IPL 2022: ಕುಸಿದಿರುವ ಕೆಕೆಆರ್‌ಗಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ಸವಾಲು

By Naveen Kodase  |  First Published Apr 23, 2022, 11:20 AM IST

* ಐಪಿಎಲ್‌ ಟೂರ್ನಿಯಲ್ಲಿಂದು ಕೆಕೆಆರ್‌ ತಂಡಕ್ಕಿಂದು ಗುಜರಾತ್ ಟೈಟಾನ್ಸ್ ಸವಾಲು

* ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ 

* ಹ್ಯಾಟ್ರಿಕ್ ಸೋಲು ಕಂಡು ಕಂಗಾಲಾಗಿರುವ ಕೋಲ್ಕತಾ ನೈಟ್‌ ರೈಡರ್ಸ್‌


ನವಿ ಮುಂಬೈ(ಏ.23): ಹ್ಯಾಟ್ರಿಕ್‌ ಸೋಲು ಅನುಭವಿಸಿ ಕುಗ್ಗಿರುವ ಕೋಲ್ಕತಾ ನೈಟ್‌ರೈಡ​ರ್ಸ್‌ (Kolkata Knight Riders) (ಕೆಕೆಆರ್‌) ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಸಾಧ್ಯವಾದಷ್ಟು ಬೇಗ ಜಯದ ಹಳಿಗೆ ಮರಳಬೇಕಿದ್ದು, ಶನಿವಾರ ಅಗ್ರಸ್ಥಾನಿ ಗುಜರಾತ್‌ ಟೈಟಾನ್ಸ್‌ಗೆ (Gujarat Titans) ಸೋಲುಣಿಸಲು ಹಪಹಪಿಸುತ್ತಿದೆ. ಆದರೆ ಶ್ರೇಯಸ್‌ ಅಯ್ಯರ್‌ ನೇತೃತ್ವದ ತಂಡಕ್ಕೆ ಗುಜರಾತ್ ಟೈಟಾನ್ಸ್‌ ತಂಡ ಎಷ್ಟು ಬಲಾಢ್ಯವಾಗಿದೆ ಎನ್ನುವ ಅರಿವಿದ್ದು, ಅಸಾಧಾರಣ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ.

ಹಾರ್ದಿಕ್‌ ಪಾಂಡ್ಯ (Hardik Pandya) ಮುಂದಾಳತ್ವದ ಗುಜರಾತ್‌ ಟೈಟಾನ್ಸ್ ಎಲ್ಲಾ ವಿಭಾಗಗಳಲ್ಲಿಯೂ ಅಬ್ಬರಿಸುತ್ತಿದ್ದು, ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಸೋತಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಪಂದ್ಯಕ್ಕೆ ಗೈರಾಗಿದ್ದ ಹಾರ್ದಿಕ್‌ ಪಾಂಡ್ಯ, ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಡೇವಿಡ್‌ ಮಿಲ್ಲರ್‌ (David Miller), ರಶೀದ್‌ ಖಾನ್‌ (Rashid Khan) ಅಮೋಘ ಲಯದಲ್ಲಿದ್ದು, ಇವರಿಬ್ಬರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಶುಭ್‌ಮನ್‌ ಗಿಲ್‌ (Shubman Gill) ಲಯಕ್ಕೆ ಮರಳಲು ಕಾಯುತ್ತಿದ್ದಾರೆ.

Tap to resize

Latest Videos

ಮತ್ತೊಂದೆಡೆ ಕೋಲ್ಕತಾ ನೈಟ್ ರೈಡರ್ಸ್‌, ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಬಹುದು. ಮೊದಲ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಶ್ರೇಯಸ್ ಅಯ್ಯರ್‌ ನೇತೃತ್ವದ ಕೆಕೆಆರ್ ತಂಡವು, ಇದಾದ ಬಳಿಕ ಹ್ಯಾಟ್ರಿಕ್ ಸೋಲು ಅನುಭವಿಸುವ ಮೂಲಕ ಕಂಗಾಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ರಾಜಸ್ಥಾನ ರಾಯಲ್ಸ್‌ (Rajasthan Royals) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಎದುರು ಶ್ರೇಯಸ್ ಅಯ್ಯರ್ ಪಡೆ ಭಾರೀ ಅಂತರದ ಸೋಲು ಅನುಭವಿಸುವ ಮೂಲಕ ನಿರಾಸೆಯ ಸುಳಿಯಲ್ಲಿ ಸಿಲುಕಿದೆ. ಇಂದಿನ ಪಂದ್ಯದಲ್ಲಿ ಟಿಮ್‌ ಸೌಥಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ತಂಡದ ಬೌಲರ್‌ಗಳು ದುಬಾರಿಯಾಗುತ್ತಿರುವುದು ನಾಯಕ ಶ್ರೇಯಸ್‌ ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ಮೂರು ವಿಭಾಗಗಳಲ್ಲಿ ಕೆಕೆಆರ್‌ ಸುಧಾರಿತ ಪ್ರದರ್ಶನ ತೋರಬೇಕಿದೆ.

IPL 2022: ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ದ ಶೈನ್ ಆಗುತ್ತಾ ಆರ್‌ಸಿಬಿ..?

ಕೆಕೆಆರ್ ಸ್ಟಾರ್ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್‌ (Pat Cummins), ವರುಣ್ ಚಕ್ರವರ್ತಿ, ಶಿವಂ ಮಾವಿ, ಆಂಡ್ರೆ ರಸೆಲ್ ಸೇರಿದಂತೆ ಎಲ್ಲಾ ಬೌಲರ್‌ಗಳು ದುಬಾರಿಯಾಗುತ್ತಿರುವುದು ಅಯ್ಯರ್ ಪಡೆಯ ತಲೆನೋವು ಹೆಚ್ಚುವಂತೆ ಮಾಡಿದೆ. ಉಮೇಶ್ ಯಾದವ್ ಹಾಗೂ ಸುನಿಲ್ ನರೈನ್ ಮಾತ್ರವೇ ಕೆಕೆಆರ್ ಪರ ಮೊನಚಾದ ಬೌಲಿಂಗ್ ದಾಳಿ ಸಂಘಟಿಸುತ್ತಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಆಲ್ರೌಂಡ್ ಆಟ ಪ್ರದರ್ಶಿಸಿದ್ದ ವೆಂಕಟೇಶ್ ಅಯ್ಯರ್ ಅವರಿಂದ ಕೂಡಾ ನಿರೀಕ್ಷಿತ ಪ್ರದರ್ಶನ ಮೂಡಿ ಬರದೇ ಇರುವುದು ಕೆಕೆಆರ್ ಪಾಳಯ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ ಎನಿಸಿದೆ. 

ಸಂಭವನೀಯ ಆಟಗಾರ ಪಟ್ಟಿ

ಗುಜರಾತ್‌: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್‌, ಹಾರ್ದಿಕ್ ಪಾಂಡ್ಯ‌(ನಾಯಕ), ಅಭಿನವ್ ಮನೋಹರ್‌, ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಅಲ್ಜಾರಿ ಜೋಸೆಫ್, ಲಾಕಿ ಫಗ್ರ್ಯೂಸನ್‌, ಮೊಹಮ್ಮದ್ ಶಮಿ, ಯಶ್‌ ದಯಾಳ್‌.

ಕೆಕೆಆರ್‌: ಆರೋನ್ ಫಿಂಚ್‌, ಸುನಿಲ್ ನರೈನ್‌, ಶ್ರೇಯಸ್ ಅಯ್ಯರ್‌(ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್‌, ವೆಂಕಟೇಶ್ ಅಯ್ಯರ್‌, ಶೆಲ್ಡನ್‌ ಜಾಕ್ಸನ್‌, ಶಿವಂ ಮಾವಿ, ಪ್ಯಾಟ್ ಕಮಿನ್ಸ್‌, ಉಮೇಶ್‌ ಯಾದವ್, ವರುಣ್ ಆರೋನ್‌.

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂ 
ಪಂದ್ಯ: ಮಧ್ಯಾಹ್ನ 3.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!