ನಿರ್ಣಾಯಕ ಘಟ್ಟ ತಲುಪಿದ ಮಹಾರಾಜ ಟ್ರೋಫಿ ಫೈನಲ್ ಕದನ
ಪ್ರಶಸ್ತಿಗಾಗಿ ಹುಬ್ಬಳ್ಳಿ ಟೈಗರ್ಸ್-ಮೈಸೂರು ವಾರಿಯರ್ಸ್ ನಡುವೆ ಫೈಟ್
ಆಕರ್ಷಕ ಶತಕ ಸಿಡಿಸಿ ಮಿಂಚಿದ ಕರುಣ್ ನಾಯರ್
ಬೆಂಗಳೂರು(ಆ.29): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್‌ಗೆ ವೇದಿಕೆ ಸಜ್ಜುಗೊಂಡಿದ್ದು, ಮಂಗಳವಾರ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಲೀಗ್ ಹಂತದಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ಹುಬ್ಬಳ್ಳಿ ತಂಡ ಸೋಮವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಗೆಲುವು ಸಾಧಿಸಿತು. ಮತ್ತೊಂದು ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಮೈಸೂರು ವಾರಿಯರ್ಸ್ ಜಯಭೇರಿ ಬಾರಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
ರನ್ ಮಳೆಯಲ್ಲಿ ಗೆದ್ದ ಮೈಸೂರು
ರನ್ ಮಳೆಯೇ ಹರಿದ 2ನೇ ಸೆಮೀಸ್‌ನಲ್ಲಿ ಗುಲ್ಬರ್ಗ ವಿರುದ್ಧ ಮೈಸೂರು 36 ರನ್ ಜಯ ಸಾಧಿಸಿತು. ಮೈಸೂರು ಮೊದಲು ಬ್ಯಾಟ್ ಮಾಡಿ 2 ವಿಕೆಟ್‌ಗೆ ಬರೋಬ್ಬರಿ 248 ರನ್ ಸೇರಿಸಿತು. ಕಾರ್ತಿಕ್ 41ಕ್ಕೆ ವಿಕೆಟ್ ಒಪ್ಪಿಸಿದ ಬಳಿಕ ಸಮರ್ಥ್(80) ಹಾಗೂ ನಾಯಕ ಕರುಣ್ ನಾಯರ್ 2ನೇ ವಿಕೆಟ್‌ಗೆ 148 ರನ್ ಜೊತೆಯಾಟವಾಡಿದರು. ಗುಲ್ಬರ್ಗ ಬೌಲರ್‌ಗಳನ್ನು ಚೆಂಡಾಡಿದ ಕರುಣ್ 42 ಎಸೆತಗಳಲ್ಲಿ 7 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 107 ರನ್ ಚಚ್ಚಿದರು . ಬೃಹತ್ ಗುರಿ ಬೆನ್ನತ್ತಿದ ಗುಲ್ಬರ್ಗ ಉತ್ತಮ ಹೋರಾಟದ ಹೊರತಾಗಿಯೂ 8 ವಿಕೆಟ್‌ಗೆ 212 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಹ್ಯಾಡ್ಲೆ ನೊರೊನ್ಹಾ 61, ಹಸನ್ ಖಾಲಿದ್ 54 ರನ್ ಸಿಡಿಸಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ.
ವಿಶ್ವಕಪ್‌ಗೆ ಕೌಂಟ್‌ಡೌನ್ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಗಾಯ..! ಆಸೀಸ್ ಪಾಳಯದಲ್ಲಿ ಆತಂಕ
ಹುಬ್ಬಳ್ಳಿಗೆ 8 ವಿಕೆಟ್ ಗೆಲುವು
ಶಿವಮೊಗ್ಗ ವಿರುದ್ಧ ಮೊದಲ ಸೆಮೀಸ್‌ನಲ್ಲಿ ಹುಬ್ಬಳ್ಳಿ 8 ವಿಕೆಟ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ 7 ವಿಕೆಟ್‌ಗೆ 149 ರನ್ ಕಲೆಹಾಕಿತು. ರೋಹನ್ ಕದಂ(54) ಹೊರತುಪಡಿಸಿ ಇತರರಿಂದ ತಂಡಕ್ಕೆ ನಿರೀಕ್ಷಿತ ಕೊಡುಗೆ ಸಿಗಲಿಲ್ಲ. ಸುಲಭ ಗುರಿಯನ್ನು ಹುಬ್ಬಳ್ಳಿ ಇನ್ನೂ 6 ಓವರ್ ಬಾಕಿ ಇರುವಂತೆ ಬೆನ್ನತ್ತಿತು. ಲುವ್‌ನಿತ್ ಸಿಸೋಡಿಯಾ(13) ಬೇಗನೇ ಔಟಾದ ಬಳಿಕ 2ನೇ ವಿಕೆಟ್‌ಗೆ ಮೊಹಮದ್ ತಾಹ(38 ಎಸೆತದಲ್ಲಿ 69 ರನ್, 1 ಬೌಂಡರಿ, 8 ಸಿಕ್ಸರ್) ಹಾಗೂ ಕೃಷ್ಣನ್ ಶ್ರೀಜಿತ್(39 ಎಸೆತಗಳಲ್ಲಿ 61 ರನ್, 7 ಬೌಂಡರಿ, 2 ಸಿಕ್ಸರ್) 114 ರನ್ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು.
ಫೈನಲ್ ಪಂದ್ಯ ಆರಂಭ: ಸಂಜೆ 5.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್ ಕೋಡ್.
ಏಷ್ಯಾಕಪ್‌ನಲ್ಲಿ ಇಶಾನ್ ಕಿಶನ್‌ಗಿದೆ ಟೀಂ ಇಂಡಿಯಾದಲ್ಲಿ ನೆಲೆಯೂರಲು ಸುವರ್ಣಾವಕಾಶ..!
ಶ್ರೀಲಂಕಾಕ್ಕೆ ಮತ್ತೆ ಆಘಾತ: ದಿಲ್ಶಾನ್, ಲಹಿರುಗೆ ಗಾಯ
ಕೊಲಂಬೊ: ತವರಿನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಷ್ಯಾಕಪ್‌ಗೂ ಮುನ್ನ ಸತತ ಗಾಯ, ಕೋವಿಡ್‌ನಿಂದ ಆಘಾತ ಅನುಭವಿಸಿದ್ದ ಶ್ರೀಲಂಕಾ ತಂಡಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ವೇಗಿ ದಿಲ್ಶಾನ್ ಮಧುಶನಕ ಹಾಗೂ ಲಹಿರು ಕುಮಾರ ಗಾಯಗೊಂಡಿದ್ದಾರೆ. ಶುಕ್ರವಾರ ಮಧುಶನಕ ಅಭ್ಯಾಸ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಏಷ್ಯಾಕಪ್‌ನಿಂದ ಹೊರಬಿದ್ದಿದ್ದಾರೆ. ಇದೇ ವೇಳೆ ಲಹಿರು ಕೂಡಾ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆಯಿಂದೆ ಎಂದು ತಿಳಿದುಬಂದಿದೆ. ಬ್ಯಾಟರ್‌ಗಳಾದ ಕುಸಾಲ್ ಪೆರೆರಾ ಹಾಗೂ ಆವಿಷ್ಕಾ ಫೆರ್ನಾಂಡೊ ಕೋವಿಡ್‌ನಿಂದ ಬಳಲುತ್ತಿದ್ದು, ವೇಗಿ ಚಮೀರ ಹಾಗೂ ಆಲ್ರೌಂಡರ್ ಹಸರಂಗ ಗಾಯಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದಾರೆ.