
ಜೋಹಾನ್ಸ್‌ಬರ್ಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಳಿ ಸೋದರರ ಹವಾ ಮತ್ತೊಮ್ಮೆ ಶುರುವಾಗಿದೆ. ಆಸ್ಟ್ರೇಲಿಯಾದ ಸ್ಟೀವ್ ವಾ - ಮಾರ್ಕ್ ವಾ, ನ್ಯೂಜಿಲೆಂಡ್‌ನ ಹ್ಯಾಮಿಶ್ ಮಾರ್ಷಲ್ - ಜೇಮ್ಸ್ ಮಾರ್ಷಲ್ ನಂತರ ಈಗ ದಕ್ಷಿಣ ಆಫ್ರಿಕಾದ ಜಾನ್ಸೆನ್ ಸೋದರರು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಮಾರ್ಕೊ ಜಾನ್ಸೆನ್ ಅವರ ಅವಳಿ ಸೋದರ ಡುವಾನ್ ಜಾನ್ಸೆನ್ (Duan Jansen) ಈಗ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಆಗಸ್ಟ್ 28 ರಿಂದ ಆರಂಭವಾಗಲಿರುವ ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ 26 ವರ್ಷದ ಎಡಗೈ ವೇಗಿ ಮತ್ತು ಆಲ್‌ರೌಂಡರ್ ಡುವಾನ್ ಜಾನ್ಸೆನ್ ಚೊಚ್ಚಲ ಅವಕಾಶ ಪಡೆದಿದ್ದಾರೆ. ತಮ್ಮ ಸೋದರ ಮಾರ್ಕೊ ಜಾನ್ಸೆನ್ ಅವರಂತೆಯೇ ಎತ್ತರದ ಕಾಯದ ಡುವಾನ್, ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಮಾರ್ಕೊ ಜಾನ್ಸೆನ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ಅವರ ಅವಳಿ ಸೋದರ ಡುವಾನ್ ಸರದಿ. 26 ವರ್ಷದ ಡುವಾನ್ ಇದುವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 29 ಪಂದ್ಯಗಳನ್ನ ಆಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 35 ಪಂದ್ಯಗಳನ್ನ ಆಡಿ 45 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 57 ಪಂದ್ಯಗಳಲ್ಲಿ 64 ವಿಕೆಟ್ ಪಡೆದಿದ್ದಾರೆ. ಕೇವಲ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ಡುವಾನ್, ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅರ್ಧಶತಕಗಳನ್ನು ಬಾರಿಸಿದ್ದಾರೆ.
ನಮೀಬಿಯಾ ವಿರುದ್ಧದ ಬಿಳಿ ಚೆಂಡಿನ ಸರಣಿಗೆ (ಟಿ20 ಮತ್ತು ಏಕದಿನ) ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಸ್ಟಾರ್ ಆಟಗಾರರಾದ ಟೆಂಬಾ ಬವುಮಾ ಮತ್ತು ಐಡೆನ್ ಮಾರ್ಕ್ರಾಮ್ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ತಂಡದಲ್ಲಿ ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜೋರ್ಜಿ ಮತ್ತು ಕ್ವೆನಾ ಮಫಾಕಾ ಅವರಂತಹ ಭವಿಷ್ಯದ ತಾರೆಗಳೂ ಇದ್ದಾರೆ. ಒಟ್ಟಿನಲ್ಲಿ, ಮಾರ್ಕೊ ಜಾನ್ಸೆನ್ ಅವರಂತೆಯೇ ಡುವಾನ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡು, ಜಾನ್ಸೆನ್ ಅವಳಿಗಳ ದರ್ಬಾರ್ ಶುರು ಮಾಡುತ್ತಾರಾ ಎಂದು ನೋಡಲು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.