
ಡುನೆಡಿನ್(ಫೆ.25): ಮಾರ್ಕಸ್ ಸ್ಟೋನಿಸ್(78) ಕೆಚ್ಚೆದೆಯ ಅರ್ಧಶತಕ ಹಾಗೂ ಆರ್‌ಸಿಬಿ ಕ್ರಿಕೆಟಿಗರಾದ ಜೋಸುವಾ ಫಿಲಿಫೆ(45) ಮತ್ತು ಡೇನಿಯಲ್ ಸ್ಯಾಮ್ಸ್(41) ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ ಆತಿಥೇಯ ನ್ಯೂಜಿಲೆಂಡ್ ಎದುರು ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 4 ರನ್‌ಗಳ ವಿರೋಚಿತ ಸೋಲು ಕಂಡಿದೆ. ಇನ್ನು ಈ ಗೆಲುವಿನೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ 2-0 ಮುನ್ನಡೆ ಸಾಧಿಸಿದೆ.
ನ್ಯೂಜಿಲೆಂಡ್ ನೀಡಿದ್ದ 220 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮ್ಯಾಥ್ಯು ವೇಡ್(24), ಫಿಂಚ್(12) ಉತ್ತಮ ಆರಂಭ ಒದಗಿಸಿಕೊಟ್ಟರು. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಪ್ರತಿನಿಧಿಸುವ ಫಿಲಿಫೆ ಕೇವಲ 32 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 45 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನು ಈ ಬಾರಿ 14.25 ಕೋಟಿ ರುಪಾಯಿಗೆ ಆರ್‌ಸಿಬಿ ಕೂಡಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಮ್ಯಾಕ್ಸ್‌ವೆಲ್ ಕೇವಲ 3 ರನ್ ಬಾರಿಸಿ ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಸ್ಟೋನಿಸ್-ಸ್ಯಾಮ್ಸ್: ಮ್ಯಾಕ್ಸ್‌ವೆಲ್(3), ಆಸ್ಟನ್ ಅಗರ್(0) ಹಾಗೂ ಮಿಚೆಲ್ ಮಾರ್ಶ್(0) ಪೆವಿಲಿಯನ್ ಪರೇಡ್ ನಡೆಸಿದರಾದರೂ ಮಾರ್ಕಸ್ ಸ್ಟೋನಿಸ್ ಹಾಗೂ ಡೇನಿಯಲ್ ಸ್ಯಾಮ್ಸ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಸ್ಟೋನಿಸ್ ಕೇವಲ 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 78 ರನ್ ಚಚ್ಚಿದರೆ, ಆರ್‌ಸಿಬಿಯ ಮತ್ತೋರ್ವ ಕ್ರಿಕೆಟಿಗ ಡೇನಿಯಲ್ ಸ್ಯಾಮ್ಸ್ ಕೇವಲ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 41 ರನ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ ನ್ಯೂಜಿಲೆಂಡ್ ಆಲ್ರೌಂಡರ್ ಜೇಮ್ಸ್ ನೀಶಮ್ ಕೇವಲ 10 ರನ್ ನೀಡಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟುವ ಮೂಲಕ ತಂಡ ರೋಚಕ ಗೆಲುವು ದಾಖಲಿಸಲು ನೆರವಾದರು. ಇತ್ತೀಚೆಗೆ ನಡೆದ ಆಟಗಾರರ ಬರೋಬ್ಬರಿ 15 ಕೋಟಿ ರುಪಾಯಿಗೆ ಆರ್‌ಸಿಬಿ ಪಾಲಾಗಿರುವ ಕೈಲ್ ಜಾಮಿಸನ್ 4 ಓವರ್ ಬೌಲಿಂಗ್ ಮಾಡಿ ಒಂದೂ ವಿಕೆಟ್ ಕಬಳಿಸದೇ 56 ರನ್ ಚಚ್ಚಿಸಿಕೊಳ್ಳುವ ಮೂಲಕ ದುಬಾರಿ ಬೌಲರ್ ಎನಿಸಿದರು.
ನನಗೆ ದೇಶ ಮೊದಲು, ಐಪಿಎಲ್‌ಗೆ ಕೈ ಕೊಡಲು ಮುಂದಾದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ನ್ಯೂಜಿಲೆಂಡ್ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್(97) ಶತಕ ವಂಚಿತ ಬ್ಯಾಟಿಂಗ್ ಹಾಗೂ ನಾಯಕ ಕೇನ್ ವಿಲಿಯಮ್ಸನ್(53) ಮತ್ತು ಜೇಮ್ಸ್ ನೀಶಮ್ ಅಜೇಯ 45 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 219 ರನ್ ಕೆಲಹಾಕಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.