ತಿದ್ದರಂತೆ.

- 1998ರಲ್ಲಿ ಪಾಕ್‌ ವಿರುದ್ಧದ ಟೆಸ್ಟ್‌ ಸರಣಿ ವೇಳೆ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌, ‘ಮುಂದಿನ ದಿನಗಳಲ್ಲಿ ನೀನು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದಾಗ ಈ ನಿನ್ನ ಮೊದಲ ನಾಯಕನನ್ನು ಮರೀಬೇಡ’ ಎಂದಿದ್ದರಂತೆ!


ಪುಸ್ತಕದ ಹೆಸರು-ಭಾರತ ರತ್ನ ಸಚಿನ್‌ ಜೀವನ ಕಥನ

ಲೇಖಕರು-ಚನ್ನಗಿರಿ ಕೇಶವಮೂರ್ತಿ

ಪ್ರಕಾಶಕರು-ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್‌

ಬೆಲೆ- 400 ರು.


 

click me!