
ಪುದಚೆರಿ(ಜು.14): 4 ವರ್ಷಗಳ ಬಳಿಕ ನಡೆದ ದೇವಧರ್ ಟ್ರೋಫಿ ಲಿಸ್ಟ್ 'ಎ'(50 ಓವರ್) ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಎದುರು ಮಯಾಂಕ್ ಅಗರ್‌ವಾಲ್ ನೇತೃತ್ವದ ದಕ್ಷಿಣ ವಲಯ 45 ರನ್ ಅಂತರದ ಗೆಲುವು ಸಾಧಿಸಿ, 9ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ಇತ್ತೀಚೆಗಷ್ಟೇ ದುಲೀಪ್ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ದಕ್ಷಿಣ ವಲಯ, ಇದೀಗ ಮತ್ತೊಂದು ಟ್ರೋಫಿ ಎತ್ತಿ ಹಿಡಿದಿದೆ.
ರೌಂಡ್ ರಾಬಿನ್ ಹಂತದಲ್ಲಿ ಸತತ 5 ಗೆಲುವು ಸಾಧಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ದಕ್ಷಿಣ ವಲಯ, ಪ್ರಶಸ್ತಿ ಸುತ್ತಿನಲ್ಲೂ ಭರ್ಜರಿ ಆಟವಾಡಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯಕ್ಕೆ ರೋಹನ್ ಕುನ್ನುಮಲ್‌ರ ಆಕರ್ಷಕ ಶತಕ ಹಾಗೂ ನಾಯಕ ಮಯಾಂಕ್ ಅಗರ್‌ವಾಲ್ ಮತ್ತು ಎನ್ ಜಗದೀಶನ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 328 ರನ್ ಕಲೆಹಾಕಿತು.
ಬೃಹತ್ ಗುರಿ ಬೆನ್ನತ್ತಿದ ಪೂರ್ವ ವಲಯ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಕರ್ನಾಟಕದ ವೇಗಿಗಳಾದ ವಾಸುಕಿ ಕೌಶಿಕ್ ಹಾಗೂ ವಿದ್ವತ್ ಕಾವೇರಪ್ಪ ಅವರ ಮಾರಕ ದಾಳಿ ಎದುರು ತಿಣುಕಾಡಿದ ಅಗ್ರಕ್ರಮಾಂಕ 14 ರನ್‌ಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿತ್ತು. ಈ ವೇಳೆ 4ನೇ ವಿಕೆಟ್‌ಗೆ ಜತೆಯಾದ ಸುದೀಪ್ ಘರಾಮಿ ಹಾಗೂ ನಾಯಕ ಸೌರಭ್ ತಿವಾರಿ 58 ರನ್ ಜತೆಯಾಟವಾಡಿದರು. ಸೌರಭ್(28) ಹಾಗೂ ಸುದೀಪ್(41)ರ ವಿಕೆಟ್ ಕಳೆದುಕೊಂಡಾಗ ತಂಡದ ಮೊತ್ತ 115ಕ್ಕೆ 5.
ಪರಾಗ್-ಕುಮಾರ್ ಹೋರಾಟ: 6ನೇ ವಿಕೆಟ್‌ಗೆ ಜತೆಯಾದ ರಿಯಾನ್ ಪರಾಗ್ ಹಾಗೂ ಕುಮಾರ್ ಕುಶಾಗ್ರ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ರಿಯಾನ್ ಪರಾಗ್ 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 95 ರನ್ ಬಾರಿಸಿ ಔಟಾಗುವ ಮೂಲಕ ಟೂರ್ನಿಯಲ್ಲಿ ಮೂರನೇ ಶತಕದಿಂದ ವಂಚಿತರಾದರು. ಇದರೊಂದಿಗೆ 115 ರನ್‌ಗಳ ಜತೆಯಾಟಕ್ಕೂ ತೆರೆಬಿತ್ತು. 58 ಎಸೆತಗಳಲ್ಲಿ 68 ರನ್ ಸಿಡಿಸಿ ಕುಶಾಗ್ರ ವಿಕೆಟ್ ಒಪ್ಪಿಸಿದರು. ಇಬ್ಬರಿಗೂ ಅನುಭವಿ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು. ಪೂರ್ವ ವಲಯ 46 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಯಿತು.
181 ರನ್ ಜತೆಯಾಟ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಲಿಳಿದ ದಕ್ಷಿಣ ವಲಯಕ್ಕೆ ರೋಹನ್ ಹಾಗೂ ಮಯಾಂಕ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಕೇರಳ ಬ್ಯಾಟರ್ ರೋಹನ್ 75 ಎಸತೆಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 107 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ಮಯಾಂಕ್ ಅಗರ್‌ವಾಲ್ 63 ರನ್ ಬಾರಿಸಿದರು. ಇವರಿಬ್ಬರ ನಡುವೆ 24.4 ಓವರ್‌ಗಳಲ್ಲಿ 181 ರನ್ ಜತೆಯಾಟ ಮೂಡಿ ಬಂತು. ಇಬ್ಬರು ಔಟಾದ ಬಳಿಕ ಜಗದೀಶನ್ 54 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಸಾಯಿ ಕಿಶೋರ್(24), ವೈಶಾಖ್(11) ತಂಡದ ಮೊತ್ತವನ್ನು 300 ರನ್ ಗಡಿ ದಾಟಿಸಿದರು.
ಮಹಾರಾಜ ಟಿ20ಯಿಂದ ಪಡಿಕ್ಕಲ್, ಮಿಥುನ್ ಔಟ್
ಬೆಂಗಳೂರು: ತಾರಾ ಬ್ಯಾಟರ್ ದೇವದತ್ ಪಡಿಕ್ಕಲ್ ಮುಂಬರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಿಂದ ಹೊರಬಿದ್ದಿದ್ದಾರೆ. ದೇವಧರ್ ಟ್ರೋಫಿಯಲ್ಲಿ ಆಡುವಾಗ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದ ಪಡಿಕ್ಕಲ್, ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಕನಿಷ್ಠ 1 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಚಾಂಪಿಯನ್ ಗುಲ್ಬರ್ಗಾ ತಂಡಕ್ಕೆ ಟೂರ್ನಿ ಆರಂಭಕ್ಕೂ ಮೊದಲೇ ಆಘಾತ ಎದುರಾಗಿದೆ. ಇದೇ ವೇಳೆ ಅಮೆರಿಕದ ಮಾಸ್ಟರ್ಸ್ ಟಿ10 ಟೂರ್ನಿಯಲ್ಲಿ ಆಡಲು ಇಚ್ಛಿಸಿರುವ ಹಿರಿಯ ವೇಗಿ ಅಭಿಮನ್ಯು ಮಿಥುನ್ ಕೂಡ ರಾಜ್ಯ ಟಿ20 ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಮಿಥುನ್ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.