ಮಿಷನ್‌ 2023: ಇಂದಿನಿಂದ ಭಾರತ ತಯಾರಿ, ಇಂಡೋ-ಲಂಕಾ ಮೊದಲ ಒನ್‌ಡೇ ಕದನ

By Kannadaprabha NewsFirst Published Jan 10, 2023, 11:19 AM IST
Highlights

ಲಂಕಾ ವಿರುದ್ಧ ಇಂದು ಮೊದಲ ಏಕದಿನ
ಏಕದಿನ ವಿಶ್ವಕಪ್‌ಗೆ ತಯಾರಿ ಆರಂಭಿಸಲಿರುವ ಭಾರತ
ಟೀಂ ಇಂಡಿಯಾಗೆ ಆಯ್ಕೆ ಗೊಂದಲ
ಶ್ರೇಯಸ್‌-ಸೂರ್ಯ, ಕುಲ್ದೀಪ್‌-ಚಹಲ್‌ ನಡುವೆ ಪೈಪೋಟಿ
 

ಗುವಾಹಟಿ(ಜ.10): ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ 10 ತಿಂಗಳಷ್ಟೇ ಬಾಕಿ ಇದ್ದು, ಶ್ರೀಲಂಕಾ ವಿರುದ್ಧ ಮಂಗಳವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಟೀಂ ಇಂಡಿಯಾ ತನ್ನ ತಯಾರಿ ಆರಂಭಿಸಲಿದೆ. ಅಚ್ಚರಿ ವಿಷಯವೆಂದರೆ ಕಳೆದ 3 ವರ್ಷದಲ್ಲಿ ಭಾರತ ತವರಿನಲ್ಲಿ ಕೇವಲ 12 ಏಕದಿನ ಪಂದ್ಯಗಳನ್ನಷ್ಟೇ ಆಡಿದೆ. ಹೀಗಾಗಿ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಸರಿಯಾದ ಅಭ್ಯಾಸ ಹಾಗೂ ತಂಡ ಸಂಯೋಜನೆ ಪರಿಪಕ್ವಗೊಳಿಸಿಕೊಳ್ಳಲು ಭಾರತ ಸಾಕಷ್ಟುಪರಿಶ್ರಮ ವಹಿಸಬೇಕಿದೆ. ಅಲ್ಲದೇ ಹಿಂದಿನ 2 ಏಕದಿನ ಸರಣಿಗಳಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್‌ ವಿರುದ್ಧ ಭಾರತ ಸೋಲುಂಡಿತ್ತು. ಹೀಗಾಗಿ ತಂಡ ಒತ್ತಡದಲ್ಲೇ ಕಣಕ್ಕಿಳಿಯಲಿದೆ.

ಮೊದಲು ಟಿ20 ಗುಂಗಿನಿಂದ ಭಾರತೀಯ ಆಟಗಾರರು ಹೊರಬರಬೇಕಿದ್ದು, ಈಗಾಗಲೇ ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ರನ್ನು ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಆಡಿಸದಿರಲು ಬಿಸಿಸಿಐ ಅನಧಿಕೃತವಾಗಿ ನಿರ್ಧರಿಸಿದಂತಿದೆ. ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿ ಟೂರ್ನಿಗೆ ಕಾಲಿಡಬೇಕಿದ್ದರೆ ಈ ಮೂವರು ಸ್ಥಿರ ಪ್ರದರ್ಶನ ತೋರಬೇಕು.

