ಭಾರತ ಎದುರು ಪಾಕ್ ಸೋಲುತ್ತಿದ್ದಂತೆ ಸ್ಟೇಡಿಯಂನಿಂದ ಓಡಿ ಹೋದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ! ವಿಡಿಯೋ ವೈರಲ್

Published : Feb 16, 2026, 04:11 PM IST
PCB Chief Mohsin Naqvi

ಸಾರಾಂಶ

ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 61 ರನ್‌ಗಳ ಹೀನಾಯ ಸೋಲು ಕಂಡಿದೆ. ಭಾರತ ನೀಡಿದ 176 ರನ್‌ಗಳ ಗುರಿ ಬೆನ್ನಟ್ಟಲಾಗದೆ ಪಾಕ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಈ ಕಳಪೆ ಪ್ರದರ್ಶನದಿಂದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಂದ್ಯದ ಮಧ್ಯದಲ್ಲೇ ಸ್ಟೇಡಿಯಂನಿಂದ ಹೊರನಡೆದರು.

ಕೊಲಂಬೊ: ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋಲುತ್ತಿದ್ದಾಗ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಂದ್ಯದ ಮಧ್ಯದಲ್ಲೇ ಸ್ಟೇಡಿಯಂನಿಂದ ಹೊರನಡೆದಿದ್ದಾರೆ. ಭಾನುವಾರ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 61 ರನ್‌ಗಳಿಂದ ಸೋಲಿಸಿತು. ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಇದು 8ನೇ ಗೆಲುವು.

ಭಾರತ ನೀಡಿದ್ದ 176 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊಹಮ್ಮದ್ ನವಾಜ್ ಔಟಾದಾಗ ಪಾಕ್ ಸ್ಕೋರ್ 78ಕ್ಕೆ 6 ವಿಕೆಟ್ ಆಗಿತ್ತು. ತಂಡದ ಈ ಕಳಪೆ ಪ್ರದರ್ಶನವನ್ನು ನೋಡಿದ ನಖ್ವಿ, ತಕ್ಷಣವೇ ಕಪ್ಪು ಕಾರಿನಲ್ಲಿ ಸ್ಟೇಡಿಯಂನಿಂದ ಹೊರಟುಹೋದರು. ಪಾಕಿಸ್ತಾನ ಸೋಲುವುದು ಕನ್ಫರ್ಮ್ ಆಗುತ್ತಿದ್ದಂತೆಯೇ ನಖ್ವಿ ಮೈದಾನದಿಂದ ಕಾಲ್ಕಿತ್ತಿದ್ದಾರೆ. ತಮಗೆ ಎಲ್ಲರೆದುರು ಮುಖಭಂಗ ಆಗಬಾರದು ಎಂದು ಹೀಗೆ ಓಡಿ ಹೋಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅವರು ಯಾಕೆ ಪಂದ್ಯದ ಮಧ್ಯದಲ್ಲಿ ಹೊರಟರು ಎಂಬುದಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

 

 

ಭಾರತ ಎದುರು ಪಾಕಿಸ್ತಾನಕ್ಕೆ ಹೀನಾಯ ಸೋಲು

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. ಇಶಾನ್ ಕಿಶನ್ 77 ರನ್‌ಗಳೊಂದಿಗೆ ಮಿಂಚಿದರು. ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರೂ, ತಿಲಕ್ ವರ್ಮಾ (25), ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರ ಉಪಯುಕ್ತ ಆಟದಿಂದ ಭಾರತ 20 ಓವರ್‌ಗಳಲ್ಲಿ 175/7 ಸ್ಕೋರ್ ಕಲೆಹಾಕಿತು. ಪಾಕಿಸ್ತಾನದ ಪರ ಸೈಮ್ ಅಯೂಬ್ ಮೂರು ವಿಕೆಟ್ ಪಡೆದು ಮಿಂಚಿದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಓವರ್‌ನಲ್ಲೇ ಹಾರ್ದಿಕ್ ಪಾಂಡ್ಯ ಶೆಹಜಾದ್‌ಗೆ ಪೆವಿಲಿಯನ್ ಹಾದಿ ತೋರಿಸಿದರೆ, ಎರಡನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಕಬಳಿಸಿ ಪಾಕ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕೇವಲ 34 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡಿತು. 44 ರನ್ ಗಳಿಸಿದ ಉಸ್ಮಾನ್ ಖಾನ್ ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು. ಅಂತಿಮವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 61 ರನ್ ಅಂತರದ ಹೀನಾಯ ಸೋಲು ಅನುಭವಿಸಿತು.

