
ಚಂಡೀಗಢ: ಭಾರತ ತಂಡ 2027ರ ಏಕದಿನ ವಿಶ್ವಕಪ್ ಗೆಲ್ಲಬೇಕಾದರೆ, ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರರ ಸ್ಥಾನದಿಂದ ಅಜಿತ್ ಅಗರ್ಕರ್ ಅವರನ್ನು ತೆಗೆದುಹಾಕಬೇಕು ಎಂದು ತಾನು ಹೇಳಿದ್ದಾಗಿ ಹರಿದಾಡುತ್ತಿರುವ ಪ್ರಚಾರದ ಬಗ್ಗೆ ಮಾಜಿ ಭಾರತೀಯ ಆಟಗಾರ ನವಜೋತ್ ಸಿಧು ಸ್ಪಷ್ಟನೆ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತ ನಂತರ, ಸಿಧು ಗಂಭೀರ್ ಮತ್ತು ಅಗರ್ಕರ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಆದರೆ, ತಾನು ಮನಸ್ಸಿನಲ್ಲೂ ಯೋಚಿಸದ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಮತ್ತು ತಾನು ಎಂದಿಗೂ ಹಾಗೆ ಹೇಳಿಲ್ಲ ಎಂದು ಸಿಧು ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಗಂಭೀರ್ ಮತ್ತು ಅಗರ್ಕರ್ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಈಗ ಪೀಳಿಗೆಯ ಬದಲಾವಣೆ ನಡೆಯುತ್ತಿದೆ.
ರೋಹಿತ್ ಶರ್ಮಾ ಅವರನ್ನು ಬದಲಿಸಿ ಶುಭ್‌ಮನ್ ಗಿಲ್ ಅವರನ್ನು ಭಾರತ ಏಕದಿನ ತಂಡದ ನಾಯಕರನ್ನಾಗಿ ಮಾಡಿದ್ದಕ್ಕೆ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ವಿರುದ್ದ ಈ ಹಿಂದೆಯೂ ಟೀಕೆಗಳು ಕೇಳಿ ಬಂದಿದ್ದವು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆಯಾದರೂ, ಅವರಿಬ್ಬರೂ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಎನ್ನುವ ಪ್ರಶ್ನೆಗೆ ಹೆಡ್ ಕೋಚ್ ಗೌತಮ್ ಗಂಭೀರ್ ಆಗಲಿ ಅಥವಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಯಾವುದೇ ಖಚಿತ ಮಾಹಿತಿ ಬಿಟ್ಟುಕೊಡುತ್ತಿಲ್ಲ.
2027ರ ವಿಶ್ವಕಪ್‌ಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ, ಸದ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ ಎಂದು ಗಂಭೀರ್ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಶತಕ ಬಾರಿಸಿದರೂ ಅವರಿಬ್ಬರೂ ಏಕದಿನ ವಿಶ್ವಕಪ್ ತಂಡದಲ್ಲಿ ಇರುತ್ತಾರೆಯೇ ಎಂದು ಹೇಳಲಾಗುವುದಿಲ್ಲ, ವೈಯಕ್ತಿಕ ಪ್ರದರ್ಶನಗಳಿಗಿಂತ ಪ್ರಶಸ್ತಿಗಳನ್ನು ಗೆಲ್ಲುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದರು.
ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಿಗ್ಗಜ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಬರೋಬ್ಬರಿ ಏಳು ತಿಂಗಳ ಬಳಿಕ ಟೀಂ ಇಂಡಿಯಾ ಕೂಡಿಕೊಂಡ ರೋಹಿತ್ ಹಾಗೂ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ರೋಹಿತ್ ಶರ್ಮಾ ಕೇವಲ 8 ರನ್ ಗಳಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಟೀಂ ಇಂಡಿಯಾ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಎಂಟು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.