ಶ್ರೀಲಂಕಾದಲ್ಲಿ ಬಂಧಿತನಾಗಿರುವ ಅಂಡರ್‌-19 ಪ್ಲೇಯರ್‌ ಮಂಜೋತ್‌ ಕಾಲ್ರಾ ಮೇಲಿನ ಆರೋಪವೇನು?

Published : Jul 17, 2026, 07:36 PM IST
LPL

ಸಾರಾಂಶ

ಭಾರತದ ಮಾಜಿ ಅಂಡರ್-19 ವಿಶ್ವಕಪ್ ಹೀರೋ ಮತ್ತು ಲಂಕಾ ಪ್ರೀಮಿಯರ್ ಲೀಗ್‌ನ 'ಜಾಫ್ನಾ ಕಿಂಗ್ಸ್' ತಂಡದ ಸಹ-ಮಾಲೀಕ ಮಂಜೋತ್ ಕಾಲ್ರಾನನ್ನು ಮ್ಯಾಚ್ ಫಿಕ್ಸಿಂಗ್‌ಗಾಗಿ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

ಕೊಲಂಬೊ (ಜು.17): ಭಾರತದ ಅಂಡರ್-19 ಕ್ರಿಕೆಟ್ ತಂಡದ ಮಾಜಿ ತಾರೆ ಮತ್ತು ಸದ್ಯ ಲಂಕಾ ಪ್ರೀಮಿಯರ್ ಲೀಗ್ (LPL) ಟೂರ್ನಿಯ 'ಜಾಫ್ನಾ ಕಿಂಗ್ಸ್' ಫ್ರಾಂಚೈಸಿಯ ಸಹ-ಮಾಲೀಕನಾಗಿರುವ ಮಂಜೋತ್ ಕಾಲ್ರಾನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಶ್ರೀಲಂಕಾದ ಸ್ಥಳೀಯ ಆಟಗಾರನಿಗೆ ಮ್ಯಾಚ್‌ ಫಿಕ್ಸಿಂಗ್‌ಗಾಗಿ ಭಾರಿ ಮೊತ್ತದ ಲಂಚ ನೀಡಲು ಯತ್ನಿಸಿದ ಗಂಭೀರ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಲಂಕಾ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನವೇ ಈ ಆಘಾತಕಾರಿ ಘಟನೆ ನಡೆದಿದ್ದು, ಜುಲೈ 17 ರಂದು ಮಂಜೋತ್ ಕಾಲ್ರಾನನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ.

ಕೊಲಂಬೊದ ಪ್ರತಿಷ್ಠಿತ ಹೋಟೆಲೊಂದರಲ್ಲಿ ಶ್ರೀಲಂಕಾ ಪೊಲೀಸರ ಕ್ರೀಡಾ ತನಿಖಾ ವಿಭಾಗದ (Sports Investigation Unit) ಅಧಿಕಾರಿಗಳು ಪಕ್ಕಾ ಸ್ಕೆಚ್ ಹಾಕಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಸುಪುನ್ ವಿದಾನಗೆ ನೀಡಿರುವ ಮಾಹಿತಿ ಪ್ರಕಾರ, ಮಂಜೋತ್ ಕಾಲ್ರಾ ಲಂಕಾದ ಆಟಗಾರನಿಗೆ 95 ಲಕ್ಷ ಶ್ರೀಲಂಕಾ ರೂಪಾಯಿ (ಭಾರತೀಯ ಕರೆನ್ಸಿಯಲ್ಲಿ ಸುಮಾರು ₹27.7 ಲಕ್ಷ) ಲಂಚದ ಹಣವನ್ನು ಹಸ್ತಾಂತರಿಸಲು ಯತ್ನಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಆಟಗಾರನೇ ಕೊಟ್ಟ ಸುಳಿವು; ನ್ಯಾಯಾಲಯಕ್ಕೆ ಹಾಜರು

ಪೊಲೀಸರ ತನಿಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಂಜೋತ್ ಕಾಲ್ರಾ ಯಾವ ಆಟಗಾರನಿಗೆ ಆಮಿಷ ಒಡ್ಡಲು ಯತ್ನಿಸಿದ್ದನೋ, ಅದೇ ಆಟಗಾರ ಹತ್ತು ದಿನಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿ ಇಡೀ ವಿಷಯವನ್ನು ಬಹಿರಂಗಪಡಿಸಿದ್ದ. ಜಾಫ್ನಾ ಕಿಂಗ್ಸ್ ತಂಡದ ಈ ಸಹ-ಮಾಲೀಕ ತನ್ನನ್ನು ಮೊದಲ ಬಾರಿಗೆ ಸಂಪರ್ಕಿಸಿ ಫಿಕ್ಸಿಂಗ್ ಮಾಡಲು ಒಪ್ಪಂದ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ಆಟಗಾರ ಮಾಹಿತಿ ನೀಡಿದ್ದನು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಹೋಟೆಲ್‌ನಲ್ಲಿ ಬಲೆ ಬೀಸಿದ್ದರು. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ, ಕಾಲ್ರಾ ಇನ್ನೂ ಇಬ್ಬರು ಕ್ರಿಕೆಟಿಗರನ್ನು ಸಂಪರ್ಕಿಸಿದ್ದ ಎಂಬ ಮಾಹಿತಿ ಹೊರಬಿದ್ದಿದ್ದು, ಅವರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಶುಬ್‌ಮನ್ ಗಿಲ್ ಜೊತೆ ಆಡಿದ್ದ ವಿಶ್ವಕಪ್ ಹೀರೊ

2018 ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ದೆಹಲಿ ಮೂಲದ ಮಂಜೋತ್ ಕಾಲ್ರಾ ಪ್ರಮುಖ ಪಾತ್ರ ವಹಿಸಿದ್ದ. ಪೃಥ್ವಿ ಶಾ ನಾಯಕತ್ವದ ಆ ವಿಶ್ವಕಪ್ ತಂಡದಲ್ಲಿ ಭಾರತದ ಇಂದಿನ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಬ್‌ಮನ್ ಗಿಲ್ ಕೂಡ ಪ್ರಮುಖ ಆಟಗಾರನಾಗಿದ್ದರು. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಮಂಜೋತ್ ಕಾಲ್ರಾ ಭರ್ಜರಿ ಶತಕ ಸಿಡಿಸಿ ಭಾರತ ತಂಡ ವಿಶ್ವಕಪ್ ಎತ್ತಿಹಿಡಿಯಲು ಕಾರಣರಾಗಿದ್ದರು. ಆದರೆ ಆ ಯಶಸ್ಸು ದೀರ್ಘಕಾಲ ಉಳಿಯಲಿಲ್ಲ.

ವಿಶ್ವಕಪ್ ಗೆದ್ದ ಕೇವಲ ಒಂದು ವರ್ಷದ ನಂತರ, ಅಂದರೆ 2019-20 ರಲ್ಲಿ ಮಂಜೋತ್ ಕಾಲ್ರಾ ವಯೋಮಿತಿ ವಂಚನೆ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದರು. ವಯಸ್ಸನ್ನು ಮರೆಮಾಚಿ ಜೂನಿಯರ್ ಕ್ರಿಕೆಟ್ ಆಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2020 ರಲ್ಲಿ ದೆಹಲಿ ಕ್ರಿಕೆಟ್ ಸಂಸ್ಥೆ (DDCA) ಆತನ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಿತು. ತದನಂತರ ಆತನ ಮೇಲಿನ ನಿಷೇಧವನ್ನು ಹಿಂಪಡೆಯಲಾಯಿತಾದರೂ, ಆತನಿಗೆ ವೃತ್ತಿಪರ ಕ್ರಿಕೆಟ್‌ಗೆ ಪುನರಾಗಮನ ಮಾಡಲು ಸಾಧ್ಯವಾಗಲೇ ಇಲ್ಲ.

ಕ್ರಿಕೆಟಿಗನಿಂದ ಫ್ರಾಂಚೈಸಿ ಮಾಲೀಕನಾಗಿ ಬದಲಾಗಿದ್ದ ಕಾಲ್ರಾ

ಕ್ರಿಕೆಟ್ ಮೈದಾನದಲ್ಲಿ ಭವಿಷ್ಯ ಮುಗಿದ ನಂತರ ಮಂಜೋತ್ ಕಾಲ್ರಾ ಉದ್ಯಮದ ಕಡೆ ಮುಖ ಮಾಡಿದ್ದ. ಇತ್ತೀಚೆಗಷ್ಟೇ, ಅಂದರೆ ಮೇ 2026 ರಲ್ಲಿ ಆತ ಲಂಕಾ ಪ್ರೀಮಿಯರ್ ಲೀಗ್‌ನ ಪ್ರಸಿದ್ಧ ಫ್ರಾಂಚೈಸಿಗಳಲ್ಲಿ ಒಂದಾದ 'ಜಾಫ್ನಾ ಕಿಂಗ್ಸ್' (Jaffna Kings) ತಂಡದ ಕೆಲವು ಷೇರುಗಳನ್ನು ಖರೀದಿಸುವ ಮೂಲಕ ಆ ತಂಡದ ಸಹ-ಮಾಲೀಕನಾಗಿದ್ದ. ಶ್ರೀಲಂಕಾದಲ್ಲಿ ತನ್ನ ಹೊಸ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದ ಮಾಜಿ ವಿಶ್ವಕಪ್ ಹೀರೊ, ಈಗ ಮ್ಯಾಚ್ ಫಿಕ್ಸಿಂಗ್‌ನಂತಹ ಕಪ್ಪು ದಂಧೆಗೆ ಕೈಹಾಕಿ ಜೈಲು ಪಾಲಾಗಿರುವುದು ಕ್ರಿಕೆಟ್ ಜಗತ್ತಿನಲ್ಲಿ ತೀವ್ರ ಸಂಚಲನ ಮೂಡಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿಗೆ ಕಪ್ ಗೆಲ್ಲಿಸಲು ಪಣತೊಟ್ಟ ಆ್ಯಂಡಿ ಫ್ಲವರ್..! ಇಂಗ್ಲೆಂಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬೆಂಗಳೂರು ತಂಡದ ಕೋಚ್
ಶುಬಮನ್ ಜೊತೆ ಆಡಿ ಗೆಲುವಿನ ರೂವಾರಿಯಾಗಿದ್ದ ಮಾಜಿ ಟೀಂಮೇಟ್ ಅರೆಸ್ಟ್, ಭುಗಿಲೆದ್ದ ಮ್ಯಾಚ್ ಫಿಕ್ಸಿಂಗ್