Marylebone Cricket Club ಕ್ರಿಕೆಟ್‌ ನಿಯಮಗಳಲ್ಲಿ ಭಾರೀ ಬದಲಾವಣೆ!

By Kannadaprabha NewsFirst Published Mar 10, 2022, 3:40 AM IST
Highlights

9 ನಿಯಮಗಳನ್ನು ಬದಲಿಸಿದ ಎಂಸಿಸಿ

ಇನ್ಮುಂದೆ ಮಂಕಡಿಂಗ್‌ ರನೌಟ್‌ ಕ್ರೀಡಾ ಸ್ಫೂರ್ತಿಗೆ ವಿರುದ್ಧವಲ್ಲ

ಕ್ಯಾಚ್‌ ಬಳಿಕ ಬ್ಯಾಟರ್‌ ಸ್ಟ್ರೈಕ್  ಪಡೆಯುವ ನಿಯಮದಲ್ಲೂ ಬದಲಾವಣೆ: ಅಭಿಮಾನಿಗಳಿಂದ ಭಾರೀ ಚರ್ಚೆ

ಲಂಡನ್‌ (ಮಾ.10): ಕ್ರಿಕೆಟ್‌ ನಿಯಮಗಳ ರಚನೆ ಹಾಗೂ ತಿದ್ದುಪಡಿ ಮಾಡುವ ಮೇರಿಲ್ಬೋನ್‌ ಕ್ರಿಕೆಟ್‌ ಕ್ಲಬ್‌(ಎಂಸಿಸಿ) (Marylebone Cricket Club ) ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ತಜ್ಞರು ಹಾಗೂ ಅಭಿಮಾನಿಗಳು ಭಾರೀ ಚರ್ಚೆ ನಡೆಸಲು ದಾರಿ ಮಾಡಿಕೊಟ್ಟಿದೆ. ಈ ನಿಯಮಗಳು 2022ರ ಅಕ್ಟೋಬರ್‌ನಿಂದ (October ) ಜಾರಿಗೆ ಬರಲಿವೆ.

ಬದಲಾಗಿರುವ ಪ್ರಮುಖ ನಿಯಮಗಳಲ್ಲಿ ಒಬ್ಬ ಬ್ಯಾಟರ್‌ ಕ್ಯಾಚ್‌ ನೀಡಿ ಔಟಾದಾಗ ಮುಂದಿನ ಎಸೆತವನ್ನು ಯಾರು ಎದುರಿಸಬೇಕು ಎನ್ನುವ ನಿಯಮ. ಪಂದ್ಯದ ವೇಳೆ ಬ್ಯಾಟರ್‌ ಕ್ಯಾಚ್‌ ನೀಡಿ ಔಟಾದಾಗ ಹೊಸದಾಗಿ ಕ್ರೀಸ್‌ಗಿಳಿಯುವ ಆಟಗಾರನೇ ಸ್ಟ್ರೈಕ್ ಪಡೆಯಬೇಕು. ಓವರ್‌ನ ಕೊನೆ ಎಸೆತವಾಗಿದ್ದರಷ್ಟೇ ಸ್ಟ್ರೈಕ್ ಬದಲಾವಣೆಗೆ ಅವಕಾಶವಿರಲಿದೆ ಎಂದು ಎಂಸಿಸಿ (MCC) ನಿಯಮವನ್ನು ತಿದ್ದುಪಡಿ ಮಾಡಿದೆ. ಸದ್ಯ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ ಚೆಂಡನ್ನು ಕ್ಷೇತ್ರರಕ್ಷಕ ಕ್ಯಾಚ್‌ ಹಿಡಿಯುವ ಮೊದಲು ಸ್ಟೆ್ರೖಕರ್‌ ಹಾಗೂ ನಾನ್‌ ಸ್ಟ್ರೈಕರ್ ಒಬ್ಬರನ್ನೊಬ್ಬರು ದಾಟಿದ್ದರೆ, ಮುಂದಿನ ಎಸೆತವನ್ನು ನಾನ್‌ ಸ್ಟ್ರೈಕ್ ಬದಿಯಿಂದ ಸ್ಟ್ರೈಕ್ ಪಡೆಯುವ ಬದಿಗೆ ತೆರಳಿರುವ ಆಟಗಾರ ಎದುರಿಸಬೇಕು. ಆದರೆ ಇನ್ಮುಂದೆ ಹೊಸದಾಗಿ ಕ್ರೀಸ್‌ಗಿಳಿಯುವ ಆಟಗಾರನೇ ಸ್ಟ್ರೈಕ್ ಪಡೆಯಬೇಕಿದೆ.

