
ನವದೆಹಲಿ(ಜೂ.24): ಕಳೆದ ಕೆಲವು ಗಂಟೆಗಳು ನವದೀಪ್ ಸೈನಿ ಪಾಲಿಗೆ ಒಂದು ರೀತಿ ಕನಸು ನನಸಾದ ಕ್ಷಣ. ಶುಕ್ರವಾರ ಬೆಳಗ್ಗೆ ಕೌಂಟಿ ಕ್ರಿಕೆಟ್ ಆಡಲು ನವದೀವ್ ಸೈನಿ, ಲಂಡನ್‌ಗೆ ಬಂದಿಳಿಯುತ್ತಿದ್ದಂತೆಯೇ, ಬಿಸಿಸಿಐ ಆಯ್ಕೆ ಸಮಿತಿ ನೀಳಕಾಯದ ಬಲಗೈ ವೇಗಿಗೆ ಗುಡ್ ನ್ಯೂಸ್ ನೀಡಿದೆ. ಜುಲೈ 12ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನವದೀವ್ ಸೈನಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಕೌಂಟಿ ಕ್ರಿಕೆಟ್ ಆಡಲು ಇಂದು ಬೆಳಗ್ಗೆಯಷ್ಟೇ ನಾನು ಇಲ್ಲಿಗೆ ಬಂದಿಳಿದೆ. ಏರ್‌ಪೋರ್ಟ್‌ನಲ್ಲಿದ್ದಾಗಲೇ , ನಾನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎನ್ನುವ ವಿಚಾರ ಗೊತ್ತಾಯಿತು ಎಂದು ಲಂಡನ್‌ನಿಂದಲೇ ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದಾಗಿ ವರದಿಯಾಗಿದೆ.
2021ರಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಬ್ರಿಸ್ಬೇನ್‌ನಲ್ಲಿ ನೀಳಕಾಯದ ವೇಗಿ ನವದೀಪ್ ಸೈನಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಗಾಯದ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಭಾರತ ತಂಡದಲ್ಲಿ ಸೈನಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇದೀಗ ವೆಸ್ಟ್ ಇಂಡೀಸ್ ಎದುರಿನ ಸರಣಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿರುವುದರಿಂದಾಗಿ ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿರುವ ಸಾಮರ್ಥ್ಯವಿರುವ ಸೈನಿಗೆ ತಂಡದಲ್ಲಿ ಆಯ್ಜೆ ಸಮಿತಿ ಮಣೆ ಹಾಕಿದೆ. ವಿಂಡೀಸ್ ಎದುರಿನ ಸರಣಿಯಲ್ಲಿ ಜಯದೇವ್ ಉನಾದ್ಕತ್ ಹಾಗೂ ಮುಕೇಶ್ ಕುಮಾರ್ ಹಿಂದಿಕ್ಕಿ ಮೂರನೇ ವೇಗಿಯ ರೂಪದಲ್ಲಿ ನವದೀಪ್ ಸೈನಿ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಭಾರತ ತಂಡದಿಂದ ಬುಲಾವ್ ಬರುತ್ತದೆ ಎಂದು ಯಾವುದೇ ನಿರೀಕ್ಷೆ ಇರಲಿಲ್ಲ. ಐಪಿಎಲ್ ಟೂರ್ನಿಯ ವೇಳೆ ನಾನು ಡ್ಯೂಕ್ ಬಾಲ್‌ನಲ್ಲಿ ಅಭ್ಯಾಸ ನಡೆಸಿದ್ದೆ. ಯಾಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ನೆಟ್ ಬೌಲರ್ ರೂಪದಲ್ಲಿ ಸ್ಥಾನ ಪಡೆಯಬಹುದು ಎನ್ನುವ ನಿರೀಕ್ಷೆಯಿತ್ತು ಎಂದು ನವದೀಪ್ ಸೈನಿ ಹೇಳಿದ್ದಾರೆ.
30 ವರ್ಷದ ನವದೀಪ್ ಸೈನಿ, 4 ಕೌಂಟಿ ಪಂದ್ಯಗಳನ್ನಾಡಲು ವರ್ಸೆಸ್ಟರ್‌ಶೈರ್ ತಂಡದ ಜತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದೀಗ ದಿಢೀರ್ ಎನ್ನುವಂತೆ ಭಾರತ ತಂಡದಿಂದ ಬುಲಾವ್ ಬಂದಿದ್ದರಿಂದಾಗಿ, ಕೌಂಟಿ ಕ್ರಿಕೆಟ್ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸೈನಿ, ಭಾರತಕ್ಕೆ ವಾಪಾಸ್ಸಾಗುವ ಸಾಧ್ಯತೆಯಿದೆ.
IPL ಮಾನದಂಡವಾದರೇ, ಯುವಕರು ರಣಜಿ ಯಾಕೆ ಆಡಬೇಕು? ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಸನ್ನಿ ಸಿಡಿಮಿಡಿ
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ನಾನು ಕನಿಷ್ಠ ಒಂದು ಪಂದ್ಯವನ್ನಾದರೂ ಆಡುವ ವಿಶ್ವಾಸವಿದೆ. ಇದು ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ನನಗೆ ಉತ್ತಮ ಅಭ್ಯಾಸ ನಡೆಸಿದಂತಾಗುತ್ತದೆ ಎಂದು ನವದೀಪ್ ಸೈನಿ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವು ಡೊಮಿನಿಕ್‌ನಲ್ಲಿ ಜುಲೈ 12ರಿಂದ 16ರ ವರೆಗೆ ನಡೆಯಲಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯವು ಟ್ರಿನಿಡ್ಯಾಡ್‌ನಲ್ಲಿ ಜುಲೈ 20ರಿಂದ 24ರ ವರೆಗೆ ಜರುಗಲಿದೆ.
ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.