ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಅಫ್ಘಾನಿಸ್ತಾನ ಸೋಲಿಸಿದ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ದಾಖಲಾಗಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ.
ಧರ್ಮಶಾಲಾ (ಅ.17): ಕ್ರಿಕೆಟ್ ಅಭಿಮಾನಿಗಳು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದ ಸುದ್ದಿಯಿಂದ ಸುಧಾರಿಸಿಕೊಳ್ಳುತ್ತಿರುವ ವೇಳೆಗಾಗಲೇ ಮತ್ತೊಂದು ಆಘಾತಕಾರಿ ಫಲಿತಾಂಶ ದಾಖಲಾಗಿದೆ. ನಾಲ್ಕು ಬಾರಿಯ ಏಕದಿನ ವಿಶ್ವಕಪ್ ಸೆಮಿಫೈನಲಿಸ್ಟ್ ಹಾಗೂ ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳ ಸಾಲಿನಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನೆದರ್ಲೆಂಡ್ ಭಾರೀ ಆಘಾತ ನೀಡಿದೆ. ಮಂಗಳವಾರ ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 38 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗು ಬಡಿಯಿತು.ಮಳೆಯ ಕಾರಣದಿಂದಾಗಿ ತಲಾ 43 ಓವರ್‌ಗೆ ಇಳಿಸಲಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ ಎಡ್ವರ್ಡ್ಸ್ ನಾಯಕತ್ವದ ನೆದರ್ಲೆಂಡ್ಸ್ ತಂಡ 8 ವಿಕೆಟ್‌ಗೆ 245 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಶಿಸ್ತಿನ ದಾಳಿ ನಡೆಸಿದ ನೆದರ್ಲೆಂಡ್ಸ್ ತಂಡ 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 42.5 ಓವರ್‌ಗಳಲ್ಲಿ 207 ರನ್‌ಗೆ ಆಲೌಟ್ ಮಾಡಿ ಗೆಲುವು ಕಂಡಿತು.
ದಕ್ಷಿಣ ಆಫ್ರಿಕಾ ತಂಡದಲ್ಲಿ ಸೂಕ್ತ ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ 2010ರಲ್ಲಿ ದಕ್ಷಿಣ ಆಫ್ರಿಕಾವನ್ನು ತೊರೆದು ನೆದರ್ಲೆಂಡ್ಸ್‌ಗೆ ಶಿಫ್ಟ್ ಆಗಿದ್ದ ಆಲ್ರೌಂಡರ್ ರಾಲ್ಫ್ ವಾನ್ ಡೆರ್ ಮರ್ವ್ ತಂಡದ ಗೆಲುವಿನ ಸೂತ್ರಧಾರಿ ಎನಿಸಿದ್ದರು. ಬ್ಯಾಟಿಂಗ್ ವೇಳೆ 19 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 29 ರನ್ ಬಾರಿಸಿದ್ದ ಮರ್ವ್, ಬೌಲಿಂಗ್ ವೇಳೆ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದ್ದರು. ನಾಯಕ ಟೆಂಬಾ ಬವುಮಾ ಹಾಗೂ ದಕ್ಷಿಣ ಆಫ್ರಿಕಾದ ಕಳೆದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಸ್ಸಿ ವಾನ್ ಡರ್ ಡುಸೆನ್‌ರಂಥ ವಿಕೆಟ್‌ಗಳನ್ನು ಮರ್ವ್ ಪಡೆಯುವ ಮೂಲಕ ಗೆಲುವಿಗೆ ಕಾರಣರಾದರು.
ಚೇಸಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಮುಖ ಆಟಗಾರರು ಕೈಕೊಟ್ಟರು. ಸ್ವಿಂಗ್ ಬೌಲಿಂಗ್‌ಗೆ ನೆರವೀಯುತ್ತಿದ್ದ ಪಿಚ್‌ನ ಲಾಭ ಪಡೆದ ನೆದರ್ಲೆಂಡ್ ಬೌಲರ್‌ಗಳು 44 ರನ್‌ಗೆ ದಕ್ಷಿಣ ಆಫ್ರಿಕಾದ ನಾಲ್ಕು ಪ್ರಮುಖ ವಿಕೆಟ್ ಉರುಳಿಸಿದ್ದರು. ಕಳೆದ ಎರಡೂ ಪಂದ್ಯಗಳಲ್ಲಿ ಮಿಂಚಿದ್ದ ಕ್ವಿಂಟನ್ ಡಿ ಕಾಕ್ (20), ನಾಯಕ ಟೆಂಬಾ ಬವುಮಾ (16), ಏಡೆನ್ ಮಾರ್ಕ್ರಮ್ (1) ಹಾಗೂ ರಸ್ಸಿ ವಾನ್ ಡರ್ ಡುಸನ್ (44) ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದ್ದು ದಕ್ಷಿಣ ಆಫ್ರಿಕಾದ ಮಾಜಿ ಪ್ಲೇಯರ್ ವಾನ್ ಡೆರ್ ಮರ್ವ್. ಆ ಬಳಿಕ ದಕ್ಷಿಣ ಆಫ್ರಿಕಾ ಕೆಲ ಕಾಲ ಹೋರಾಟ ನಡೆಸಿತು. ಹೆನ್ರಿಚ್ ಕ್ಲಾಸೆನ್ (28 ರನ್, 28 ಎಸೆತ, 4 ಬೌಂಡರಿ) ಹಾಗೂ ಡೇವಿಡ್ ಮಿಲ್ಲರ್ (43 ರನ್, 52 ಎಸೆತ, 4 ಬೌಂಡರಿ, 1 ಸಿಕ್ಸರ್) ಆಡುವಾಗ ದಕ್ಷಿಣ ಆಫ್ರಿಕಾ ಗೆಲುವು ಕಾಣಬಹುದು ಎನ್ನುವ ನಿರೀಕ್ಷೆ ಇಡಲಾಗಿತ್ತು.
ಈ ವೇಳೆ ದಾಳಿಗಿಳಿದ ವಾನ್ ಬೀಕ್, ಕ್ಲಾಸೆನ್‌ರನ್ನು ಪೆವಿಲಿಯನ್‌ಗಟ್ಟಿದರೆ, ನಂತರ ಬಂದ ಮಾರ್ಕೋ ಜಾನ್ಸೆನ್ (9) ತಂಡದ ಮೊತ್ತ 100ರ ಗಡಿ ದಾಟುವವರೆಗೆ ಕ್ರೀಸ್‌ನಲ್ಲಿದ್ದರು. ಜಾನ್ಸೆನ್ ವಿಕೆಟ್‌ಅನ್ನು ಮೀಕರೆನ್ ಉರುಳಿಸಿದ ಬಳಿಕ ಮಿಲ್ಲರ್‌ಗೆ ಗೆರಾಲ್ಡ್ ಕೋಯೆಟ್ಜೆ ಜೊತೆಯಾದರು. ತಂಡದ ಮೊತ್ತವನ್ನು 150ರ ಸನಿಹ ತರುವ ಹಂತದಲ್ಲಿ ಮಿಲ್ಲರ್ ಹಾಗೂ ಗೋಯೆಟ್ಜೆ ಇಬ್ಬರೂ ಔಟಾದಾಗ ದಕ್ಷಿಣ ಆಫ್ರಿಕಾ ಸೋಲು ಕಾಣುವುದು ಖಚಿತವಾಗಿತ್ತು. ಕೊನೆಯಲ್ಲಿ ಕೇಶವ್ ಮಹಾರಾಜ್ (40) ಹಾಗೂ ಲುಂಜಿ ಎನ್‌ಗಿಡಿ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡದ ಸ್ಥಿತಿಯೂ ಭಿನ್ನವಾಗಿರಲಿಲ್ಲ. 112 ರನ್‌ಗೆ 6 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕೊನೆಯ ಹಂತದಲ್ಲಿ, ನಾಯಕ ಸ್ಕಾಟ್ ಎಡ್ವರ್ಡ್ಸ್ (78 ರನ್, 69 ಎಸೆತ, 10 ಬೌಂಡರಿ, 1 ಸಿಕ್ಸರ್) ಆಕರ್ಷಕ ಅರ್ಧಶತಕ ಬಾರಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಇವರಿಗೆ ಸಾಥ್ ನೀಡಿದ ತೇಜ ನಿಡಮನೂರು (20) ವಾನ್ ಡೆರ್ ಮರ್ವ್ (29) ಹಾಗೂ ಆರ್ಯನ್ ದತ್ (23ರನ್, 9 ಎಸೆತ, 3 ಸಿಕ್ಸರ್) ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಭಾರತ ವಿರುದ್ಧ ಸೋಲು ಕಂಡ ಬೆನ್ನಲ್ಲಿಯೇ ಪಾಕಿಸ್ತಾನದ ಆಟಗಾರರಿಗೆ ಶುರು ಚಳಿಜ್ವರ