ಮಂಕಡಿಂಗ್‌ಗೆ ಅನುಮತಿ: ಇನ್ಮುಂದೆ ಮನಕಡಿಂಗ್‌(ಬೌಲರ್‌ ಬೌಲ್‌ ಮಾಡುವ ಮೊದಲೇ ನಾನ್‌ ಸ್ಟ್ರೈಕರ್ ಕ್ರೀಸ್‌ ಬಿಟ್ಟಾಗ ಬೌಲರ್‌ ಮಾಡುವ ರನೌಟ್‌) ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಲ್ಲ. ಮನಕಡಿಂಗ್‌ (Mankading ) ಅನ್ನು ರನೌಟ್‌ (Run Out) ವ್ಯಾಪ್ತಿಗೆ ಪರಿಗಣಿಸಲು ಎಂಸಿಸಿ ನಿರ್ಧರಿಸಿದೆ. ಇದರಿಂದ ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚುವರಿ ಲಾಭ ಸಿಗುವುದಕ್ಕೆ ಕಡಿವಾಣ ಬಿದ್ದಂತಾಗಿದೆ.

ಚೆಂಡಿಗೆ ಎಂಜಲು ಬಳಕೆ ನಿಷೇಧ

ಚೆಂಡಿಗೆ ಎಂಜಲು ಹಾಕಿ ಉಜ್ಜುವುದನ್ನು ಎಂಸಿಸಿ ನಿಷೇಧ ಮಾಡಿದೆ. ಕೋವಿಡ್‌ ಕಾರಣದಿಂದಾಗಿ ಎಂಜಲು ಬಳಕೆ ಮಾಡದಂತೆ ಎಲ್ಲಾ ತಂಡಗಳಿಗೆ ಸೂಚಿಸಲಾಗಿತ್ತು. ಈಗ ಅದನ್ನು ನಿಯಮವಾಗಿ ಬದಲಿಸಲಾಗಿದೆ. ಎಂಜಲು ಹಾಕುವುದರಿಂದ ಸ್ವಿಂಗ್‌ ಬೌಲಿಂಗ್‌ಗೆ ನೆರವಾಗುವುದಿಲ್ಲ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿರುವುದಾಗಿ ಹೇಳಿರುವ ಎಂಸಿಸಿ, ಚೆಂಡಿನ ಹೊಳಪು ಕಾಪಾಡಲು ತಂಡಗಳು ಬೆವರನ್ನು ಬಳಕೆ ಮಾಡುವುದನ್ನು ಮುಂದುವರಿಸಲು ಸೂಚಿಸಿದೆ. ಎಂಜಲು ಬಳಕೆ ಮಾಡಿದರೆ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಆಟಗಾರರು ಗುರಿಯಾಗಲಿದ್ದಾರೆ.

ವೈಡ್‌ ನಿಯಮವೂ ಬದಲು

ಬೌಲರ್‌ ಚೆಂಡನ್ನು ಬೌಲ್‌ ಮಾಡುವಾಗ ಬ್ಯಾಟರ್‌ ಪಿಚ್‌ನಲ್ಲಿ ಅತ್ತಿತ್ತ ಓಡಾಡಿ ಚೆಂಡನ್ನು ಹೊಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಕೆಲವೊಮ್ಮೆ ಬ್ಯಾಟರ್‌ನನ್ನು ವಂಚಿಸಲು ಬೌಲರ್‌ಗಳು ಆಫ್‌ಸ್ಟಂಪ್‌ನಿಂದ ಆಚೆಗೆ ಎಸೆದ ಚೆಂಡು, ವೈಡ್‌ ಕ್ರೀಸ್‌ನಿಂದ ಹೊರಗೆ ಹೋದ ಕಾರಣ ಅಂಪೈರ್‌ ವೈಡ್‌ ಎಂದು ಘೋಷಿಸಿದ್ದನ್ನು ನೋಡಿದ್ದೇವೆ. ಆದರೆ ಇನ್ಮುಂದೆ ಬ್ಯಾಟರ್‌ ಚೆಂಡನ್ನು ಎಲ್ಲಿ ನಿಂತು ಎದುರಿಸುತ್ತಾನೆ ಎನ್ನುವುದರ ಆಧಾರದಲ್ಲಿ ವೈಡ್‌ ನಿರ್ಧಾರವಾಗಲಿದೆ. ವೈಡ್‌ ನೀಡುವ ಬಗ್ಗೆ ಅಂಪೈರ್‌ ತೀರ್ಮಾನಿಸಲಿದ್ದಾರೆ. ಇದೂ ಕೂಡ ವಿವಾದಾತ್ಮಕ ನಿಯಮ ಎಂದು ಕರೆಸಿಕೊಳ್ಳುತ್ತಿದ್ದು ಸಾಮಾಜಿಕ ತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬದಲಾದ ಇತರ ನಿಯಮಗಳು

