* 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಶಾಕ್
* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ 5ನೇ ಸೋಲು ಕಂಡ ರೋಹಿತ್ ಶರ್ಮಾ ಪಡೆ
* ಪಂಜಾಬ್ ಎದುರಿನ ಪಂದ್ಯದಲ್ಲಿ ಮಂದಗತಿಯ ಬೌಲಿಂಗ್ ಮಾಡಿ ದಂಡದ ಶಿಕ್ಷೆಗೆ ಮುಂಬೈ ಗುರಿ
ನವಿ ಮುಂಬೈ(ಏ.14): 15ನೇ ಆವೃತ್ತಿಯ ಐಪಿಎಲ್ (Indian Premier League) ಟೂರ್ನಿಯಲ್ಲಿ ಸತತ 5ನೇ ಸೋಲು ಕಂಡಿರುವ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಪಂಜಾಬ್ ಕಿಂಗ್ಸ್ (Punjab Kings) ಎದುರಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ರೋಹಿತ್ ಶರ್ಮಾ ಅವರಿಗೆ 24 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಬುಧವಾರ ಸಂಜೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಪಂಜಾಬ್ ಕಿಂಗ್ಸ್ ತಂಡವು 12 ರನ್‌ಗಳ ಅಂತರದ ಗೆಲುವು ದಾಖಲಿಸಿತು.
ಮುಂಬೈ ಇಂಡಿಯನ್ಸ್ ತಂಡವು ಪುಣೆಯ ಎಂಸಿಎ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎದುರು ನಡೆದ ಪಂದ್ಯದಲ್ಲಿ ಮಂದಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಇದು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವು ನಿಧಾನಗತಿ ಬೌಲಿಂಗ್ ಮಾಡಿ (Slow Over Bowling rate) ಪ್ರಮಾದ ಮಾಡಿಕೊಂಡಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ತಪ್ಪಿಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ
ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ 24 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇನ್ನು ತಂಡ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಉಳಿದ ಆಟಗಾರರಿಗೆ 6 ಲಕ್ಷ ರುಪಾಯಿ ಅಥವಾ ಪಂದ್ಯದ ಸಂಭಾವನೆಯ 25% ದಂಡ ರೂಪದಲ್ಲಿ ನೀಡಬೇಕಾಗಿದೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದ ವೇಳೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮೊದಲ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿ 12 ಲಕ್ಷ ರುಪಾಯಿ ದಂಡ ವಿಧಿಸಿದೆ.
ಮುಂಬೈಗೆ 5ನೇ ಪಂದ್ಯದಲ್ಲೂ ಸೋಲು!
ನವಿ ಮುಂಬೈ: ದಿಢೀರ್ ಬ್ಯಾಟಿಂಗ್ ಕುಸಿತ, ಒಬ್ಬ ತಜ್ಞ ಬ್ಯಾಟರ್‌ನ ಕೊರತೆಯಿಂದಾಗಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್‌್ಸ ವಿರುದ್ಧ ಬುಧವಾರ 12 ರನ್‌ಗಳ ಸೋಲು ಅನುಭವಿಸಿತು. ಇದರೊಂದಿಗೆ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಗೆಲುವಿಗಾಗಿ ಮುಂಬೈ ಇನ್ನಷ್ಟುದಿನ ಕಾಯಬೇಕಿದೆ. ಸತತ 5ನೇ ಸೋಲಿನೊಂದಿಗೆ 5 ಬಾರಿ ಚಾಂಪಿಯನ್ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಧವನ್, ಮಯಾಂಕ್‌ರ ಅರ್ಧಶತಕಗಳು, ಜಿತೇಶ್ ಶರ್ಮಾ ಹಾಗೂ ಶಾರುಖ್ ಖಾನ್‌ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 198 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ ರೋಹಿತ್(28) ಹಾಗೂ ಇಶಾನ್ ಕಿಶನ್(03)ರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ, ಯುವ ಬ್ಯಾಟರ್‌ಗಳಾದ ಡೆವಾಲ್ಡ್ ಬ್ರೆವಿಸ್ ಹಾಗೂ ತಿಲಕ್ ವರ್ಮಾ ಅವರ ಆಕರ್ಷಕ ಆಟದ ನೆರವಿನಿಂದ ಚೇತರಿಕೆ ಕಂಡಿತು. ಬ್ರೆವಿಸ್, ಲೆಗ್‌ಸ್ಪಿನ್ನರ್ ಚಹರ್‌ರ ಒಂದೇ ಓವರಲ್ಲಿ 3 ಸಿಕ್ಸರ್ ಸೇರಿ ಒಟ್ಟು 23 ರನ್ ಸಿಡಿಸಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಬ್ರೆವಿಸ್ 25 ಎಸೆತದಲ್ಲಿ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ 49 ರನ್ ಗಳಿಸಿ 11ನೇ ಓವರ್‌ನ ಕೊನೆ ಎಸೆತದಲ್ಲಿ ಔಟಾದಾಗ ಮುಂಬೈನ ಸ್ಕೋರ್ 116 ರನ್.
