
ಶಿವಮೊಗ್ಗ(ಜ.24): ಇಲ್ಲಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದಲ್ಲಿ ನಡೆದ ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮಹಾಶಕ್ತಿ ಫ್ರೆಂಡ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೂರು ದಿನಗಳ ಕಾಲ ನಡೆದ ಗ್ರಾಮೀಣ ಮಟ್ಟದ ಲೀಗ್ ಮಾದರಿಯ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಕೇಸರಿ ತಂಡದ ಎದುರು ಮಹಾಶಕ್ತಿ ಫ್ರೆಂಡ್ಸ್ ಹೆದ್ದಾರಿಪುರ ತಂಡವು 10 ವಿಕೆಟ್ ಸುಲಭ ಜಯ ದಾಖಲಿಸುವುದರ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಎರಡನೇ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ್ದವು. ಈ ಪೈಕಿ ಅಜೇಯವಾಗಿಯೇ ಫೈನಲ್‌ಗೆ ಪ್ರವೇಶ ಪಡೆದಿದ್ದ ಟೀಮ್ ಕೇಸರಿ ತಂಡವು, ಫೈನಲ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸ್ಥಳೀಯ ಪ್ರತಿಭೆಗಳನ್ನೊಳಗೊಂಡ ಕುಮಾರಸ್ವಾಮಿ ನಾಯಕತ್ವದ ಮಹಾಶಕ್ತಿ ಫ್ರೆಂಡ್ಸ್ ತಂಡವು, ಫೈನಲ್‌ನಲ್ಲಿ ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಎರಡನೇ ಆವೃತ್ತಿಯ ಎಚ್‌ಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಯಿತು.
ಇನ್ನು ಚೊಚ್ಚಲ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಪುನೀತ್ ಗೌಡ ಫ್ರೆಂಡ್ಸ್ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ತೊರೆಗದ್ದೆ ಬ್ರದರ್ಸ್ ತಂಡವು 4ನೇ ಸ್ಥಾನ ಪಡೆಯಿತು. ಪ್ರಥಮ ಬಹುಮಾನ ವಿಜೇತ ತಂಡವು 25,000 ರುಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಬಹುಮಾನವನ್ನು ಪಡೆದುಕೊಂಡರೆ, ಸುನಿಲ್ ಕಲ್ಲೂರು & ರಜಿತ್ ವಡಾಹೊಸಳ್ಳಿ ಮಾಲೀಕತ್ವದ ರನ್ನರ್ ಅಪ್ ತಂಡವಾದ ಟೀಮ್ ಕೇಸರಿ 20 ಸಾವಿರ ರುಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಇನ್ನುಳಿದಂತೆ ಪುನೀತ್ ಗೌಡ ಫ್ರೆಂಡ್ಸ್ ಹೆದ್ದಾರಿಪುರ ಹಾಗೂ ತೊರೆಗದ್ದೆ ಬ್ರದರ್ಸ್ ತಂಡಗಳು ಕ್ರಮವಾಗಿ 15 ಹಾಗೂ 10 ಸಾವಿರ ರುಪಾಯಿ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡವು.
IPL Auction ನೆನಪಿಸುವಂತೆ ನಡೆದ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಆಟಗಾರರ ಹರಾಜು..!
HPL ಟೂರ್ನಿಯ ಕಿರು ಪರಿಚಯ: ಜನವರಿ 21,22 ಹಾಗೂ 23ರಂದು ನಡೆದ ಈ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 30 ಪಂದ್ಯಗಳು ಜರುಗಿದ್ದು, 60 ಇನಿಂಗ್ಸ್‌ಗಳಿಂದ ಸುಮಾರು 2,765 ರನ್‌ಗಳು ದಾಖಲಾದವು. ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸಮಾನವಾಗಿ ಸ್ಪಂದಿಸಿದ ಪಿಚ್‌ನಲ್ಲಿ ಬೌಲರ್‌ಗಳು ಮಿಂಚಿದ್ದು, ಒಟ್ಟು 214 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಟೂರ್ನಿಯಲ್ಲಿ 133 ಬೌಂಡರಿಗಳು ಹಾಗೂ 224 ಸಿಕ್ಸರ್‌ಗಳು ದಾಖಲಾಗಿದ್ದು ವಿಶೇಷ.
ಈ ಟೂರ್ನಿಯ ಮತ್ತೊಂದು ವಿಶೇಷವೆಂದರೇ, ಖಾಸಗಿ ಆನ್‌ಲೈನ್ ವೆಬ್‌ಸೈಟ್ ಮೂಲಕ ಸ್ಕೋರ್ ಹಾಗೂ ಕಾಮೆಂಟ್ರಿಯನ್ನು ಬಿತ್ತರಿಸಲಾಗಿದ್ದು, ಗ್ರಾಮೀಣ ಭಾಗದ ಕ್ರೀಡಾಪಟುಗಳ ಪಾಲಿಗೆ ಹೊಸ ಅನುಭವನನ್ನು ಒದಗಿಸಿತು. ಮಹಾಶಕ್ತಿ ಫ್ರೆಂಡ್ಸ್ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ಭರತ್ ಗೋಣಿಕೆರೆ 129 ರನ್ ಹಾಗೂ 6 ವಿಕೆಟ್ ಕಬಳಿಸುವ ಮೂಲಕ ಸರಣಿಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರೆ, ಟೀಮ್ ಕೇಸರಿ ತಂಡದ ಆರಂಭಿಕ ಬ್ಯಾಟರ್ ವಿಶ್ವನಾಥ್ ಕಲ್ಲೂರು, 144 ರನ್ ಬಾರಿಸುವ ಮೂಲಕ ಬೆಸ್ಟ್ ಬ್ಯಾಟರ್ ಕಿರೀಟ ತಮ್ಮದಾಗಿಸಿಕೊಂಡರು. ಇನ್ನು ಜಂಬಳ್ಳಿ ಜಾಗ್ವಾರ್ಸ್ ತಂಡದ ಎಡಗೈ ವೇಗಿ ಸಂತೋಷ್ ಯಡಗುಡ್ಡೆ 11 ವಿಕೆಟ್ ಕಬಳಿಸುವ ಮೂಲಕ ಬೆಸ್ಟ್ ಬೌಲರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಹೆದ್ದಾರಿಪುರ ಪ್ರೀಮಿಯರ್ ಲೀಗ್ ಟೂರ್ನಿಯ ಮೂರು ದಿನಗಳ ವೀಕ್ಷಕ ವಿವರಣೆಗಾರಿಯನ್ನು ಸರ್ಜನ್‌ಕುಮಾರ್ ಅರಗೋಡಿ ಹಾಗೂ ವೈ ಟಿ. ಷಣ್ಮುಖ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸ್ಥಳೀಯ ಮುಖಂಡರಾದ ಆದರ್ಶ ಹುಂಚದಕಟ್ಟೆ, ವಿರೇಶ್ ಆಲುವಳ್ಳಿ, ನಾಗರಾಜ್ ಶೆಟ್ಟಿ, ಮಹಾಶಕ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ರಮೇಶ್, ಸಳ್ಳಿ ಸ್ವಾಮಿರಾವ್, ಸತೀಶ್ ಭಟ್, ವಿಶುಕುಮಾರ್ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿ, ಪ್ರಶಸ್ತಿ ಪ್ರದಾನ ಮಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.