ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಗುಲ್ಬರ್ಗ, ಹುಬ್ಬಳ್ಳಿ ತಂಡಗಳು ಶುಭಾರಂಭ
ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿ ರನ್ನರ್-ಅಪ್ ಬೆಂಗಳೂರು ತಂಡಕ್ಕೆ ಗುಲ್ಬರ್ಗಾ ಶಾಕ್
ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ವಿಜೆಡಿ ನಿಯಮದನ್ವಯ 9 ವಿಕೆಟ್ ಭರ್ಜರಿ ಜಯ
ಬೆಂಗಳೂರು(ಆ.14): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್‌ಗೆ ಚಾಲನೆ ಲಭಿಸಿದ್ದು, ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಶುಭಾರಂಭ ಮಾಡಿವೆ. ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿ ರನ್ನರ್-ಅಪ್ ಬೆಂಗಳೂರು ತಂಡಕ್ಕೆ ಗುಲ್ಬರ್ಗಾ 6 ವಿಕೆಟ್ ಸೋಲಿನ ಆಘಾತ ನೀಡಿತು. ಮೊದಲು ಬ್ಯಾಟ್ ಮಾಡಿದ ಮಯಾಂಕ್ ಅಗರ್‌ವಾಲ್ ನಾಯಕತ್ವದ ಬೆಂಗಳೂರು ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಕಲೆಹಾಕಿತು. ಮಯಾಂಕ್(04), ನಿಶ್ಚಲ್(01) ಬೇಗನೇ ವಿಕೆಟ್ ಕಳೆದುಕೊಂಡ ಬಳಿಕ ಸೂರಜ್ ಅಹುಜಾ 44 ಎಸೆತಗಳಲ್ಲಿ 62 ರನ್ ಸಿಡಿಸಿದರೆ, ಜೆಸ್ವತ್ ಆಚಾರ್ಯ 29 ರನ್ ಕೊಡುಗೆ ನೀಡಿದರು. ಅಭಿಲಾಶ್ ಶೆಟ್ಟಿ 17 ರನ್‌ಗೆ 3 ವಿಕೆಟ್ ಪಡೆದರು.
ಸುಲಭ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ತಂಡ 17.3 ಓವರ್‌ಗಳಲ್ಲೇ 4 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಎಲ್.ಆರ್.ಚೇತನ್ 36, ಆದರ್ಶ್ ಪ್ರಜ್ವಲ್ 31, ಅನೀಶ್ ಕೆ.ವಿ.ಔಟಾಗದೆ 29 ಹಾಗೂ ಅಮಿತ್ ವರ್ಮಾ 28 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಶುಭಾಂಗ್ ಹೆಗ್ಡೆ 25 ರನ್ ನೀಡಿ 3 ವಿಕೆಟ್ ಪಡೆದರು.
undefined
ಐಪಿಎಲ್ ಸ್ಟಾರ್‌ಗಳನ್ನು ಕೆಡವಿ ಟಿ20 ಸರಣಿ ಗೆದ್ದ ವಿಂಡೀಸ್!
ಹುಬ್ಬಳ್ಳಿಗೆ 9 ವಿಕೆಟ್ ಜಯ
ದಿನದ ಮತ್ತೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ವಿಜೆಡಿ ನಿಯಮದನ್ವಯ 9 ವಿಕೆಟ್ ಭರ್ಜರಿ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಮೈಸೂರು ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ 9 ವಿಕೆಟ್‌ಗೆ ಕೇವಲ 111 ರನ್ ಕಲೆ ಹಾಕಿತು. ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡ ಒಂದು ಹಂತದಲ್ಲಿ 46ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಕೊನೆಯಲ್ಲಿ ಸುಚಿತ್ 20, ಧುರಿ 16, ವೆಂಕಟೇಶ್ 16 ರನ್ ಸಿಡಿಸಿ ತಂಡವನ್ನು ಕಾಪಾಡಿದರು. ಮಳೆಪೀಡಿದ ಪಂದ್ಯದಲ್ಲಿ 13 ಓವರ್‌ಗೆ 80 ರನ್ ಗುರಿ ಪಡೆದ ಹುಬ್ಬಳ್ಳಿ 8.1 ಓವರ್‌ಗಳಲ್ಲೇ ಗೆಲುವು ದಾಖಲಿಸಿತು. ಮೊಹಮದ್ ತಾಹ ಕೇವಲ 30 ಎಸೆತಗಳಲ್ಲಿ 61 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ಟೂರ್ನಿ ಮಾದರಿ ಹೇಗೆ?
ಲೀಗ್ ಹಂತವು ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡಗಳು 2 ಬಾರಿ ಪರಸ್ಪರ ಸೆಣಸಲಿವೆ. ಲೀಗ್ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ತಿಲಕ್ ವರ್ಮಾ 2023ರ ವಿಶ್ವಕಪ್ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್ ಶರ್ಮಾ..!
ಇಂದಿನ ಪಂದ್ಯಗಳು
ಮಂಗಳೂರು-ಶಿವಮೊಗ್ಗ, ಮಧ್ಯಾಹ್ನ 1ಕ್ಕೆ,
ಗುಲ್ಬರ್ಗ-ಹುಬ್ಬಳ್ಳಿ, ಸಂಜೆ 5.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್