
ಮುಂಬೈ(ಮೇ.10): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ಯಶಸ್ವಿಯಾಗಿ ಗುರಿ ಬೆನ್ನತ್ತುವಲ್ಲಿ ಸಫಲವಾಗಿದೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೀಡಿದ್ದ 200 ರನ್‌ಗಳ ಗುರಿಯನ್ನು ಇನ್ನೂ 21 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅನಾಯಾಸ ಗೆಲುವು ಸಾಧಿಸಿದೆ.
ಸೂರ್ಯಕುಮಾರ್ ಯಾದವ್, ತಾವು ಯಾಕೆ ಆಧುನಿಕ ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ. ಆರ್‌ಸಿಬಿ ಎದುರು ಸೂರ್ಯಕುಮಾರ್ ಯಾದವ್ ಕೇವಲ 35 ಎಸೆತಗಳಲ್ಲಿ ಸ್ಪೋಟಕ 83 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಹೀಗಾಗಿಯೇ ಮುಂಬೈ ಇಂಡಿಯನ್ಸ್ ತಂಡವು 17 ಓವರ್ ಮುಗಿಯುವ ಮುನ್ನವೇ ಗೆಲುವಿನ ಕೇಕೆ ಹಾಕಿತು. ಇನ್ನು ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಎರಡು ಸಾರ್ವಕಾಲಿಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆವೃತ್ತಿಯೊಂದರಲ್ಲಿ ಅತಿಹೆಚ್ಚು ಬಾರಿ 200+ ಚೇಸ್ ಮಾಡಿದ ತಂಡ
ಹೌದು, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೂರನೇ ಬಾರಿಗೆ 200+ ರನ್ ಗುರಿ ಬೆನ್ನತ್ತಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಒಂದೇ ಆವೃತ್ತಿಯಲ್ಲಿ ಎರಡಕ್ಕಿಂತ ಹೆಚ್ಚು ಬಾರಿ 200+ ರನ್ ಗುರಿ ಬೆನ್ನತ್ತಿದ ಮೊದಲ ತಂಡ ಎನ್ನುವ ಅಪರೂಪದ ಐಪಿಎಲ್ ದಾಖಲೆ ನಿರ್ಮಿಸಿದೆ. ಈ ಮೊದಲು ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಆವೃತ್ತಿಯೊಂದರಲ್ಲಿ ಎರಡು ಬಾರಿ 200+ ರನ್ ಯಶಸ್ವಿಯಾಗಿ ಚೇಸ್ ಮಾಡಿವೆ. ಇನ್ನು ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಎದುರು 200+ ರನ್ ಚೇಸ್ ಮಾಡಿತ್ತು.
'ಟೇಬಲ್ ತುಂಬಾ ಟೈಟ್ ಆಗಿದೆ'; ಮುಂಬೈ ಎದುರಿನ ಸೋಲಿನ ಬೆನ್ನಲ್ಲೇ RCB ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?
ಅತಿಹೆಚ್ಚು ಬಾರಿ 200+ ಚೇಸ್ ಮಾಡಿದ ತಂಡಗಳು:
2023- ಮುಂಬೈ ಇಂಡಿಯನ್ಸ್ - 3
2018 - ಪಂಜಾಬ್ ಕಿಂಗ್ಸ್ - 2
2014 - ಚೆನ್ನೈ ಸೂಪರ್ ಕಿಂಗ್ಸ್ - 2
ಅತಿಹೆಚ್ಚು ಬಾಲ್ ಉಳಿಸಿ 200+ ಚೇಸ್ ಮಾಡಿದ ತಂಡ ಮುಂಬೈ ಇಂಡಿಯನ್ಸ್:
ಸೂರ್ಯಕುಮಾರ್ ಯಾದವ್ ಹಾಗೂ ನಿಹಾಲ್ ವಧೇರಾ ಅವರ ಸ್ಪೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ ತಂಡವು ಕೇವಲ 16.3 ಓವರ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಇನ್ನೂ 21 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಈ ಮೂಲಕ ಅತಿಹೆಚ್ಚು ಬಾಲ್ ಉಳಿಸಿ 200+ ರನ್ ಚೇಸ್ ಮಾಡಿದ ತಂಡ ಎನ್ನುವ ದಾಖಲೆಗೂ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.
ಈ ಮೊದಲು 2017ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಗುಜರಾತ್ ಟೈಟಾನ್ಸ್ ನೀಡಿದ್ದ 208 ರನ್‌ಗಳ ಗುರಿಯನ್ನು 15 ಎಸೆತ ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು. ಇದೀಗ ಆ ದಾಖಲೆಯನ್ನು ರೋಹಿತ್ ಶರ್ಮಾ ಪಡೆ ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ 11 ಪಂದ್ಯಗಳಲ್ಲಿ 5 ಗೆಲುವು ಹಾಗೂ 6 ಸೋಲುಗಳೊಂದಿಗೆ 10 ಅಂಕಗಳನ್ನು ಗಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.