
Mohammed Shami Biryani Story | ಭಾರತೀಯ ಕ್ರಿಕೆಟ್ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರೆಂದರೆ ಅದು ಅನುಭವಿ ವೇಗಿ ಮೊಹಮ್ಮದ್ ಶಮಿ ಅವರದ್ದು. ಅದರಲ್ಲೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತೆ ಶಮಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಕೋಚ್ ಆಗಿದ್ದ ರವಿಶಾಸ್ತ್ರಿ, ಮೊಹಮ್ಮದ್ ಶಮಿ ಅವರ ಬಿರ್ಯಾನಿ ಮೇಲಿನ ಪ್ರೀತಿಯ ಕುರಿತಂತೆ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
ಮೊಹಮ್ಮದ್ ಶಮಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಶಮಿ, ಆಬಳಿಕ ಫಿಟ್ನೆಸ್ ಸಾಧಿಸಿ, ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಬಂಗಾಳ ಮೂಲದ ವೇಗಿಯನ್ನು ಕಡೆಗಣಿಸುತ್ತಲೇ ಬಂದಿದ್ದರು. ಇನ್ನು ಟೀಂ ಇಂಡಿಯಾದ ಮತ್ತೋರ್ವ ವೇಗಿ ಭುವನೇಶ್ವರ್ ಕುಮಾರ್ ಪರಿಸ್ಥಿತಿ ಕೂಡಾ ಶಮಿಗಿಂತ ಭಿನ್ನವಾಗಿರಲಿಲ್ಲ. ಕಳೆದೆರಡು ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಭುವಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪ್ರಗ್ಯಾನ್ ಓಜಾ ನೇತೃತ್ವದ ಹಂಗಾಮಿ ಆಯ್ಕೆ ಸಮಿತಿಯು ಕಿವೀಸ್ ಎದುರಿನ ಟಿ20 ಸರಣಿಗೆ ಭುವನೇಶ್ವರ್ ಕುಮಾರ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದೆ. ಇದೀಗ ಶಮಿ, ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ಎದುರು ಮಾರಕ ದಾಳಿ ನಡೆಸಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಿವೀಸ್ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡ ಕೂಡಿಕೊಳ್ಳಲು ಅವರು ಕನಸು ಕಾಣುತ್ತಿದ್ದಾರೆ.
ಕಪಿಲ್ ಶರ್ಮಾ ಅವರ ಕಾಮಿಡಿ ಶೋನಲ್ಲಿ ಪಾಲ್ಗೊಂಡಿದ್ದ ರವಿಶಾಸ್ತ್ರಿ, ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಸಿಟ್ಟಿನಿಂದ ಬೈದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಕಪಿಲ್ ಶರ್ಮಾ, ನೀವು ಶಮಿ ಬಿರ್ಯಾನಿ ತಿನ್ನುವುದನ್ನು ನೋಡಿ ಅವರಿಗೆ ಬೈದಿದ್ದರೆಂದು ಕೇಳಿದ್ದೇವೆ. ಅಷ್ಟಕ್ಕೂ ಏನದು ಘಟನೆ ಎಂದು ಕೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರವಿಶಾಸ್ತ್ರಿ, ಅದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪೈಪೋಟಿಯಿಂದ ಕೂಡಿದ್ದ ಮ್ಯಾಚ್ ಆಗಿತ್ತು. ದಕ್ಷಿಣ ಆಫ್ರಿಕಾ ಗೆಲ್ಲಲು ಕೇವಲ 100 ರನ್‌ಗಳು ಬೇಕಿತ್ತು. ಹರಿಣಗಳ ಪಡೆಯ ಕೈಯಲ್ಲಿ ಇನ್ನೂ ಎಂಟು ವಿಕೆಟ್‌ಗಳಿದ್ದವು. ಇನ್ನು ಲಂಚ್ ಬ್ರೇಕ್ ವೇಳೆಯಲ್ಲಿ ಶಮಿ ಸಿಕ್ಕಾಪಟ್ಟೆ ಬಿರ್ಯಾನಿ ತಿನ್ನುತ್ತಿದ್ದರು. ನಾನದನ್ನು ನೋಡಿ, ಆಗ ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್ ಅವರನ್ನು ಕರೆದು, ಶಮಿ ಬಳಿ ಹೋಗಿ ಯಾಕಿಷ್ಟು ಬಿರ್ಯಾನಿ ತಿನ್ನುತ್ತಿದ್ದಾನೆ ಎಂದು ಕೇಳಿ. ಯಾಕೆಂದರೆ ಆತ ಚೆನ್ನಾಗಿ ಬೌಲಿಂಗ್ ಮಾಡಬೇಕು. ಹೀಗೆ ಬಿರ್ಯಾನಿ ತಿಂದ್ರೆ ಬೌಲಿಂಗ್ ಮಾಡೋದು ಕಷ್ಟ. ಎಚ್ಚರವಾಗಿರಲು ಹೇಳಿದ್ದೆ.
ಇದನ್ನು ಕೇಳಿ ಮೊಹಮ್ಮದ್ ಶಮಿ ಅಕ್ಷರಶಃ ಸಿಟ್ಟಾಗಿ ಹೋದರು. ತಮ್ಮ ಮೇಲಿನ ಕೋಪದಲ್ಲೇ ಮೈದಾನಕ್ಕಿಳಿದ ಶಮಿ ಕೇವಲ ಆರು ಓವರ್ ಬೌಲಿಂಗ್ ಮಾಡಿ ಐದು ವಿಕೆಟ್ ಕಬಳಿಸಿದರು. ಇದರಿಂದ ಭಾರತ ತಂಡವು ಆ ಟೆಸ್ಟ್ ಪಂದ್ಯವನ್ನು ಗೆದ್ದಿತು. ಇದಾದ ನಂತರ ನಾನು ಮತ್ತೆ ಭರತ್ ಅರುಣ್ ಅವರನ್ನು ಕರೆದು, ಈಗ ಬಿಸಿಬಿಸಿ ಬಿರ್ಯಾನಿಯನ್ನು ತೆಗೆದುಕೊಂಡು ಹೋಗಿ ಶಮಿ ಅವರಿಗೆ ಕೊಡಿ ಎಂದು ಹೇಳಿದ್ದೆ ಎಂದು ಆ ದಿನಗಳನ್ನು ರವಿಶಾಸ್ತ್ರಿ ಮೆಲುಕು ಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.