India vs South africa ಟೀಂ ಇಂಡಿಯಾದ ಸೌತ್ ಆಫ್ರಿಕಾ ಪ್ರವಾಸ, ನಿರ್ಮಾಣವಾಗುತ್ತಾ ಇತಿಹಾಸ?

By Suvarna NewsFirst Published Dec 28, 2021, 7:13 PM IST
Highlights
  • ಸೌತ್ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ
  • ಕಳಪೆ ಫಾರ್ಮ್, ರೋಹಿತ್ ಅನುಪಸ್ಥಿತಿ ನಡುವೆ ಕೊಹ್ಲಿ ಸೈನ್ಯದ ಹೋರಾಟ
  • ಇಂಗ್ಲೆಂಡ್, ನ್ಯೂಜಿಲೆಂಡ್ ಮಣಿಸಿದ ಟೀಂ ಇಂಡಿಯಾಗೆ ಇತಿಹಾಸ ಬರೆಯುವ ತವಕ

ಬೆಂಗಳೂರು(ಡಿ.28): ಪ್ರಸಕ್ತ ವರ್ಷದಲ್ಲಿ ಟೀಂ ಇಂಡಿಯಾ(Team India) ಹಲವು ಏರಿಳಿತ ಕಂಡಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ವಿತೀಯ ಸಾಧನೆ ಮೂಲಕ ಮುನ್ನಗ್ಗಿದೆ. ಈ ವರ್ಷದ ಆರಂಭವನ್ನು ಆಸ್ಟ್ರೇಲಿಯಾದ(Australia) ಗಬ್ಬಾ ಟೆಸ್ಟ್ ಪಂದ್ಯವವನ್ನು ವಶಪಡಿಸಿಕೊಳ್ಳುವ ಮೂಲಕ ಟೀಂ ಇಂಡಿಯಾ ಆರಂಭಿಸಿತು. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ(Indian Cricket History) ಅತ್ಯಂತ ಸ್ಮರಣೀಯ ಹಾಗೂ ಮಹತ್ವದ ಮೈಲಿಗಲ್ಲಾಗಿದೆ. ಈ ವಿಜಯ ಮಾಲೆಯೊಂದಿಗೆ ಇಂಗ್ಲೆಂಡ್ ಪ್ರವಾಸ(England Tour) ಮಾಡಿದ ಟೀಂ ಇಂಡಿಯಾ ಎರಡು ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ರಚಿಸಿತು.  ಕೊರೋನಾ ವೈರಸ್ ಸೇರಿದಂತೆ ಇತರ ಅಡೆ ತಡೆಗಳ ನಡುವೆ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಮಹತ್ವದ ಪ್ರದರ್ಶನ ನೀಡಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್  ವಿರುದ್ದ ದಿಟ್ಟ ಹೋರಾಟವನ್ನೇ ನೀಡಿತು. ಇದೀಗ ಡಿಸೆಂಬರ್ ತಿಂಗಳು ಟೀಂ ಇಂಡಿಯಾಗೆ ಮತ್ತೊಂದು ಸುವರ್ಣ ಅವಕಾಶ ನೀಡುತ್ತಿದೆ. 3 ಟೆಸ್ಟ್ ಪಂದ್ಯಗಳಿಗಾಗಿ ಸೌತ್ ಆಫ್ರಿಕಾದಲ್ಲಿರುವ(South Africa) ಟೀಂ ಇಂಡಿಯಾ, ಮರೀಚಿಕೆಯಾಗಿರುವ ಗೆಲುವು ದಾಖಲಿಸಿದರೆ ಈ ವರ್ಷಕ್ಕೆ ಟೀಂ ಇಂಡಿಯಾ ಅತ್ಯಂತ ಸಂಭ್ರಮದಿಂದ ಗುಡ್ ಬೈ ಹೇಳುವ ಅವಕಾಶವಿದೆ.

ಸೌತ್ ಆಫ್ರಿಕಾ ಪ್ರವಾಸ ಟೀಂ ಇಂಡಿಯಾ(Indias tour of South Africa) ಪಾಲಿಗೆ ಕಠಿಣ ಮಾತ್ರವಲ್ಲ, ಮಾನಸಿಕವಾಗಿಯೂ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬಿಸಿಸಿಐ(BCCI) ಹಾಗೂ ನಾಯಕ ವಿರಾಟ್ ಕೊಹ್ಲಿ(Virat Kohli) ನಡುವಿನ ನಾಯಕತ್ವ(Captain) ಕುರಿತ ಶೀತಲ ಸಮರ ಅಭಿಮಾನಿಗಳ ಜೊತೆಗೆ ಟೀಂ ಇಂಡಿಯಾಗೂ ಕಠಿಣ ಸವಾಲು ಒಡ್ಡಿತ್ತು. ಏಕದಿನದಿಂದ ಕೊಹ್ಲಿ ನಾಯಕತ್ವವನ್ನು ಕಸಿದ ಬಿಸಿಸಿಐ ರೋಹಿತ್ ಶರ್ಮಾಗೆ(Rohit Sharma) ನೀಡಿತ್ತು. ಇದೀಗ ಟಿ20 ಹಾಗೂ ಏಕದಿನದಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿದೆ. ಇದರ ಬಳಿಕ ನಡೆದ ಘಟನೆಗಳು ತಂಡದ ಸಹ ಆಟಗಾರ ಮೇಲೂ ಪರಿಣಾಮ ಬೀರಿತ್ತು. ಈ ಬೆಳವಣಿಗೆಗಳು ಟೀಂ ಇಂಡಿಯಾ ಪ್ರದರ್ಶನದ ಮೇಲೂ ಪರಿಣಾಮ ಬೀರಿರುವುದು ಮೊದಲ ಟೆಸ್ಟ್ ಪಂದ್ಯದಲ್ಲಿ ಗಮನಸಿಬಹುದಾಗಿದೆ.

2017-18ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸ ಮಾಡಿತ್ತು. 3 ಪಂದ್ಯಗಳ ಫ್ರೀಡಂ ಸೀರಿಸ್‌ಗಾಗಿ ಹರಿಣಗಳ ನಾಡಿಗೆ ತೆರಳಿದ ಟೀಂ ಇಂಡಿಯಾ ಆರಂಭಿಕ ಎರಡು ಪಂದ್ಯ ಮುಗ್ಗರಿಸಿತ್ತು. ಸರಣಿ ಗೆದ್ದ ಸೌತ್ ಆಫ್ರಿಕಾ ತವರಿನಲ್ಲಿ ಭಾರತದ ವಿರುದ್ಧ ಸತತ 6 ಸರಣಿ ಗೆದ್ದ ಸಾಧನೆ ಮಾಡಿತು. 1992ರಿಂದ 2017-18ರ ವರೆಗೆ ಭಾರತ ಸೌತ್ ಆಫ್ರಿಕಾಗೆ 7 ಟೆಸ್ಟ್ ಸರಣಿ ಆಡಲು ತೆರಳಿದೆ. ಇದರಲ್ಲಿ 2010-11ರಲ್ಲಿ ಸರಣಿ 1-1 ಅಂತರದಲ್ಲಿ ಡ್ರಾಗೊಂಡಿತ್ತು. ಇನ್ನುಳಿದ 6 ಸರಣಿಗಳಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು. ಈ ಮೂಲಕ ಸೌತ್ ಆಫ್ರಿಕಾ ಅತ್ಯಂತ ಬಲಿಷ್ಠ ತಂಡವಾಗಿ ರೂಪುಗೊಂಡಿತ್ತು. ಇತ್ತ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಗೆಲುವು ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು.

ಕಳೆದ ಪ್ರವಾಸದಲ್ಲಿ ಟೀಂ ಇಂಡಿಯಾದ ಹೊಸ ಯುಗ ಆರಂಭಗೊಂಡಿತು. ವಿದೇಶಿ ನೆಲದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಅದ್ಭುತ ಸಾಧನೆ ಹೊಸ ಹುರುಪು ಹಾಗೂ ಹೊಸ ನಾಂದಿ ಹಾಡಿತು. 2017/18 ಪ್ರವಾಸದಲ್ಲಿ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ವಿದೇಶಿ ನೆಲದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಟೀಂ ಇಂಡಿಯಾ ಬೌಲರ್‌ಗಳ ಮುಂದೆ ಸೌತ್ ಆಫ್ರಿಕಾದ ಘಟಾನುಘಟಿ ಬೌಲರ್‌ಗಳು ಮಂಕಾಗಿದ್ದರು. ಆದರೆ ಅನುಭವದ ಕೊರತೆ, ಬ್ಯಾಟಿಂಗ್ ವೈಫಲ್ಯದಿಂದ ಸರಣಿ ಸೌತ್ ಆಫ್ರಿಕಾ ಪಾಲಾಗಿತ್ತು. ಇದು ಟೀಂ ಇಂಡಿಯಾ ವೇಗದ ವಿಭಾಗದಲ್ಲಿ ಹೊಸ ದಾರಿಗೆ ಕಾರಣವಾಯಿತು. 2021ರ ಸಾಲಿನಲ್ಲಿ ರವಿ ಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈ ಪ್ರಾಬಲ್ಯದ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದರು.

ಈ ಬಾರಿ ಭಾರತ ಬಲಿಷ್ಠ ತಂಡವಾಗಿ ಸೌತ್ ಆಫ್ರಿಕಾಗೆ ಕಾಲಿಟ್ಟಿದೆ. ಆದರೆ ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಟಾಪ್ ಆರ್ಡರ್ ಹೊರತು ಪಡಿಸಿದರೆ ಇತರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದಕ್ಕೆ ಕಾರಣ ಭಾರತ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಕಾಂಬಿನೇಷನ್ ಸೆಟ್ ಮಾಡಬೇಕಿದೆ. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಸರಣಿಯಿಂದ ಹೊರಬಿದ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಮಾತ್ರವಲ್ಲ, ಈ ವರ್ಷ ಅಜಿಂಕ್ಯ ರಹಾನೆ ಹೋರಾಟವೇ ನೀಡಿಲ್ಲ. ಇಷ್ಟೇ ಅಲ್ಲ ಉಪನಾಯಕ ಪಟ್ಟವೂ ಕಳಚಿದೆ. ಇನ್ನು ಚೇತೇಶ್ವರ ಪೂಜಾರ ಪ್ರದರ್ಶನವೂ ಅಷ್ಟಕಷ್ಟೆ. ಇನ್ನು ನಾಯಕ ವಿರಾಟ್ ಕೊಹ್ಲಿ ಕೂಡ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ.

ಭಾರತದಲ್ಲಿ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕಕ್ಕೆ ಹೊಸ ಬಲ ತುಂಬಿದ ಶ್ರೇಯಸ್ ಅರ್ಧಶತಕ ಹಾಗೂ ಶತಕ  ಸಿಡಿಸಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇತ್ತ ಟೀಂ ಇಂಡಿಯಾದಿಂದ ಸ್ಥಾನಕಳೆದುಕೊಂಡು ಹುನುಮಾ ವಿಹಾರಿ ಸೌತ್ ಆಫ್ರಿಕಾ ವಿರುದ್ಧದ ಭಾರತ ಎ ತಂಡದ ಪ್ರವಾಸದಲ್ಲಿ ದಿಟ್ಟ ಹೋರಾಟ ನೀಡಿ ಎಲ್ಲರ ಗಮನಸೆಳೆದಿದ್ದಾರೆ. 75ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ವಿಹಾರಿ 227 ರನ್ ಸಿಡಿಸಿವು ಮೂಲಕ ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಉತ್ತರವಾಗಿದ್ದಾರೆ.

ಟೀಂ ಇಂಡಿಯಾ ಕೆಲ ಸಮಸ್ಯೆಗಳಿದ್ದರೂ ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಇತ್ತ ಸೌತ್ ಆಫ್ರಿಕಾ ತಂಡದ ಅತ್ಯಂತ ಡೇಂಜರಸ್ ಬೌಲರ್ಸ್ ಕಾಗಿಸೋ ರಬಾಡ ಹಾಗೂ ಅನ್ರಿಚ್ ನೋರ್ಜೆ ಸರಣಿಯಿಂದ ಹೊರಬಿದಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಸೌತ್ ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲಲು ಇದು ಅತ್ಯುತ್ತಮ ಅವಕಾಶವಾಗಿದೆ. ಈ ಅವಕಾಶವನ್ನು ಟೀಂ ಇಂಡಿಯಾ ಬಳಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಕಾರಣ ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್ ಮಾರಕ ವೇಗಿಗಳನ್ನು ಎದುರಿಸಿದ ಟೀಂ ಇಂಡಿಯಾ ಸರಣಿ ಗೆದ್ದಿದೆ. ಇಂಗ್ಲೆಂಡ್ ವಿರುದ್ಧ ಮುನ್ನಡೆ ಸಾಧಿಸಿದೆ. ಕೋಚ್ ರಾಹುಲ್ ದ್ರಾವಿಡ್, ನಾಯಕ ವಿರಾಟ್ ಕೊಹ್ಲಿ ಮಾರ್ಗದರ್ಶನದಲ್ಲಿ ಈ ಬಾರಿ ಟೀಂ ಇಂಡಿಯಾಗೆ ಇತಿಹಾಸ ರಚಿಸುತ್ತಾ? ಈ ಕುತೂಹಲ ಹೆಚ್ಚಾಗುತ್ತಿದೆ. ಸರಣಿ ಗೆಲುವಿನ ಫೇವರಿಟ್ ಎನಿಸಿಕೊಂಡಿರುವ ಟೀಂ ಇಂಡಿಯಾ ಈ ಸಾಧನೆ ಮಾಡಿದರೆ ಅಚ್ಚರಿಯಿಲ್ಲ.
 

click me!