ಈ ಸಲ ಐಪಿಎಲ್‌ನಲ್ಲಿ ಸ್ಟಾರ್‌ vs ಜಿಯೋ ಸಮರ..! ಟಿವಿ vs ಡಿಜಿಟಲ್‌: ಖರ್ಚೆಷ್ಟು?

By Kannadaprabha NewsFirst Published Mar 18, 2023, 10:57 AM IST
Highlights

16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭ
ಐಪಿಎಲ್‌ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಹಾಗೂ ಜಿಯೋ ನಡುವೆ ಪೈಪೋಟಿ
ಭರ್ಜರಿ ಲಾಭ ಗಳಿಸಲು ಎರಡು ಮಾಧ್ಯಮಗಳ ನಡುವೆ ಪೈಪೋಟಿ

ನವದೆಹಲಿ(ಮಾ.18): 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲಲು 10 ತಂಡಗಳು ಸೆಣಸಿದರೆ, ಪಂದ್ಯಾವಳಿ ಆರಂಭಕ್ಕೂ ಮೊದಲೇ ಪ್ರೇಕ್ಷಕರನ್ನು ಗೆಲ್ಲಲು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಾದ ಸ್ಟಾರ್‌ ಸ್ಪೋರ್ಟ್ಸ್‌ ಹಾಗೂ ಜಿಯೋ(ವಯಾಕಾಂ 18) ಸ್ಪರ್ಧೆಗಿಳಿದಿವೆ.

ಕಳೆದ ವರ್ಷ ನಡೆದಿದ್ದ ಐಪಿಎಲ್‌ ಪ್ರಸಾರ ಹಕ್ಕು ಹರಾಜಿನಲ್ಲಿ ಟೀವಿ ಪ್ರಸಾರ ಹಕ್ಕನ್ನು ಡಿಸ್ನಿ ಸ್ಟಾರ್‌ ಸಂಸ್ಥೆಯು ವಾರ್ಷಿಕ 4715 ಕೋಟಿ ರು.ಗೆ ಖರೀದಿಸಿದರೆ, ಡಿಜಿಟೆಲ್‌ ಪ್ರಸಾರ ಹಕ್ಕನ್ನು ಜಿಯೋ ವಾರ್ಷಿಕ 4751.6 ಕೋಟಿ ರು.ಗೆ ಖರೀದಿಸಿತ್ತು. ಬಿಸಿಸಿಐಗೆ ಬೃಹತ್‌ ಮೊತ್ತ ಪಾವತಿಸಬೇಕಿರುವ ಈ ಸಂಸ್ಥೆಗಳು ಹಣ ಗಳಿಸಬೇಕಿದ್ದರೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರ ಬೆಂಬಲವೂ ಬೇಕಿದೆ.

ಈ ಸಂಸ್ಥೆಗಳು ಒಬ್ಬರನ್ನೊಬ್ಬರು ಮೀರಿಸಲು ಭರ್ಜರಿ ಪ್ರಚಾರಕ್ಕಿಳಿದಿವೆ. ಜಿಯೋ ಸಂಸ್ಥೆಯು ದಿಗ್ಗಜ ಎಂ.ಎಸ್‌.ಧೋನಿ ಜೊತೆ ಟಿ20ಯ ತಾರೆ ಸೂರ್ಯಕುಮಾರ್‌ ಯಾದವ್‌ರನ್ನು ರಾಯಭಾರಿಯಾಗಿ ನೇಮಿಸಿಕೊಂಡರೆ, ಸ್ಟಾರ್‌ ಸ್ಪೋರ್ಟ್ಸ್ ಅತ್ಯಂತ ಜನಪ್ರಿಯ ಕ್ರಿಕೆಟಿಗ ವಿರಾಟ್‌ ಕೊಹ್ಲಿಯನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಜಿಯೋ ತನ್ನ ಪ್ರೊಮೋದಲ್ಲಿ ‘ಟೀವಿ ಬಂದ್‌ ಮಾಡಿ, ಆನ್‌ಲೈನ್‌ನಲ್ಲಿ 360 ಡಿಗ್ರಿ ಅನುಭವದೊಂದಿಗೆ ಐಪಿಎಲ್‌ ವೀಕ್ಷಿಸಿ’ ಎಂದು ಧೋನಿಯಿಂದ ಹೇಳಿಸುತ್ತಿದ್ದರೆ, ಇದಕ್ಕೆ ಕೊಹ್ಲಿ ಕಾಣಿಸಿಕೊಂಡಿರುವ ಪ್ರೋಮೋದಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ‘ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವಂಥ ಅನುಭವ ಟೀವಿಯಲ್ಲಿ ಮಾತ್ರ ಸಾಧ್ಯ’ ಎಂದು ತಿರುಗೇಟು ನೀಡಿದೆ.

ಜಾಹೀರಾತಿಗೆ ಜಿದ್ದಾಜಿದ್ದಿ!

