* ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
* ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 14ಕ್ಕೆ ನಿಗದಿ
* ಪಾಕಿಸ್ತಾನಕ್ಕೆ ಯಾವುದೇ ವಿಶೇಷ ಸೌಲಭ್ಯವಿಲ್ಲ ಎಂದ ವಿದೇಶಾಂಗ ಸಚಿವಾಲಯ
ನವದೆಹಲಿ(ಆ.14): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 05ರಂದು ಅಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಸಾಕಷ್ಟು ಸರ್ಕಸ್ ಬಳಿಕ ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬರಲು ಒಪ್ಪಿಕೊಂಡಿದೆ.
ಐಸಿಸಿ ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಆಗಮಿಸುವ ಪಾಕಿಸ್ತಾನ ತಂಡಕ್ಕೆ ಯಾವುದೇ ವಿಶೇಷ ಸವಲತ್ತು ನೀಡುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಇತರ ಎಲ್ಲಾ ತಂಡದಂತೆಯೇ ಪಾಕ್ ತಂಡವನ್ನೂ ಪರಿಗಣಿಸುತ್ತೇವೆ. ವಿಶೇಷ ಸವಲತ್ತು ನೀಡುವುದಿಲ್ಲ’ ಎಂದಿದ್ದಾರೆ. ಭದ್ರತಾ ಕಾರಣ ಮುಂದಿಟ್ಟು ಪಾಕ್ ತಂಡ ಭಾರತಕ್ಕೆ ಆಗಮಿಸಲು ಹಿಂದೇಟು ಹಾಕಿತ್ತು. ಬಳಿಕ ಬಿಸಿಸಿಐ, ಐಸಿಸಿಗೆ ವಿಶೇಷ ಭದ್ರತೆ ಒದಗಿಸುವಂತೆ ಕೋರಿ ಪಾಕ್ ಕ್ರಿಕೆಟ್ ಮಂಡಳಿ ಮನವಿ ಸಲ್ಲಿಸಿತ್ತು.
ಏಷ್ಯಾಕಪ್‌ನಲ್ಲಿ ಆಡದಿದ್ದರೆ..? ವಿಶ್ವಕಪ್‌ಗೂ ಮುನ್ನ ಶ್ರೇಯಸ್, ರಾಹುಲ್‌ಗೆ ಎಚ್ಚರಿಕೆ?
ಬಿಸಿಸಿಐ, ಐಸಿಸಿಗೆ ವಿಶೇಷ ಭದ್ರತೆ ಒದಗಿಸುವಂತೆ ಕೋರಿ ಪಾಕ್ ಕ್ರಿಕೆಟ್ ಮಂಡಳಿ ಮನವಿ ಸಲ್ಲಿಸಿದ್ದರ ಕುರಿತಂತೆ ಪ್ರತಿಕ್ರಿಯಿಸಿರುವ ಅರಿಂದಮ್ ಬಾಗ್ಚಿ, "ಖಂಡಿತವಾಗಿಯೂ, ಕೇವಲ ಪಾಕಿಸ್ತಾನ ಮಾತ್ರವಲ್ಲ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉಳಿದೆಲ್ಲಾ ತಂಡಗಳಿಗೂ ಸೂಕ್ತ ಭದ್ರತೆಯನ್ನು ಕಲ್ಪಿಸಲಿದ್ದೇವೆ" ಎಂದು ತಿಳಿಸಿದ್ದಾರೆ.
ಇನ್ನು ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್ ಆಡಲು ಭಾರತ ಪ್ರವಾಸ ಮಾಡುವ ಕುರಿತಂತೆ ಪ್ರತಿಕ್ರಿಯಿಸಿದ್ದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, "ಇಸ್ಲಾಮಾಬಾದ್, ಕ್ರೀಡೆಯನ್ನು ರಾಜಕೀಯದ ಜತೆ ಮಿಕ್ಸ್ ಮಾಡಿಲ್ಲ. ಈ ಕಾರಣಕ್ಕಾಗಿಯೇ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳಿಸಿಕೊಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದರು. ಈ ಮಾತಿಗೆ ಪ್ರತಿಕ್ರಿಯಿಸಿದರುವ ಅರಿಂದಮ್ ಬಾಗ್ಚಿ, "ನನ್ನ ಪ್ರಕಾರ ಒಂದೊಳ್ಳೆಯ ಮ್ಯಾಚ್ ಮೂಡಿ ಬರುವ ವಿಶ್ವಾಸವಿದೆ. ಎಲ್ಲರೂ ಬಿಂಬಿಸುವಂತೆ ಇದೇನೂ ಯುದ್ಧವಲ್ಲ" ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಕದನ ಅಕ್ಟೋಬರ್ 14ರಂದು ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ತಿಲಕ್ ವರ್ಮಾ 2023ರ ವಿಶ್ವಕಪ್ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್ ಶರ್ಮಾ..!
ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಏಕದಿನ ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯ ಅ.14ರಂದು ಅಹಮದಾಬಾದ್‌ನಲ್ಲೇ ನಡೆಯುವುದು ಖಚಿತವಾಗಿದೆ. ಈ ಮೊದಲು ಭಾರತ-ಪಾಕ್ ಪಂದ್ಯ ಅ.15ಕ್ಕೆ ನಿಗದಿಯಾಗಿತ್ತು. ಆದರೆ ನವರಾತ್ರಿ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಪಂದ್ಯದ ದಿನಾಂಕ ಬದಲಾವಣೆ ಮಾಡಲಾಗಿದೆ.
ಹೋಟೆಲ್ ಬುಕ್ ಮಾಡಿದ್ದ ಅಭಿಮಾನಿಗಳಿಗೆ ಸಂಕಷ್ಟ!
ಈ ಮೊದಲು ಭಾರತ-ಪಾಕ್ ಪಂದ್ಯ ಅ.15ರಂದು ನಡೆಯಲಿದೆ ಎಂದು ಗೊತ್ತಾದಾಗ ಸಾವಿರಾರು ಪಂದ್ಯ ವಿಮಾನ ಟಿಕೆಟ್, ಅಹ್ಮದಾಬಾದ್‌ನಲ್ಲಿ ದುಬಾರಿ ಬೆಲೆಯ ಹೋಟೆಲ್‌ಗಳನ್ನು ಬುಕ್ ಮಾಡಿದ್ದರು. ಆದರೆ ಸದ್ಯ ಪಂದ್ಯ 1 ದಿನ ಮೊದಲೇ ನಡೆಯಲಿರುವ ಕಾರಣ ಅಭಿಮಾನಿಗಳಿಗೆ ಸಂಕಷ್ಟ ಎದುರಾಗಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.