ಮೇಲ್ನೋಟಕ್ಕೆ ಭಾರತ ಬಲಿಷ್ಠವಾಗಿ ಕಂಡರೂ ನಾಯಕ ರೋಹಿತ್‌ ಹಾಗೂ ಕೋಚ್‌ ದ್ರಾವಿಡ್‌ ಮುಂದೆ ಆಯ್ಕೆ ಗೊಂದಲಗಳಿವೆ. ಈಗಾಗಲೇ ರೋಹಿತ್‌ ತಮ್ಮ ಜೊತೆ ಆರಂಭಿಕನಾಗಿ ಶುಭ್‌ಮನ್‌ ಗಿಲ್‌ ಆಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದರೂ ಇಶಾನ್‌ ಕಿಶನ್‌ ಹೊರಗುಳಿಯಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಸ್ಥಾನಕ್ಕಾಗಿ ಸೂರ್ಯಕುಮಾರ್‌ ಯಾದವ್‌ ಹಾಗೂ ಶ್ರೇಯಸ್‌ ಅಯ್ಯರ್‌ ನಡುವೆ ಪೈಪೋಟಿ ಏರ್ಪಡಬಹುದು. ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡುವುದರ ಜೊತೆಗೆ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ.

ಸೂರ್ಯ ಟಿ20ಯಲ್ಲಿ ಸಾಧಿಸಿದಷ್ಟು ಯಶಸ್ಸನ್ನು ಏಕದಿನ ಮಾದರಿಯಲ್ಲಿ ಕಂಡಿಲ್ಲ. 15 ಇನ್ನಿಂಗ್ಸಲ್ಲಿ 384 ರನ್‌ ಗಳಿಸಿದ್ದಾರೆ. ಆದರೆ 2022ರಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಶ್ರೇಯಸ್‌ಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚು.

ಪಾಂಡ್ಯ ಬೌಲಿಂಗ್‌ ಕುತೂಹಲ: ಗಾಯದ ಸಮಸ್ಯೆಯಿಂದಾಗಿ ವರ್ಷಕ್ಕೂ ಹೆಚ್ಚು ಸಮಯ ಬೌಲಿಂಗ್‌ ಮಾಡದ ಹಾರ್ದಿಕ್‌ ಪಾಂಡ್ಯ, ಇತ್ತೀಚಿನ ಕೆಲ ಟಿ20 ಸರಣಿಗಳಲ್ಲಿ ಬೌಲಿಂಗ್‌ ನಡೆಸುತ್ತಿದ್ದಾರೆ. ಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಆರಂಭಿಕ ಬೌಲರ್‌ ಆಗಿ ಕಾಣಿಸಿಕೊಂಡಿದ್ದ ಹಾರ್ದಿಕ್‌, ಏಕದಿನದಲ್ಲಿ 10 ಓವರ್‌ ಬೌಲ್‌ ಮಾಡುವಷ್ಟುಫಿಟ್ನೆಸ್‌ ಕಂಡುಕೊಂಡಿದ್ದಾರಾ ಎನ್ನುವ ಕುತೂಹಲವಿದೆ. ಮತ್ತೊಂದು ಆಲ್ರೌಂಡರ್‌ ಸ್ಥಾನ ಸಹಜವಾಗಿಯೇ ಅಕ್ಷರ್‌ ಪಟೇಲ್‌ ಪಾಲಾಗಲಿದೆ.

ಸೂರ್ಯಕುಮಾರ್ ಯಾದವ್ ಅವರಂತ ಆಟಗಾರರು ಶತಮಾನಕ್ಕೊಬ್ಬರು ಸಿಗುತ್ತಾರೆ: ಕಪಿಲ್‌ ದೇವ್

ಶಮಿ, ಸಿರಾಜ್‌ ಮೇಲೆ ನಿರೀಕ್ಷೆ: ಹಿರಿಯ ಬೌಲರ್‌ ಮೊಹಮದ್‌ ಶಮಿ ತಂಡಕ್ಕೆ ಮರಳಿದ್ದು, ಬೌಲಿಂಗ್‌ ಪಡೆ ಮುನ್ನಡೆಸಲಿದ್ದಾರೆ. ಬೂಮ್ರಾ ಅನುಪಸ್ಥಿತಿಯಲ್ಲಿ ಮೊಹಮದ್‌ ಸಿರಾಜ್‌ಗೆ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. 3ನೇ ವೇಗಿಯ ಸ್ಥಾನಕ್ಕಾಗಿ ಉಮ್ರಾನ್‌ ಮಲಿಕ್‌ ಹಾಗೂ ಅಶ್‌ರ್‍ದೀಪ್‌ ಸಿಂಗ್‌ ನಡುವೆ ಪೈಪೋಟಿ ಏರ್ಪಡಬಹುದು. ಸ್ಪಿನ್ನರ್‌ ಜಾಗಕ್ಕೆ ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ಮಧ್ಯೆ ಸ್ಪರ್ಧೆ ಇದೆ.