ಕಳೆದ ವರ್ಷ ಟೀವಿ ಹಾಗೂ ಡಿಜಿಟೆಲ್‌ ಎರಡೂ ಹಕ್ಕು ಸ್ಟಾರ್‌ ಬಳಿ ಇತ್ತು. ಟೂರ್ನಿ ಆರಂಭಗೊಳ್ಳುವ 2-3 ವಾರ ಮೊದಲೇ ಜಾಹೀರಾತು ಸ್ಲಾಟ್‌ಗಳೆಲ್ಲಾ ಭರ್ತಿಯಾಗಿದ್ದವು. ಆದರೆ ಈ ಬಾರಿ ಸ್ಪರ್ಧೆ ಹೆಚ್ಚಿದೆ. ಸ್ಟಾರ್‌ ಹಾಗೂ ಜಿಯೋ ಜಾಹೀರಾತುದಾರರಿಗೆ ಹಲವು ರಿಯಾಯಿತಿ ಆಫರ್‌ಗಳನ್ನು ನೀಡುತ್ತಿವೆ ಎನ್ನಲಾಗಿದೆ. ಸ್ಟಾರ್‌ ಸಂಸ್ಥೆಯು ಮುಖ್ಯ ಪ್ರಾಯೋಜಕರಿಂದ ಅಂದಾಜು 150-160 ಕೋಟಿ ರು. ನಿರೀಕ್ಷಿಸುತ್ತಿದ್ದು, ಸಹಾಯಕ ಪ್ರಾಯೋಜಕರಿಂದ 65-100 ಕೋಟಿ ರು. ಗಳಿಸಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.

ವಯಸ್ಸು 41 ಆದರೂ ಧೋನಿ ತೋಳ್ಬಲಕ್ಕೆ ಸಾಟಿಯಿಲ್ಲ..! ನೆಟ್ಸ್‌ನಲ್ಲಿ ಮಹಿ ಭರ್ಜರಿ ಪ್ರಾಕ್ಟೀಸ್

ಮತ್ತೊಂದೆಡೆ ಜಿಯೋ ದೊಡ್ಡ ಪ್ರಾಯೋಜಕರಿಂದ 70-100 ಕೋಟಿ ರು., ಸಣ್ಣ ಸಣ್ಣ ಸಂಸ್ಥೆಗಳ ಪ್ರಾಯೋಜಕತ್ವದಿಂದ ತಲಾ 5-10 ಕೋಟಿ ರು. ನಿರೀಕ್ಷಿಸುತ್ತಿದೆ ಎಂದು ಹೇಳಲಾಗಿದೆ. ಜಿಯೋ ಸಂಸ್ಥೆಯು ಜಾಹೀರಾತಿನಿಂದ ಅಂದಾಜು 3700 ಕೋಟಿ ರು. ಸಂಪಾದಿಸುವ ಗುರಿ ಹಾಕಿಕೊಂಡಿದ್ದು, ಸ್ಟಾರ್‌ ಸಂಸ್ಥೆ ಕಳೆದ ವರ್ಷದಂತೆ 3500 ಕೋಟಿ ರು. ಗಳಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಟೀವಿ-ಡಿಜಿಟೆಲ್‌: ಪ್ರೇಕ್ಷಕರಿಗೆ ಖರ್ಚೆಷ್ಟು?

ಸ್ಟಾರ್‌ ಸ್ಪೋರ್ಟ್ಸ್‌ ಎಚ್‌ಡಿ ವಾಹಿನಿಯ ಒಂದು ತಿಂಗಳ ಚಂದಾದಾರಿಕೆ ಬಹುತೇಕ ಡಿಟಿಎಚ್‌ಗಳಲ್ಲಿ 19 ರು. ಇದೆ. ಐಪಿಎಲ್‌ 2 ತಿಂಗಳ ಕಾಲ ನಡೆಯಲಿದ್ದು 38 ರು.ಗಳಲ್ಲಿ ಇಡೀ ಟೂರ್ನಿ ವೀಕ್ಷಿಸಬಹುದು. ಜಿಯೋ ಸಂಸ್ಥೆಯು ಜಿಯೋ ಸಿನಿಮಾದಲ್ಲಿ ಉಚಿತ ಪ್ರಸಾರ ಮಾಡಲಿದೆಯಾದರೂ, ಪ್ರತಿ ಪಂದ್ಯವನ್ನು ಎಚ್‌ಡಿ ಗುಣಮಟ್ಟದಲ್ಲಿ ವೀಕ್ಷಿಸಲು ಅಂದಾಜು 1 ಜಿ.ಬಿ. ಡೇಟಾ ಬೇಕಾಗಬಹುದು. ಬಹುತೇಕ ಮೊಬೈಲ್‌ ಪ್ಲ್ಯಾನ್‌ಗಳಲ್ಲಿ ದಿನಕ್ಕೆ ಒಂದು ಜಿ.ಬಿ. ಡೇಟಾ ಲಭ್ಯವಿರಲಿದ್ದು, ಡೇಟಾಗಾಗಿ ಹೆಚ್ಚುವರಿ ಹಣ ಖರ್ಚು ಮಾಡುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಒಂದು ಲೆಕ್ಕಾಚಾರದ ಪ್ರಕಾರ ಟೂರ್ನಿಯ ಎಲ್ಲಾ ಪಂದ್ಯಗಳ ವೀಕ್ಷಣೆಗೆ ಅಂದಾಜು 150ರಿಂದ 200 ರು. ಮೌಲ್ಯದ ಡೇಟಾ ಬಳಕೆಯಾಗಬಹುದು. ಜಿಯೋ ಸಿನಿಮಾದಲ್ಲಿ ಸಂಸ್ಥೆಯು ಹಲವು ಹೊಸ ಆಯ್ಕೆಗಳನ್ನು ನೀಡಿದ್ದು, ಪ್ರತಿ ಎಸೆತವನ್ನು ವಿಭಿನ್ನ ಕ್ಯಾಮೆರಾ ಆ್ಯಂಗಲ್‌ಗಳಿಂದ ವೀಕ್ಷಿಸಬಹುದು. ಜೊತೆಗೆ ಲೈವ್‌ ಅಂಕಿ-ಅಂಶಗಳು ಸಹ ಬೆರಳ ತುದಿಯಲ್ಲೇ ಲಭ್ಯವಿರಲಿದೆ.

click me!