ಮನೀಶ್ ಪಾಂಡೆ ಭರ್ಜರಿ ಶತಕ, ಕರ್ನಾಟಕಕ್ಕೆ ಬೃಹತ್ ಗೆಲುವು!

By Web Desk  |  First Published Nov 13, 2019, 10:07 AM IST

ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಬೃಹತ್ ಗೆಲುವು ಸಾಧಿಸಿದೆ. ಸರ್ವೀಸಸ್ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ಮನೀಶ್ ಪಾಂಡೆ ಸೆಂಚುರಿ ನೆರವಿನಿಂದ ಕರ್ನಾಟಕ ದಾಖಲೆಯ ಗೆಲುವು ಕಂಡಿದೆ.


ವಿಶಾಖಪಟ್ಟಣಂ(ನ.13): ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಜಯದ ಲಯ ಮುಂದುವರಿಸಿದೆ. ಭಾನುವಾರವಷ್ಟೇ ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಆಡಿದ್ದ ಮನೀಶ್ ಪಾಂಡೆ, ಮಂಗಳವಾರ ಇಲ್ಲಿ ನಡೆದ ಸರ್ವಿಸಸ್ ವಿರುದ್ಧ ಪಂದ್ಯದಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದರು. ತಂಡದ ನಾಯಕತ್ವ ವಹಿ ಸಿಕೊಂಡಿದ್ದು ಮಾತ್ರವಲ್ಲದೆ, ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಪಾಂಡೆ, ಸ್ಫೋಟಕ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಇದನ್ನೂ ಓದಿ:  ಮುಷ್ತಾಕ್ ಅಲಿ ಟ್ರೋಫಿ: ಪಡಿಕ್ಕಲ್ ಶತಕ, ಕರ್ನಾಟಕಕ್ಕೆ ಭರ್ಜರಿ ಜಯ

Tap to resize

Latest Videos

undefined

80 ರನ್‌ಗಳಿಂದ ಪಂದ್ಯ ಗೆದ್ದ ಕರ್ನಾಟಕ, ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ಸೋಮವಾರ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಆಡಿದರು. ಕರ್ನಾಟಕ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬೆಟ್ಟದಂತಹ ಗುರಿ ಬೆನ್ನತ್ತಿದ ಸರ್ವಿಸಸ್, 20 ಓವರಲ್ಲಿ 7 ವಿಕೆಟ್‌ಗೆ 170 ರನ್ ಗಳಿಸಿ ಶರಣಾಯಿತು.

ಇದನ್ನೂ ಓದಿ:  ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕೆ ದಾಖಲೆ ಜಯ!

ಶ್ರೇಯಸ್‌ಗೆ 5 ವಿಕೆಟ್: 251 ರನ್ ಗುರಿ ಬೆನ್ನತ್ತಲು ಇಳಿದ ಸರ್ವಿಸಸ್‌ಗೆ ವಿ.ಕೌಶಿಕ್ ಆರಂಭಿಕ ಆಘಾತ ನೀಡಿದರು. ನಕುಲ್ ವರ್ಮಾ (06) ಬೇಗನೆ ಕ್ರೀಸ್ ತೊರೆದರು. ರವಿ ಚೌವ್ಹಾಣ್(54), ಅನ್ಶುಲ್ ಗುಪ್ತ (29) ಹಾಗೂ ನಾಯಕ ರಜತ್ ಪಲಿವಾಲ್(46) ಹೋರಾಟ ನಡೆಸಿದರೂ ಸರ್ವಿಸಸ್, ಕರ್ನಾಟಕ ನೀಡಿದ ಗುರಿಯ ಹತ್ತಿರಕ್ಕೂ ಬರಲು ಸಾಧ್ಯವಾಗಲಿಲ್ಲ. ತಾರಾ ಸ್ಪಿನ್ನರ್ ಶ್ರೇಯಸ್ ಗೋಪಾಲ್ 4 ಓವರಲ್ಲಿ ಕೇವಲ 19 ರನ್ ನೀಡಿ 5 ವಿಕೆಟ್ ಕಬಳಿಸಿದರು. ಸರ್ವಿಸಸ್ ತಂಡವನ್ನು ಆಲೌಟ್ ಮಾಡುವಲ್ಲಿ ಕರ್ನಾಟಕ ವಿಫಲವಾದರೂ, ಉತ್ತಮ ನೆಟ್ ರನ್ ರೇಟ್ ಸಂಪಾದಿಸಿತು.

