* ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಲು ಪರದಾಡುತ್ತಿದೆ ಮುಂಬೈ ಇಂಡಿಯನ್ಸ್
* 5 ಬಾರಿಯ ಐಪಿಎಲ್ ಚಾಂಪಿಯನ್ ರೋಹಿತ್ ಪಡೆಗೆ ಪದೇ ಪದೇ ಸೋಲು
* ಮುಂಬೈ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಮೇಲೆ ಟೀಕಾಸ್ತ್ರ
ಪುಣೆ(ಏ.14): 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ (5 Time IPL Champion Mumbai Indians) ತಂಡವು 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Mumbai Indians) ಮೊದಲ ಗೆಲುವು ದಾಖಲಿಸಲು ಪರದಾಡುತ್ತಿದೆ. ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ಸತತ 5ನೇ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ಎದುರು ರೋಹಿತ್ ಪಡೆ ಮುಗ್ಗರಿಸುವುದರೊಂದಿಗೆ ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮವಾಗಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡವು ಸತತ ಸೋಲು ಕಾಣುತ್ತಿರುವುದರಿಂದ ರೋಹಿತ್ ಶರ್ಮಾ ನಾಯಕತ್ವದ ಮೇಲೂ ತೂಗುಗತ್ತಿ ನೇತಾಡಲಾರಂಭಿಸಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮಯಾಂಕ್ ಅಗರ್‌ವಾಲ್ (Mayank Agarwal) ನೇತೃತ್ವದ ಪಂಜಾಬ್ ಕಿಂಗ್ಸ್ (Punjab Kings) ಎದುರು 12 ರನ್‌ಗಳ ಅಂತರದ ಆಘಾತಕಾರಿ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಸಾಕಷ್ಟು ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರೂ ರೋಹಿತ್ ಶರ್ಮಾ ನಾಯಕತ್ವದ ಕುರಿತಂತೆ ಟೀಕಾ ಪ್ರಹಾರ ನಡೆಸಲಾರಂಭಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ಶಿಖರ್ ಧವನ್ ಹಾಗೂ ಮಯಾಂಕ್ ಅಗರ್‌ವಾಲ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತ್ತು. ಮುಂಬೈ ಇಂಡಿಯನ್ಸ್ ಬೌಲರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಲು ವಿಫಲರಾಗಿದ್ದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ (Graeme Swann), ಮುಂಬೈ ಇಂಡಿಯನ್ಸ್ ಬೌಲರ್‌ಗಳು ಕಳಪೆ ಪ್ರದರ್ಶನ ತೋರುತ್ತಿದ್ದಾರೆ, ಆದರೆ ಟೀಕೆಗಳೆಲ್ಲವೂ ರೋಹಿತ್ ಶರ್ಮಾ ಮೇಲೆ ಬರುತ್ತಿರುವುದು ವಿಪರ್ಯಾಸ. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಉಳಿದ ಆಟಗಾರರಿಂದ ಸೂಕ್ತ ನೆರವು ಸಿಗುತ್ತಿಲ್ಲ ಎಂದಿದ್ದಾರೆ.
IPL 2022: ಗಾಯದ ಮೇಲೆ ಬರೆ, ರೋಹಿತ್ ಶರ್ಮಾಗೆ 24 ಲಕ್ಷ ರೂ ದಂಡ..!
ರೋಹಿತ್ ಶರ್ಮಾ ನಾಯಕತ್ವದ ಮೇಲೆ ಪ್ರಶ್ನೆಗಳು ಏಳುತ್ತಿರುವುದು ನನ್ನ ಪ್ರಕಾರ ಸರಿಯಲ್ಲ. ನನ್ನ ಪ್ರಕಾರ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿದ್ದಾರೆ. ನಾಯಕ ತನ್ನ ಬೌಲರ್ ಮೇಲೆ ನಂಬಿಕೆಯಿಟ್ಟು ನಾಯಕ ಚೆಂಡು ನೀಡಿದಾಗ, ನಾಯಕ ನಿರೀಕ್ಷೆಯಂತೆ ಬೌಲರ್‌ಗಳು ಬೌಲಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ ಇನಿಂಗ್ಸ್ ಮಧ್ಯದಲ್ಲಿ ಬಂದು ಬೌಲಿಂಗ್ ಮಾಡುವ ಮುನ್ನ, ಮುಂಬೈ ಇಂಡಿಯನ್ಸ್ ಬೌಲರ್‌ಗಳ ಎದುರು ಪಂಜಾಬ್ ತಂಡದ ಬ್ಯಾಟರ್‌ಗಳು ಪ್ರಾಬಲ್ಯ ಮೆರೆದಿದ್ದರು. ಮೊದಲ 10 ಓವರ್‌ಗಳನ್ನು ಮುಂಬೈ ಬೌಲರ್‌ಗಳು ಕಳಪೆ ರೀತಿಯಲ್ಲಿ ಪ್ರದರ್ಶನ ತೋರಿದ್ದರು. ಹೀಗಾಗಿಯೇ ಮೊದಲ ವಿಕೆಟ್‌ಗೆ ಶಿಖರ್ ಧವನ್ ಹಾಗೂ ಮಯಾಂಕ್ ಅಗರ್‌ವಾಲ್ 97 ರನ್‌ಗಳ ಜತೆಯಾಟ ನಿಭಾಯಿಸಲು ಯಶಸ್ವಿಯಾದರು. ಬೌಲರ್‌ಗಳು ಮಾಡಿದ ತಪ್ಪಿಗೆ ರೋಹಿತ್ ಶರ್ಮಾ ಮೇಲೆ ಟೀಕಾಸ್ತ್ರ ಮಾಡುವುದು ಸರಿಯಲ್ಲ ಎಂದು ಸ್ವಾನ್ ಹೇಳಿದ್ದಾರೆ.
ಕೆಲವರು ರೋಹಿತ್ ಶರ್ಮಾ ನಾಯಕತ್ವ ಜವಾಬ್ದಾರಿ ನಿರ್ವಹಿಸಲು ದಣಿದಂತೆ ಕಂಡು ಬರುತ್ತಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್‌ನತ್ತ ಸಂಪೂರ್ಣ ಗಮನ ನೀಡಬೇಕೆಂದರೆ ಕೀರನ್ ಪೊಲ್ಲಾರ್ಡ್‌ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬಿಟ್ಟುಕೊಡುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದರು.