
ಮುಂಬೈ(ಜೂ.02): ಅಡಿಡಾಸ್ ಸಂಸ್ಥೆಯ ಪ್ರಾಯೋಜಕತ್ವ ಹೊಂದಿರುವ ಭಾರತೀಯ ಕ್ರಿಕೆಟ್ ತಂಡದ ನೂತನ ಜೆರ್ಸಿಗಳನ್ನು ಗುರುವಾರ ಅನಾವರಣಗೊಳಿಸಲಾಗಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 3 ಮಾದರಿ(ಟೆಸ್ಟ್, ಏಕದಿನ, ಟಿ20) ಜೆರ್ಸಿಗಳನ್ನು ಬಿಡುಗಡೆಗೊಳಿಸುತ್ತಿರುವ ವಿಡಿಯೋ, ಫೋಟೋಗಳನ್ನು ಅಡಿಡಾಸ್ ಸಂಸ್ಥೆಯು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.
"ಇದೊಂದು ಐತಿಹಾಸಿಕ ಕ್ಷಣ, ಐತಿಹಾಸಿಕ ಸ್ಟೇಡಿಯಂನಲ್ಲಿ ನಾವಿಂದು ಭಾರತದ ನೂತನ ಜೆರ್ಸಿಯನ್ನು ಅನಾವರಣ ಮಾಡುತ್ತಿದ್ದೇವೆ" ಎಂದು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಅಡಿಡಾಸ್ ಬರೆದುಕೊಂಡಿದೆ.
ಜೆರ್ಸಿಯ ಭುಜದ ಭಾಗದಲ್ಲಿ ಮೂರು ಪಟ್ಟಿಗಳು ಮತ್ತು ಮುಂಭಾಗದಲ್ಲಿ ಅಡಿಡಾಸ್ ಲೋಗೋ ಇದೆ. ಜೆರ್ಸಿ ವಿನ್ಯಾಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಅಡಿಡಾಸ್ ಸಂಸ್ಥೆಯೊಂದಿಗೆ ಬಿಸಿಸಿಐ 5 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ಜೂನ್ 7ರಿಂದ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಮೊದಲ ಬಾರಿ ಅಡಿಡಾಸ್ ಸಂಸ್ಥೆಯ ಜೆರ್ಸಿ ತೊಟ್ಟು ಆಡಲಿದ್ದಾರೆ. ಇತ್ತೀಚೆಗಷ್ಟೇ ತಂಡದ ಅಭ್ಯಾಸ ಜೆರ್ಸಿಗಳನ್ನು ಬಿಡುಗಡೆಗೊಳಿಸಲಾಗಿತ್ತು.
WTC Final: ಟೆಸ್ಟ್ ಫೈನಲ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ
ಮುಖ್ಯವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಭಾರತ ತಂಡದ ಕ್ರಿಕೆಟಿಗರು ಹಾಗೂ ಸಹಾಯಕ ಸಿಬ್ಬಂದಿಗಳು ಅಡಿಡಾಸ್ ಅಭ್ಯಾಸ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಭಾರತ ಕ್ರಿಕೆಟ್ ತಂಡದ ನೂತನ ಜೆರ್ಸಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜೂನ್ 7ರಿಂದ ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಸಸೆಕ್ಸ್‌ನ ಅರುಂಡೆಲ್ ಕೌಂಟಿ ಮೈದಾನದಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದು, ಐಪಿಎಲ್ ಫೈನಲ್ ಮುಗಿಸಿ ಇಂಗ್ಲೆಂಡ್‌ಗೆ ತೆರಳಿದ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ ತಂಡ ಕೂಡಿಕೊಂಡಿದ್ದಾರೆ.
2028ರ ವರೆಗೂ ಅಡಿಡಾಸ್ ಜೆರ್ಸಿ ಪ್ರಾಯೋಜಕತ್ವ: ಬಿಸಿಸಿಐ
ಮುಂಬೈ: ಭಾರತೀಯ ಕ್ರಿಕೆಟ್ ತಂಡಗಳ ಜೆರ್ಸಿ ಪ್ರಾಯೋಜಕತ್ವಕ್ಕೆ ಅಡಿಡಾಸ್ ಸಂಸ್ಥೆಯು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ ಪ್ರಕಟಣೆ ತಿಳಿಸಿದೆ. ಈ ಕುರಿತಂತೆ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ, ಟ್ವೀಟ್ ಮೂಲಕ ಪ್ರಾಯೋಜಕತ್ವದ ವಿಷಯವನ್ನು ಬಹಿರಂಗಪಡಿಸಿದ್ದರು. ಜಯ್ ಶಾ ಆಗಲಿ, ಬಿಸಿಸಿಐ ಪ್ರಕಟಣೆಯಾಗಲಿ ಒಪ್ಪಂದದ ಮೌಲ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಭಾರತ ಹಿರಿಯ ಪುರುಷ, ಮಹಿಳಾ ತಂಡಗಳು, ಪುರುಷ, ಮಹಿಳಾ ಅಂಡರ್-19 ತಂಡಗಳು ಇನ್ಮುಂದೆ ಅಡಿಡಾಸ್ ಜೆರ್ಸಿ ತೊಟ್ಟು ಆಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.