ICC Awards 2021 : ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿದ್ದಾರೆ ಟೀಂ ಇಂಡಿಯಾ ಅಗ್ರ ಬೌಲರ್!

By Suvarna NewsFirst Published Dec 28, 2021, 7:17 PM IST
Highlights

2021ರ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ನಾಮನಿರ್ದೇಶನ
ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿ ಅಶ್ವಿನ್
ಅಶ್ವಿನ್ ಜೊತೆ ರೇಸ್ ನಲ್ಲಿದ್ದಾರೆ ಜೋ ರೂಟ್, ಕೈಲ್ ಜೇಮಿಸನ್ ಹಾಗೂ ದಿಮುತ್ ಕರುಣರತ್ನೆ

ಬೆಂಗಳೂರು (ಡಿ 28): ಕ್ಯಾಲೆಂಡರ್ ವರ್ಷವೊಂದರಲ್ಲಿ ಕ್ರಿಕೆಟ್ ನಲ್ಲಿ ತೋರಿರುವ ಅಪೂರ್ವ ಪ್ರದರ್ಶನಕ್ಕಾಗಿ ನೀಡಲಾಗುವ ಐಸಿಸಿ ಪ್ರಶಸ್ತಿಯ (ICC Awards 2021) ಹಲವು ವಿಭಾಗಗಳ ಶಾರ್ಟ್ ಲಿಸ್ಟ್ ಪ್ರಕಟಗೊಂಡಿದ್ದು, ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿಯ (Men’s Test Player of the Year) ರೇಸ್ ನಲ್ಲಿ ಟೀಂ ಇಂಡಿಯಾದ ಅಗ್ರ ಬೌಲರ್ ಆರ್.ಅಶ್ವಿನ್ (Ravichandran Ashwin) ಇದ್ದಾರೆ. ಹಾಲಿ ವರ್ಷ ಕ್ರಿಕೆಟ್ ಕೆಲವು ಮಹತ್ವದ ಟೂರ್ನಿಗಳಿಗೆ ಸಾಕ್ಷಿಯಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ICC World Test Championship Final ) ಮತ್ತು ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ( ICC Men’s T20 World Cup 2021 )ಈ ವರ್ಷ ನಡೆದ ಎರಡು ಪ್ರಮುಖ ಟೂರ್ನಿಗಳು ಅದರ ಹೊರತಾಗಿ ಕೆಲ ಪ್ರಮುಖ ದ್ವಿಪಕ್ಷೀಯ ಟೂರ್ನಿಗಳನ್ನು ವರ್ಷವಿಡೀ ಆಡಲಾಗಿದ್ದು, ಇದು ಐಸಿಸಿ (ICC) ವಾರ್ಷಿಕ ಪ್ರಶಸ್ತಿಯ ಮಹತ್ವವನ್ನು ಸಾರುತ್ತದೆ.

ಐಸಿಸಿ ಇದೀಗ ವರ್ಷದ ಪುರುಷರ ಟೆಸ್ಟ್ ಆಟಗಾರನ ನಾಮನಿರ್ದೇಶನಗಳನ್ನು ಬಹಿರಂಗಪಡಿಸಿದೆ. ಇದು ಹಾಲಿ ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ (Test Cricket) ಪ್ರಾಬಲ್ಯ ಸಾಧಿಸಿದ ನಾಲ್ವರು ಪ್ರಮುಖ ಕ್ರಿಕೆಟಿಗರ ಹೆಸರನ್ನು ಒಳಗೊಂಡಿದೆ. ಇಂಗ್ಲೆಂಡ್ ನ ಜೋ ರೂಟ್ (Joe Root ), ಭಾರತದ ಆರ್.ಅಶ್ವಿನ್, ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಚಾಂಪಿಯನ್ ನ್ಯೂಜಿಲೆಂಡ್ ತಂಡದ ಕೈಲ್ ಜೇಮಿಸನ್ (Kyle Jamieson) ಹಾಗೂ ಶ್ರೀಲಂಕಾದ ದಿಮುತ್ ಕರುಣರತ್ನೆ (Dimuth Karunaratne )ವರ್ಷದ ಶ್ರೇಷ್ಠ ಟೆಸ್ಟ್ ಆಟಗಾರರ ಪಟ್ಟಿಗೆ ಶಾರ್ಟ್ ಲಿಸ್ಟ್ ಆದವರಾಗಿದ್ದಾರೆ.

