ಕಿವೀಸ್ ಎದುರು ಮತ್ತೊಂದು ಶತಕ ಸಿಡಿಸಿದ ಗಿಲ್
ಬಾಬರ್ ಅಜಂ ವಿಶ್ವದಾಖಲೆ ಸರಿಗಟ್ಟಿದ ಟೀಂ ಇಂಡಿಯಾ ಓಪನ್ನರ್ ಗಿಲ್
ಕಿವೀಸ್ ಎದುರಿನ ಸರಣಿಯಲ್ಲಿ 360 ರನ್ ಬಾರಿಸಿದ ಗಿಲ್
ಇಂದೋರ್(ಜ.24): ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಭರ್ಜರಿ ಲಯದಲ್ಲಿದ್ದು, ಕ್ರಿಕೆಟ್ ವೃತ್ತಿಜೀವನದ 4ನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್, ಸಿಡಿಲಬ್ಬರದ ಶತಕ ಬಾರಿಸಿ ಮಿಂಚಿದ್ದಾರೆ. ಇದು, ಕಳೆದ 4 ಏಕದಿನ ಇನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಮೂರನೇ ಏಕದಿನ ಶತಕ ಎನಿಸಿಕೊಂಡಿದೆ.
ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 208 ರನ್ ಬಾರಿಸಿದ್ದ ಗಿಲ್, ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ 40 ರನ್ ಚಚ್ಚಿದ್ದರು, ಇದೀಗ ಗಿಲ್, ಕಿವೀಸ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 112 ರನ್ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಶುಭ್‌ಮನ್ ಗಿಲ್, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ವಿಶ್ವದಾಖಲೆ ಹೊಂದಿದ್ದ ಬಾಬರ್ ಅಜಂ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಪಾಕ್ ನಾಯಕ ಬಾಬರ್ ಅಜಂ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆ ಅಳಿಸಿ ಹಾಕಲು 113 ರನ್‌ಗಳ ಅಗತ್ಯವಿತ್ತು. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ 360 ರನ್ ಸಿಡಿಸಿ ವಿಶ್ವದಾಖಲೆ ಬರೆದಿದ್ದರು. ಇದೀಗ ಶುಭ್‌ಮನ್ ಗಿಲ್ 112 ರನ್ ಬಾರಿಸುತ್ತಿದ್ದಂತೆಯೇ ಬಾಬರ್ ಅಜಂ ಅವರ ದಾಖಲೆಯನ್ನು ಸರಿಗಟ್ಟಿದರಾದರೂ, ಇನ್ನೂಂದು ರನ್ ಬಾರಿಸಿದ್ದರೇ, ಆ ದಾಖಲೆ ಗಿಲ್ ಪಾಲಾಗುತ್ತಿತ್ತು. ಬಾಬರ್ ಅಜಂ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 3 ಶತಕ ಸಹಿತ 360 ರನ್ ಸಿಡಿಸಿದ್ದರು. ಇದೀಗ ಗಿಲ್, ಆ ದಾಖಲೆಯನ್ನು ಸರಿಗಟ್ಟಿದ್ದಾರೆ.
ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ವಿಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕೇವಲ 26.1 ಓವರ್‌ಗಳಲ್ಲಿ 212 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿ ಕೊಟ್ಟರು. ರೋಹಿತ್ ಶರ್ಮಾ ಕೇವಲ 85 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೇ, ಶುಭ್‌ಮನ್ ಗಿಲ್ 78 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 112 ರನ್ ಬಾರಿಸಿ ಜೇಕೊಬ್ ಡಫ್ಫಿಗೆ ವಿಕೆಟ್ ಒಪ್ಪಿಸಿದರು.