
ಲಂಡನ್(ಜೂ.02): ಜೂನ್ 7ರಿಂದ ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಸಸೆಕ್ಸ್‌ನ ಅರುಂಡೆಲ್ ಕೌಂಟಿ ಮೈದಾನದಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದು, ಐಪಿಎಲ್ ಫೈನಲ್ ಮುಗಿಸಿ ಇಂಗ್ಲೆಂಡ್‌ಗೆ ತೆರಳಿದ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ ತಂಡ ಕೂಡಿಕೊಂಡಿದ್ದಾರೆ.
ಭಾರತ ತಂಡವು 5 ಬ್ಯಾಟರ್‌ಗಳು, ವಿಕೆಟ್ ಕೀಪರ್-ಬ್ಯಾಟರ್, ಒಬ್ಬ ಆಲ್ರೌಂಡರ್, ಒಬ್ಬ ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಓವಲ್‌ನ ಪಿಚ್ ಸಾಮಾನ್ಯವಾಗಿ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ, ಸಿರಾಜ್, ಶಮಿ ಹಾಗೂ ಉಮೇಶ್ ಅಥವಾ ಉನಾದ್ಕತ್ ಜೊತೆ ಆಲ್ರೌಂಡರ್ ಸ್ಥಾನವನ್ನು ಶಾರ್ದೂಲ್ ಠಾಕೂರ್‌ಗೆ ನೀಡುವ ಸಾಧ್ಯತೆ ಇದೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ಜಡೇಜಾ ಆಡಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ನಾಯಕ ರೋಹಿತ್ ಜೊತೆ ಗಿಲ್ ಆರಂಭಿಕನಾಗಿ ಆಡಲಿದ್ದು, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್ ಪಡೆಯಲ್ಲಿ ಇರುವುದು ಬಹುತೇಕ ಖಚಿತ. ವಿಕೆಟ್ ಕೀಪರ್ ಸ್ಥಾನಕ್ಕಾಗಿ ಇಶಾನ್ ಕಿಶನ್ ರೇಸ್‌ನಲ್ಲಿದ್ದರೂ, ತಂಡದ ಆಡಳಿತವು ಕೆ.ಎಸ್.ಭರತ್‌ರನ್ನೇ ಆಡಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ತಂಡ ಲಂಡನ್‌ನಿಂದ 20 ಕಿ.ಮೀ. ದೂರದಲ್ಲಿರುವ ಬೆಕೆನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸುತ್ತಿದೆ.
ಫೈನಲ್‌ಗೆ ಡ್ಯೂಕ್ಸ್ ಚೆಂಡು ಬಳಕೆ
ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಡ್ಯೂಕ್ಸ್ ಚೆಂಡುಗಳನ್ನು ಬಳಸುವುದಾಗಿ ಐಸಿಸಿ ಬುಧವಾರ ಖಚಿತಪಡಿಸಿದೆ. ಕಳೆದ ಟೆಸ್ಟ್ ವಿಶ್ವಕಪ್ ಫೈನಲ್ನಲ್ಲೂ ಡ್ಯೂಕ್ಸ್ ಬಾಲ್ಗಳನ್ನೇ ಬಳಸಲಾಗಿತ್ತಾದರೂ ಇತ್ತೀಚೆಗೆ ಈ ಚೆಂಡಿನ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದ ಕಾರಣ ಕೂಕಾಬುರಾ ಚೆಂಡು ಬಳಸಬಹುದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಐಸಿಸಿ ಇಂಗ್ಲೆಂಡ್‌ನಲ್ಲಿ ಸಂಪ್ರದಾಯಿಕವಾಗಿ ಬಳಸುವ ಡ್ಯೂಕ್ಸ್ ಚೆಂಡನ್ನೇ ಫೈನಲ್‌ಗೆ ಬಳಸಲು ನಿರ್ಧರಿಸಿದೆ.
ಐಪಿಎಲ್ ವೇಳೆ ಡ್ಯೂಕ್ಸ್ ಚೆಂಡಿನಲ್ಲಿ ಅಭ್ಯಾಸ: ಅಕ್ಷರ್
ಐಸಿಸಿ ವೆಬ್‌ಸೈಟ್ ಜೊತೆ ಮಾತನಾಡಿರುವ ಭಾರತದ ಆಲ್ರೌಂಡರ್ ಅಕ್ಷರ ಪಟೇಲ್, ‘ಟಿ20 ಗುಂಗಿನಿಂದ ಹೊರಬರಲು ಕಷ್ಟವೇನೂ ಆಗುತ್ತಿಲ್ಲ. ತಂಡ ಟೆಸ್ಟ್ ಕ್ರಿಕೆಟ್‌ಗೆ ಬೇಕಿರುವ ತಯಾರಿ ನಡೆಸುತ್ತಿದೆ. ಐಪಿಎಲ್ ವೇಳೆ ಡ್ಯೂಕ್ಸ್ ಚೆಂಡಿನಲ್ಲಿ ಅಭ್ಯಾಸ ನಡೆಸಿದ್ದೇವೆ. ಯಾವುದೇ ಸವಾಲಿಗೆ ಭಾರತೀಯ ಬೌಲರ್‌ಗಳು ಸಿದ್ಧರಿದ್ದೇವೆ’ ಎಂದಿದ್ದಾರೆ.
ಟೆಸ್ಟ್ ವಿಶ್ವಕಪ್ ಫೈನಲ್: ಋತುರಾಜ್ ಔಟ್, ಸ್ಪೋಟಕ ಬ್ಯಾಟರ್ ಯಶಸ್ವಿಗೆ ಜಾಕ್‌ಪಾಟ್
ಚಾಂಪಿಯನ್ ತಂಡಕ್ಕೆ ಸಿಗಲಿದೆ 13.2 ಕೋಟಿ ರುಪಾಯಿ ಬಹುಮಾನ:
2019-21ರ ಚೊಚ್ಚಲ ಆವೃತ್ತಿಯಂತೆಯೇ 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಪ್ರಶಸ್ತಿ ವಿಜೇತ ತಂಡಕ್ಕೆ 1.6 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 13.2 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ. ಜೂನ್ 7ರಿಂದ ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ರನ್ನರ್-ಅಪ್ ತಂಡ 8 ಲಕ್ಷ ಅಮೆರಿಕನ್ ಡಾಲರ್(ಸುಮಾರು 6.6 ಕೋಟಿ ರು.) ಪಡೆದುಕೊಳ್ಳಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.