ಜೋ ರೂಟ್ : ಈ ವರ್ಷ ಭರ್ಜರಿ ಫಾರ್ಮ್ ನಲ್ಲಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಜೋ ರೂಟ್, ಕ್ಯಾಲೆಂಡರ್ ವರ್ಷವೊಂದರಲ್ಲಿ 1700 ಹಾಗೂ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿದ ವಿಶ್ವದ ಮೂವರು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಪಾಕಿಸ್ತಾನದ ಮೊಹಮದ್ ಯೂಸುಫ್ ಹಾಗೂ ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್ ಮೊದಲಿಬ್ಬರು. ಸ್ಪಿನ್ನರ್ ಹಾಗೂ ವೇಗಿಗಳ ಎದುರು ಅತ್ಯುತ್ತಮ ಆಟವಾಡಿದ್ದ ರೂಟ್, ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್, ಭಾರತ ವಿರುದ್ಧ ಚೆನ್ನೈ ಹಾಗೂ ಲಾರ್ಡ್ಸ್ ಟೆಸ್ಟ್ ನಲ್ಲಿ ಅದ್ಭುತವಾದ ಆಟವಾಡಿದ್ದರು.
 

Know more about the nominations for the ICC Men’s Test Cricketer of the Year 2021 award 👇

— ICC (@ICC)


ಆರ್. ಅಶ್ವಿನ್: ಟೆಸ್ಟ್ ಕ್ರಿಕೆಟ್ ನಲ್ಲಿ ಅಶ್ವಿನ್ ಭಾರತದ ಪ್ರಮುಖ ಕೊಂಡಿಯಾಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡದ ಗೆಲುವಿಗೆ ನೆರವೀಯುವ ಮೂಲಕ ಪ್ರಮುಖ ಮ್ಯಾಚ್ವ ವಿನ್ನರ್ ಎನಿಸಿದ್ದಾರೆ. ಅವರ ಆಲ್ರೌಂಡ್ ನಿರ್ವಹಣೆಗಳು, ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ಹಾಗೂ ಕಳೆದ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ನೆರವಿಗೆ ಬಂದಿದ್ದವು. ಹಾಲಿ ವರ್ಷ ಅವರು ಆಡಿದ 8 ಪಂದ್ಯಗಳಿಂದ 52 ವಿಕೆಟ್ ಉರುಳಿಸಿದ್ದಾರೆ.

ಕೈಲ್ ಜೇಮಿಸನ್: ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದಲೂ ಕಿವೀಸ್ ನ ಪ್ರಧಾನ ಅಸ್ತ್ರವಾಗಿರುವ ಜೇಮಿಸನ್, ಈ ವರ್ಷ ಆಡಿದ 5 ಪಂದ್ಯಗಳಿಂದ 27 ವಿಕೆಟ್ ಸಾಧನೆ ಮಾಡಿದ್ದಾರೆ. ಭವಿಷ್ಯದ ಅಗ್ರ ವೇಗಿಯಾಗಿ ರೂಪುಗೊಳ್ಳುವ ಎಲ್ಲಾ ಅವಕಾಶ ಹೊಂದಿರುವ ಜೇಮಿಸನ್, ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಕಿವೀಸ್ ತಂಡದ ಗೆಲುವಿನ ರೂವಾರಿ ಎನಿಸಿದ್ದರು. ಕೇವಲ 19 ಟೆಸ್ಟ್ ಪಂದ್ಯಗಳಲ್ಲಿಯೇ 50 ವಿಕೆಟ್ ಸಾಧನೆ ಮಾಡಿದ್ದಾರೆ.

Ashes 2021: 12 ದಿನಗಳಲ್ಲಿ ಆ್ಯಷಸ್ ಸೋತಿದ್ದೇವೆ, ನಮಗೆ ನಾಚಿಕೆಯಾಗ್ಬೇಕು!
ದಿಮುತ್ ಕರುಣರತ್ನೆ: ಹಾಲಿ ವರ್ಷ ಆಡಿರುವ 7 ಪಂದ್ಯಗಳಿಂದ 69.38ರ ಸರಾಸರಿಯಲ್ಲಿ 902 ರನ್ ಬಾರಿಸಿದ್ದು, 4 ಶತಕ ಸಿಡಿಸಿದ್ದಾರೆ. ಶ್ರೀಲಂಕಾ ಟೆಸ್ಟ್ ತಂಡದ ನಾಯಕ, ಹಾಲಿ ವರ್ಷವಿಡೀ ಸ್ಮರಣೀಯ ಇನ್ನಿಂಗ್ಸ್ ಗಳ ಮೂಲಕ ಮಿಂಚಿದ್ದು, ವಿಶ್ವದ ಕೆಲವೇ ಕೆಲವು ಪ್ರಮುಖ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

click me!