ಪಾಂಡೆ ಅಬ್ಬರ: ಟಾಸ್ ಗೆದ್ದ ಸರ್ವಿಸಸ್, ಕರ್ನಾಟಕವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ರೋಹನ್ ಕದಂ (04) ಮೊದಲ ಓವರಲ್ಲೇ ಔಟಾದರು. 2ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ದೇವದತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆ ಸರ್ವಿಸಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪಾಂಡೆ 26 ಎಸೆತಗಳಲ್ಲಿ 50 ರನ್ ಪೂರೈಸಿದರೆ, ದೇವದತ್ 30೦ ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

42 ಎಸೆತಗಳಲ್ಲಿ 8ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 75 ರನ್ ಸಿಡಿಸಿದ ದೇವದತ್ 15ನೇ ಓವರಲ್ಲಿ ವಿಕೆಟ್ ಕಳೆದುಕೊಂಡರು. ಇದರೊಂದಿಗೆ 167 ರನ್‌ಗಳ ಜೊತೆಯಾಟಕ್ಕೆ ತೆರೆಬಿತ್ತು. ದೊಡ್ಡ ಜೊತೆಯಾಟ ಮುರಿದರೂ, ಸರ್ವಿಸಸ್ ಬೌಲರ್‌ಗಳಿಂದ ಪಾಂಡೆ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ. 44 ಎಸೆತಗಳಲ್ಲಿ ಶತಕ ಪೂರೈಸಿದ ಪಾಂಡೆ, 54 ಎಸೆತಗಳಲ್ಲಿ 12ಬೌಂಡರಿ, 10 ಸಿಕ್ಸರ್‌ಗಳೊಂದಿಗೆ 129 ರನ್ ಗಳಿಸಿ ಅಜೇಯರಾಗಿ ಉಳಿದರು. ಕೆ.ಗೌತಮ್ 15 ಎಸೆತಗಳಲ್ಲಿ 23 ರನ್ ಸಿಡಿಸಿ ತಂಡ ದೊಡ್ಡ ಮೊತ್ತ ಪೇರಿಸಲು ನೆರವಾದರು. 

ಸ್ಕೋರ್: ಕರ್ನಾಟಕ 20 ಓವರಲ್ಲಿ 250/3 (ಪಾಂಡೆ ಅಜೇಯ 129, ದೇವದತ್ 75, ದಿವೇಶ್ 1-28), 
ಸರ್ವಿಸಸ್ 20 ಓವರಲ್ಲಿ 170/7 (ರವಿ 54, ರಜತ್ 46, ಶ್ರೇಯಸ್ ಗೋಪಾಲ್ 5-19)

ಇನ್ನು 2 ಪಂದ್ಯ ಬಾಕಿ
ಕರ್ನಾಟಕ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 12 ಅಂಕ ಕಲೆಹಾಕಿದೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯ ತಂಡ ಮುಂದಿನ ಪಂದ್ಯವನ್ನು ನ.15ರಂದು ಬಿಹಾರವನ್ನು ಎದುರಿಸಲಿದ್ದು ಮತ್ತೊಂದು ದೊಡ್ಡ ಗೆಲುವಿನ ಮೇಲೆ ಕಣ್ಣಿಟ್ಟಿದೆ. ನ.17ರಂದು ನಡೆಯುವ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ, ಗೋವಾ ವಿರುದ್ಧ ಸೆಣಸಲಿದೆ. ಈ ಎರಡು ಪಂದ್ಯಗಳಲ್ಲಿ ಗೆದ್ದರೆ ಸೂಪರ್ ಲೀಗ್ ಹಂತಕ್ಕೆ ಪ್ರವೇಶ ಖಚಿತವಾಗಲಿದೆ.

click me!