
ಮುಂಬೈ(ಏ.24): ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಾಲು ಸಾಲು ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ ಮೊದಲ ಏಳೂ ಪಂದ್ಯಗಳಲ್ಲೂ ಸೋಲು ಅನುಭವಿಸಿದ್ದು, ಈಗಾಗಲೇ ಸೆಮೀಸ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಇದೀಗ ಮುಂಬೈ ತಂಡವು ಇನ್ನುಳಿಂದ ಪಂದ್ಯಗಳನ್ನು ಜಯಿಸುವ ಮೂಲಕ ತಮ್ಮ ಫ್ಯಾನ್ಸ್ ಖುಷಿ ಪಡಿಸುವ ಲೆಕ್ಕಾಚಾರದಲ್ಲಿದೆ.
ಮುಂಬೈ ಇಂಡಿಯನ್ಸ್ (Mumbai Indians) ತಂಡವು ಗೆಲುವು ಸಾಧಿಸಬೇಕಿದ್ದರೆ, ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ಇಶಾನ್ ಕಿಶನ್ (Ishan Kishan) ದೊಡ್ಡ ಇನಿಂಗ್ಸ್ ಆಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಅಗ್ರಕ್ರಮಾಂಕದಲ್ಲಿ ಈ ಇಬ್ಬರು ಬ್ಯಾಟರ್‌ಗಳು ತಂಡಕ್ಕೆ ಉತ್ತಮ ಆರಂಭ ಒದಗಿಸದೇ ಹೋದರೆ, ಇನ್ನುಳಿದ ಪಂದ್ಯಗಳಲ್ಲೂ ಮುಂಬೈ ಇಂಡಿಯನ್ಸ್ ತಂಡವು ಸೋಲು ಅನುಭವಿಸಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ
ಇದೀಗ ಮುಂಬೈ ಇಂಡಿಯನ್ಸ್ ತಂಡವಿಂದು ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಸವಾಲು ಸ್ವೀಕರಿಸಲು ಸಜ್ಜಾಗಿದೆ. ಈ ಪಂದ್ಯದ ಕುರಿತಂತೆ ತಮ್ಮದೇ ಯೂಟೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಆಕಾಶ್ ಚೋಪ್ರಾ, ವಾಂಖೆಡೆ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಹೊಂದಿದೆ. ಈ ಮೊದಲು ಜೋಸ್ ಬಟ್ಲರ್ (Jos Buttler) ಇದೇ ಪಿಚ್‌ನಲ್ಲಿ ರನ್ ಮಳೆ ಹರಿಸಿದ್ದಾರೆ ಎನ್ನುವುದನ್ನು ವಿಶ್ಲೇಷಿಸಿದ್ದಾರೆ.
ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ದೊಡ್ಡ ಇನಿಂಗ್ಸ್ ಆಡದೇ ಹೋದರೆ ಮುಂಬೈ ಇಂಡಿಯನ್ಸ್ ತಂಡವು ಗೆಲ್ಲಲು ಸಾಧ್ಯವೇ ಇಲ್ಲ. ಒಳ್ಳೆಯ ಬ್ಯಾಟಿಂಗ್ ಪಿಚ್‌ನಲ್ಲಿ ಆರಂಭಿಕರಾದವರು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಬೇಕು. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ಈಗಾಗಲೇ ಮೂರು ಶತಕ ಸಿಡಿಸಿದ್ದಾರೆ. ಈ ಪಿಚ್‌ನಲ್ಲಂತೂ ಅವರು ಉತ್ತಮ ಇನಿಂಗ್ಸ್ ಆಡಿದ್ದಾರೆ. ಬಟ್ಲರ್ ಮಾತ್ರವಲ್ಲದೇ ಉಳಿದ ಬ್ಯಾಟರ್‌ಗಳು ಕೂಡಾ ಈ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
IPL 2022: ಲಖನೌ ಎದುರು ಇಂದಾದ್ರೂ ಗೆಲ್ಲುತ್ತಾ ಮುಂಬೈ ಇಂಡಿಯನ್ಸ್..?
ಮುಂಬೈ ಇಂಡಿಯನ್ಸ್ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಆದರೆ ಒಂದಿಬ್ಬರಿಂದ ಏನು ಮಾಡಲು ಸಾಧ್ಯ. ಕೀರನ್ ಪೊಲ್ಲಾರ್ಡ್ ಅವರ ಬ್ಯಾಟಿಂದ ರನ್ ಹರಿದು ಬರುತ್ತಲೇ ಇಲ್ಲ. ಮುಂಬೈ ಇಂಡಿಯನ್ಸ್ ತಂಡವು ತನ್ನ ಸಮತೋಲನವನ್ನು ಕಳೆದುಕೊಂಡಿದೆ. ಮುಂಬೈ ತಂಡವು 6 ಬ್ಯಾಟರ್‌ಗಳನ್ನು ಹೊಂದಿದ್ದು, ಪೊಲ್ಲಾರ್ಡ್ ಹಾಗೂ ತಿಲಕ್ ವರ್ಮಾ ಹೊರತುಪಡಿಸಿ ಉಳಿದವರ್ಯಾರು ಸರಿಯಾಗಿ ಬ್ಯಾಟ್ ಬೀಸುತ್ತಿಲ್ಲ.
ಐಪಿಎಲ್ ಇತಿಹಾಸದಲ್ಲಿನ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡವು, ಇದೀಗ ಮೊದಲ 7 ಪಂದ್ಯಗಳನ್ನು ಸೋಲುವ ಮೂಲಕ ಐಪಿಎಲ್‌ನ ಆರಂಭಿಕ 7 ಪಂದ್ಯಗಳನ್ನು ಸೋತ ಮೊದಲ ತಂಡ ಎನ್ನುವ ಕುಖ್ಯಾತಿಗೂ ಪಾತ್ರವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.