IPL 2022: ಸಿಎಸ್‌ಕೆ ಭಾರತದ ಅತಿ ಜನಪ್ರಿಯ ಕ್ರೀಡಾ ತಂಡ..!
ದಿಕ್ಕು ಬದಲಿಸಿದ ರನೌಟ್: ತಿಲಕ್ ವರ್ಮಾ(36) ಹಾಗೂ ಕೀರನ್ ಪೊಲ್ಲಾರ್ಡ್(10) ಇಬ್ಬರೂ ರನೌಟ್ ಆಗಿದ್ದು ಮುಂಬೈ ತಂಡವನ್ನು ಸಂಕಷ್ಟಕ್ಕೆ ದೂಡಿತು. ಕೊನೆ 3 ಓವರಲ್ಲಿ ಮುಂಬೈ ಗೆಲುವಿಗೆ 33 ರನ್ ಬೇಕಿತ್ತು. ಸೂರ್ಯಕುಮಾರ್ ಕ್ರೀಸ್‌ನಲ್ಲಿದ್ದ ಕಾರಣ, ಮುಂಬೈ ಜಯದ ಆಸೆ ಕಳೆದುಕೊಂಡಿರಲಿಲ್ಲ. ಆದರೆ ಅಶ್‌ರ್‍ದೀಪ್ 18ನೇ ಓವರಲ್ಲಿ ಕೇವಲ 5 ರನ್ ನೀಡಿ ಒತ್ತಡ ಹೇರಿದರು. 12 ಎಸೆತದಲ್ಲಿ 28 ರನ್ ಬೇಕಿದ್ದಾಗ ರಬಾಡ ಎಸೆದ 19ನೇ ಓವರಲ್ಲಿ ಸೂರ್ಯ ಪ್ರತಿ ಎಸೆತವನ್ನೂ ಬೌಂಡರಿಗಟ್ಟಬೇಕಾದ ಅನಿವಾರ್ಯತೆ ಸಿಲುಕಿ ಔಟಾದರು. ಕೊನೆ ಓವರಲ್ಲಿ ಸ್ಮಿತ್ 3 ವಿಕೆಟ್ ಕಬಳಿಸಿ ಕೇವಲ 9 ರನ್ ನೀಡಿ ತಂಡವನ್ನು ಗೆಲ್ಲಿಸಿದರು.
ಉತ್ತಮ ಆರಂಭ: ಮೊದಲ ವಿಕೆಟ್‌ಗೆ 9.3 ಓವರಲ್ಲಿ 97 ರನ್ ಜೊತೆಯಾಟವಾಡಿ ಮಯಾಂಕ್(52) ಹಾಗೂ ಧವನ್ ಉತ್ತಮ ಆರಂಭ ನೀಡಿದರು. 70 ರನ್ ಗಳಿಸಿ ಧವನ್ ಔಟಾದರು. ಜಿತೇಶ್ 15 ಎಸೆತದಲ್ಲಿ 2 ಬೌಂಡರಿ, 2 ಸಿಕ್ಸರ್‌ನೊಂದಿಗೆ 30 ರನ್ ಸಿಡಿಸಿದರೆ, ಶಾರುಖ್ 6 ಎಸೆತದಲ್ಲಿ 2 ಸಿಕ್ಸರ್‌ನೊಂದಿಗೆ 15 ರನ್ ಚಚ್ಚಿದರು. ಇವರಿಬ್ಬರ ಉಪಯುಕ್ತ ಕೊಡುಗೆಯಿಂದ ಪಂಜಾಬ್ ಉತ್ತಮ ಮೊತ್ತ ದಾಖಲಿಸಿತು.