ಭಾರತೀಯ ಬೌಲರ್‌ಗಳು ಶಿಸ್ತಿನಿಂದ ಬೌಲಿಂಗ್ ಮಾಡಿದರೆ, ಪಾಕ್ ಬ್ಯಾಟ್ಸ್‌ಮನ್‌ಗಳಿಂದ ಉತ್ತರವೇ ಇರಲಿಲ್ಲ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್ ನಾಯಕನ ನಿರ್ಧಾರ ತಪ್ಪು ಎಂದು ಕ್ರಿಕೆಟ್ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಇನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಕೊಲಂಬೊದಲ್ಲಿ ಐಸಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಇರಲಿದ್ದಾರೆ ಎಂದು ತಿಳಿದುಬಂದಿದೆ.

ಏಷ್ಯಾಕಪ್ ಟ್ರೋಫಿ ಕಳ್ಳ ಮೊಹ್ಸಿನ್ ನಖ್ವಿ:

ಕೆಲ ತಿಂಗಳ ಹಿಂದೆ ನಡೆದ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಭಾರತದ ಕ್ರಿಕೆಟಿಗರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿಯವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದರು. ಸ್ವಲ್ಪ ಹೊತ್ತು ಕಾದರೂ ಭಾರತೀಯ ಆಟಗಾರರು ಮನಸ್ಸು ಬದಲಿಸಲಿಲ್ಲ. ಇದಾದ ಬಳಿಕ ಸಿಟ್ಟಿನಿಂದ ನಖ್ವಿ ಏಷ್ಯಾಕಪ್ ಕದ್ದುಕೊಂಡು ಹೋಟೆಲ್‌ಗೆ ಹೋದರು. ಇಂದಿಗೂ ನಖ್ವಿ ಟ್ರೋಫಿ ತಮ್ಮ ಬಳಿಯೇ ಇಟ್ಟುಕೊಂಡು ಕಳ್ಳಾಟ ಮಾಡುತ್ತಿದ್ದಾರೆ.

ಏಷ್ಯಾಕಪ್‌ ಗೆದ್ದ ಬಳಿಕ ಭಾರತ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ದಿನದಿಂದಲೂ ನಖ್ವಿ ಒಂದಿಲ್ಲೊಂದು ಷರತ್ತನ್ನು ಬಿಸಿಸಿಐ ಮುಂದಿಡುತ್ತಿದ್ದಾರೆ. ದುಬೈನಲ್ಲಿರುವ ಎಸಿಸಿ ಕಚೇರಿಗೆ ಬಿಸಿಸಿಐ ಅಧಿಕಾರಿಗಳು ಅಥವಾ ಆಟಗಾರರು ಭೇಟಿ ನೀಡಿ ತಮ್ಮಿಂದಲೇ ಟ್ರೋಫಿ ಪಡೆಯಬೇಕು ಎನ್ನುತ್ತಿದ್ದಾರೆ.

ಮೂಲಗಳ ಪ್ರಕಾರ ಬಿಸಿಸಿಐ ಅಧಿಕಾರಿಯೊಬ್ಬರು ಇತ್ತೀಚೆಗಷ್ಟೇ ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಬಳಿ ಟ್ರೋಫಿ ಕುರಿತು ವಿಚಾರಿಸಿದಾಗ ಅದನ್ನು ಕಚೇರಿಯಿಂದ ನಖ್ವಿ ತೆಗೆದುಕೊಂಡು ಹೋಗಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್
ಪಾಕಿಸ್ತಾನದ್ದು ಬರೀ ಒಣ ಪೌರುಷ, 1-8 ರಿಂದ ಘೋರ ಅವಮಾನ..! ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪಾಕ್ ಹೇಗೆಲ್ಲಾ ಶರಣಾಗಿದೆ ಗೊತ್ತಾ?