
ಕೋಲ್ಕತಾ(ಫೆ.27): 2022-23ರ ಇರಾನಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶೇಷ ಭಾರತ ತಂಡಕ್ಕೆ ಕರ್ನಾಟಕದ ಮಯಾಂಕ್ ಅಗರ್‌ವಾಲ್ ನಾಯಕತ್ವ ವಹಿಸಲಿದ್ದಾರೆ. ಕೋವಿಡ್‌ನಿಂದ ಮುಂದೂಡಿಕೆಯಾಗಿದ್ದ 2021-22ರ ಋುತುವಿನ ಪಂದ್ಯ ಇದಾಗಿದ್ದು, ಆ ಸಾಲಿನಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಆಗಿದ್ದ ಮಧ್ಯಪ್ರದೇಶ ವಿರುದ್ಧ ಮಾರ್ಚ್ 1ರಿಂದ ಗ್ವಾಲಿಯರ್‌ನಲ್ಲಿ ಪಂದ್ಯ ನಡೆಯಲಿದೆ. ಇರಾನಿ ಕಪ್ ಪಂದ್ಯವು ಬರೋಬ್ಬರಿ ಆರು ವರ್ಷಗಳ ಬಳಿಕ ಗ್ವಾಲಿಯರ್‌ನಲ್ಲಿ ಮೊದಲ ಪಂದ್ಯ ಜರುಗಲಿದೆ.
ಮಯಾಂಕ್ ಅಗರ್‌ವಾಲ್ ತಂಡದಲ್ಲಿರುವ ರಾಜ್ಯದ ಏಕೈಕ ಆಟಗಾರನಾಗಿದ್ದು, ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಹಾರ್ವಿಕ್ ದೇಸಾಯಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯಾಳು ಸರ್ಫರಾಜ್ ಖಾನ್ ತಂಡದಿಂದ ಹೊರಬಿದ್ದಿದ್ದಾರೆ. ಮಧ್ಯಪ್ರದೇಶ ತಂಡವನ್ನು ಹಿಮಾಂಶು ಮಂತ್ರಿ ಮುನ್ನಡೆಸಲಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ 13 ಇನಿಂಗ್ಸ್‌ಗಳನ್ನಾಡಿ 990 ರನ್ ಬಾರಿಸುವ ಮೂಲಕ ರನ್ ಮಳೆ ಹರಿಸಿದ್ದರು. ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಸೌರಾಷ್ಟ್ರ ಎದುರು ಮುಖಭಂಗ ಅನುಭವಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತ್ತು. ಮಯಾಂಕ್ ಅಗರ್‌ವಾಲ್ 2022ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ದ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಾಣಿಸಿಕೊಂಡಿದ್ದರು. ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಮಯಾಂಕ್ ಅಗರ್‌ವಾಲ್, ಇದೀಗ ಇರಾನಿ ಟ್ರೋಫಿಯಲ್ಲೂ ಮಿಂಚಿ, ಟೀಂ ಇಂಡಿಯಾಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
ಸಿಕ್ಸರ್ ಚಚ್ಚುವುದರಲ್ಲಿ ಧೋನಿ, ರೋಹಿತ್, ತೆಂಡುಲ್ಕರ್ ದಾಖಲೆ ಮುರಿದ ಟಿಮ್ ಸೌಥಿ..!
ಇರಾನಿ ಟ್ರೋಫಿಯು ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಇರಾನಿ ಕಪ್ ಪಂದ್ಯವನ್ನು ಇಂದೋರ್‌ನಿಂದ ಗ್ವಾಲಿಯರ್‌ಗೆ ಶಿಫ್ಟ್ ಮಾಡಲಾಗಿದೆ.
ತಂಡ: ಮಯಾಂಕ್ ಅಗರ್‌ವಾಲ್(ನಾಯಕ), ಸುದೀಪ್ ಕುಮಾರ್, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಕೇಶ್, ಅತಿತ್, ಚೇತನ್ ಸಕಾರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್, ಮಯಾಂಕ್ ಮರ್ಕಂಡೆ, ಸೌರಭ್, ಆಕಾಶ್, ಇಂದ್ರಜಿತ್, ಪುಲ್ಕಿತ್, ಯಶ್ ಧುಳ್.
ಮಧ್ಯಪ್ರದೇಶ ತಂಡ: ಹಿಮಾಂಶು ಮಂತ್ರಿ(ನಾಯಕ& ವಿಕೆಟ್ ಕೀಪರ್), ರಜತ್ ಪಾಟೀದಾರ್, ಯಶ್ ದುಬೆ, ಹರ್ಷ್ ಗೌಲಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷಾಂತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸಾರಾಂಶ್ ಜೈನ್, ಆವೇಶ್ ಖಾನ್, ಅಂಕಿತ್ ಕುಶ್ವಾ, ಗೌರವ್ ಯಾದವ್, ಅನುಭವ್ ಅಗರ್‌ವಾಲ್, ಮಿಹಿರ್ ಹಿರ್ವಾನಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.