
ಮುಂಬೈ(ಏ.23): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರು ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದ ಕೊನೆಯ ಓವರ್‌ನಲ್ಲಿ ಅಂಪೈರ್ ನೀಡಿದ ತೀರ್ಪು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೇ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ತಪ್ಪಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant), ಸಹ ಆಟಗಾರ ಶಾರ್ದೂಲ್ ಠಾಕೂರ್‌ಗೆ (Shardul Thakur) ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ (Pravin Amre) ಪಂದ್ಯದ ಸಂಭಾವನೆಯ 100% ದಂಡ ಹಾಗೂ ಒಂದು ಪಂದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ.
ಹೌದು, ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯವು ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಇನಿಂಗ್ಸ್‌ನ ಕೊನೆಯ ಓವರ್‌ನ ಮೂರನೇ ಎಸೆತವು ನೋಬಾಲ್ ಆಗಿತ್ತು ಎಂದು ಡಗೌಟ್‌ನಲ್ಲಿ ಕೂತಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಸಹ ಆಟಗಾರ ಶಾರ್ದೂಲ್ ಠಾಕೂರ್ ಆಗ್ರಹಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಒಂದು ಹೆಜ್ಜೆ ಮುಂದೆ ಹೋಗಿ, ಪಂದ್ಯ ನಡೆಯುತ್ತಿರುವಾಗಲೇ ಮೈದಾನ ಪ್ರವೇಶಿ, ತೀರ್ಪು ಮರು ಪರಿಶೀಲಿಸುವಂತೆ ಆಗ್ರಹಿಸಿದ್ದರು. ಇದೀಗ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಈ ಮೂವರಿಗೂ ಐಪಿಎಲ್ ಆಡಳಿತ ಮಂಡಳಿಯು ಭಾರೀ ಪ್ರಮಾಣದ ದಂಡ ವಿಧಿಸಿದೆ. ಡೆಲ್ಲಿ ನಾಯಕ ರಿಷಭ್ ಪಂತ್‌ಗೆ ಪಂದ್ಯದ ಸಂಭಾವನೆಯ 100% ಅಂದರೆ 1.15 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ. ಇನ್ನು ಶಾರ್ದೂಲ್ ಠಾಕೂರ್‌ಗೆ ಪಂದ್ಯದ ಸಂಭಾವನೆಯ 50% ದಂಡ ವಿಧಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದ ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ ಪಂದ್ಯದ ಸಂಭಾವನೆಯ 100% ದಂಡ ಹಾಗೂ ಒಂದು ಪಂದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ.
ಅಷ್ಟಕ್ಕೂ ಆಗಿದ್ದೇನು..? ರಾಜಸ್ಥಾನ ರಾಯಲ್ಸ್ ತಂಡವು ನೀಡಿದ್ದ 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಗೆಲುವಿನತ್ತ ಮುಖ ಮಾಡಿತ್ತು. ಕೊನೆಯ ಎರಡು ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 36 ರನ್‌ಗಳ ಅಗತ್ಯವಿತ್ತು. 19ನೇ ಓವರ್ ಬೌಲಿಂಗ್ ಮಾಡಿದ ಕನ್ನಡದ ವೇಗಿ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆಯುವುದರ ಜತೆಗೆ ಮೇಡನ್ ಮಾಡಿ, ಪಂದ್ಯದ ದಿಕ್ಕಿಗೆ ತಿರುವ ನೀಡಿದರು. ಇನ್ನು ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 36 ರನ್‌ಗಳ ಅಗತ್ಯವಿತ್ತು. ಓಬೆಡ್ ಮೆಕಾಯ್ ಎಸೆದ 20ನೇ ಓವರ್‌ನ ಮೊದಲ 3 ಎಸೆತಗಳನ್ನು ರೋಮನ್ ಪೋವೆಲ್ ಸಿಕ್ಸರ್‌ಗಟ್ಟುವ ಮೂಲಕ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. 20ನೇ ಓವರ್‌ನ ಮೂರನೇ ಎಸೆತವನ್ನು ಅಂಪೈರ್ ನೋ ಬಾಲ್ ನೀಡಬೇಕಿತ್ತು ಎಂದು ಆಗ್ರಹಿಸಿದ್ದರು.
DC vs RR: ಅಂಪೈರ್ ವಿವಾದಾತ್ಮಕ No ball ತೀರ್ಪಿಗೆ ಅಸಮಾಧಾನ ಹೊರಹಾಕಿದ ರಿಷಭ್ ಪಂತ್
ರಿಷಭ್ ಪಂತ್ ಐಪಿಎಲ್‌ನ ಎರಡನೆ ಹಂತದ ಪ್ರಮಾದ ಎಸಗಿರುವುದರಿಂದಾಗಿ ಅವರಿಗೆ ಪಂದ್ಯದ ಸಂಭಾವನೆಯ 100% ದಂಡ ವಿಧಿಸಲಾಗಿದೆ. ಇನ್ನು ಐಪಿಎಲ್ ಆಡಳಿತ ಮಂಡಳಿಯು ವಿಧಿಸಿದ ಶಿಕ್ಷೆಯನ್ನು ರಿಷಭ್ ಪಂತ್ ಒಪ್ಪಿಕೊಂಡಿದ್ದಾರೆ. ಇನ್ನು ರಿಷಭ್ ಪಂತ್ ಜತೆ ಅಪೈರ್ ತೀರ್ಪು ಕುರಿತಂತೆ ಅಸಮಧಾನ ಹೊರಹಾಕಿದ ಶಾರ್ದೂಲ್ ಠಾಕೂರ್‌ಗೂ ಪಂದ್ಯದ ಸಂಭಾವನೆಯ 50% ದಂಡದ ಬರೆ ಹಾಕಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.