ಲಂಕಾಕ್ಕೆ ಗೆಲ್ಲುವ ವಿಶ್ವಾಸ: ಟಿ20 ಸರಣಿಯಲ್ಲಿ ಹೋರಾಟ ಪ್ರದರ್ಶಿಸಿ ಭಾರತೀಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಶ್ರೀಲಂಕಾ ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಆದರೆ 50 ಓವರ್‌ ಕ್ರಿಕೆಟಲ್ಲಿ ತಂಡದ ಇತ್ತೀಚಿನ ದಾಖಲೆ ಹೇಳಿಕೊಳ್ಳುವಂತಿಲ್ಲ. ದಸುನ್‌ ಶಾನಕ ಪಡೆ ಅಸಾಧಾರಣ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ.

ವಿಶ್ವಕಪ್‌ಗೆ ಸರ್ವ ಸನ್ನದ್ಧಗೊಳ್ಳಲು ಭಾರತ ಮುಂದಿನ 10 ತಿಂಗಳಲ್ಲಿ 15 ಏಕದಿನ (ಏಷ್ಯಾಕಪ್‌ ಪಂದ್ಯಗಳನ್ನು ಹೊರತುಪಡಿಸಿ) ಪಂದ್ಯಗಳನ್ನಾಡಲಿದೆ. ಗೆಲುವಿನೊಂದಿಗೆ 2023ರ ಏಕದಿನ ಅಭಿಯಾನ ಆರಂಭಿಸಲು ಟೀಂ ಇಂಡಿಯಾ ಕಾತರಿಸುತ್ತಿದೆ.

ಪಿಚ್‌ ರಿಪೋರ್ಚ್‌

ಗುವಾಹಟಿಯಲ್ಲಿ ಒಂದೇ ಒಂದು ಏಕದಿನ ಪಂದ್ಯ ನಡೆದಿದೆ. ಅದು 2018ರಲ್ಲಿ. ವಿಂಡೀಸ್‌ 322 ರನ್‌ ಕಲೆಹಾಕಿತ್ತು. ಭಾರತ 43ನೇ ಓವರಲ್ಲೇ ಜಯಿಸಿತ್ತು. ಬರ್ಸಾಪರ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿಸಿದ್ದು ದೊಡ್ಡ ಮೊತ್ತ ನಿರೀಕ್ಷಿಸಬಹುದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್‌, ಸೂರ್ಯಕುಮಾರ್/ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಯುಜುವೇಂದ್ರ ಚಹಲ್‌/ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌, ಮೊಹಮ್ಮದ್ ಶಮಿ, ಅಶ್‌ರ್‍ದೀಪ್‌ ಸಿಂಗ್/ಉಮ್ರಾನ್‌ ಮಲಿಕ್.

ಲಂಕಾ: ಕುಸಾಲ್‌ ಮೆಂಡಿಸ್, ಪಥುಮ್ ನಿಸ್ಸಾಂಕ, ಆವಿಷ್ಕಾ ಫರ್ನಾಂಡೋ, ಧನಂಜಯ ಡಿ ಸಿಲ್ವಾ, ಚರಿತ್‌ ಅಸಲಂಕ, ದಸುನ್‌ ಶಾನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ಕುಸಾಲ್ ರಜಿತ, ಮಧುಶಂಕ/ಲಹಿರು ಕುಮಾರ.

ಪಂದ್ಯ: ಮಧ್ಯಾಹ್ನ 1.30ರಿಂದ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!