* ಪಂದ್ಯದ ವೇಳೆ ಬದಲಿ ಆಟಗಾರನಾಗಿ ಮೈದಾನಕ್ಕಿಳಿಯವ ಆಟಗಾರನಿಗೆ ಕ್ಯಾಚ್‌ ಇಲ್ಲವೇ ರನೌಟ್‌ ಶ್ರೇಯ ಸಿಗಲಿದೆ. ಅನುಚಿತ ವರ್ತನೆ ತೋರಿದರೆ ಶಿಕ್ಷೆಗೂ ಗುರಿಯಾಗಬಹುದು.

* ಬೌಲರ್‌ ತನ್ನ ರನ್‌-ಅಪ್‌ ಪೂರ್ಣಗೊಳಿಸುವ ಮೊದಲೇ ಸ್ಟೆ್ರೖಕ್‌ನಲ್ಲಿರುವ ಬ್ಯಾಟರ್‌ನನ್ನು ರನೌಟ್‌ ಮಾಡಲು ಯತ್ನಿಸಿದರೆ ಆ ಎಸೆತವನ್ನು ಡೆಡ್‌ ಬಾಲ್‌ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಪ್ರಸಂಗಗಳು ತೀರಾ ಅಪರೂಪ.

* ಬೌಲರ್‌ ಬೌಲ್‌ ಮಾಡಿದಾಗ ಚೆಂಡು ಪಿಚ್‌ನಿಂದ ಹೊರಬಿದ್ದರೆ ಅದನ್ನು ಬ್ಯಾಟರ್‌ ಆಡಲು ಅವಕಾಶವಿರಲಿದೆ. ಆದರೆ ಬ್ಯಾಟರ್‌ನ ದೇಹ ಇಲ್ಲವೇ ಬ್ಯಾಟ್‌ನ ಭಾಗ ಪಿಚ್‌ನೊಳಗಿರಬೇಕು. ಈ ವರೆಗೂ ಚೆಂಡು ಎಷ್ಟೇ ದೂರಕ್ಕೆ ಹೋದರೂ ಬ್ಯಾಟರ್‌ ಹೋಗಿ ಆಡಬಹುದಿತ್ತು.

* ಆಟದ ವೇಳೆ ಕ್ಷೇತ್ರರಕ್ಷಕರು ಅನಗತ್ಯವಾಗಿ ತಮ್ಮ ಸ್ಥಾನಗಳಿಂದ ಬೇರೊಂದು ಸ್ಥಳಕ್ಕೆ ಓಡಾಡಿ ಅದರಿಂದ ಬ್ಯಾಟರ್‌ಗೆ ತೊಂದರೆಯಾದರೆ, ಬ್ಯಾಟ್‌ ಮಾಡುತ್ತಿರುವ ತಂಡಕ್ಕೆ 5 ಪೆನಾಲ್ಟಿರನ್‌ಗಳು ದೊರೆಯಲಿವೆ. ಸದ್ಯ ಆ ಎಸೆತವನ್ನು ಡೆಡ್‌ ಬಾಲ್‌ ಎಂದು ಪರಿಗಣಿಸಲಾಗುತ್ತಿತ್ತು.

* ಆಟದ ವೇಳೆ ಹೊರಗಿನಿಂದ ಮನುಷ್ಯರು ಅಥವಾ ಪ್ರಾಣಿಗಳು ಮೈದಾನಕ್ಕೆ ನುಗ್ಗಿ ಅದರಿಂದ ಆಟಕ್ಕೆ ತೊಂದರೆಯಾದರೆ, ಆ ಎಸೆತವನ್ನು ಡೆಡ್‌ ಬಾಲ್‌ ಎಂದು ಪರಿಗಣಿಸಲಾಗುತ್ತದೆ.

click me!