ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!

Kannadaprabha News   | Kannada Prabha
Published : Jan 14, 2026, 08:23 AM IST
venkatesh prasad

ಸಾರಾಂಶ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು, ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಇದು ಉಲ್ಲಂಘನೆಯಾಗಿದೆ.  

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಸಿಲುಕಿದ್ದಾರೆ. ರಾಜ್ಯ ಸಂಸ್ಥೆಯೊಂದರ ಪದಾಧಿಕಾರಿಯಾಗಿರುವ ಅವರು, ಪ್ರಸ್ತುತ ಚಾಲ್ತಿಯಲ್ಲಿರುವ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲಿಂಗ್‌ ಕೋಚ್‌/ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಸಿಐನ ಸ್ವಹಿತಾಸಕ್ತಿ ಸಂಘಷ್ಟ ನಿಯಮ 38(4)ರ ಅಡಿಯಲ್ಲಿ ಇದು ಉಲ್ಲಂಘನೆಯಾಗಿದೆ.

ತಂಡದ ಅಭ್ಯಾಸದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿರುವುದು, ಪಂದ್ಯದ ವೇಳೆ ತಂಡದೊಂದಿಗೆ ಡಗೌಟ್‌ನಲ್ಲಿ ಕೂತಿರುವ ದೃಶ್ಯಗಳು ಡಬ್ಲ್ಯುಪಿಎಲ್‌ ಪಂದ್ಯದ ಪ್ರಸಾರದ ವೇಳೆ ಕಂಡುಬಂದಿದ್ದವು. ಇನ್ನು, ಡೆಲ್ಲಿ ತಂಡ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಡ್ರೆಸ್ಸಿಂಗ್‌ ರೂಂ ಒಳಗಿನ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಸಾದ್‌ ಅದರಲ್ಲೂ ಕಾಣಿಸುತ್ತಾರೆ. ತಂಡದ ಕೋಚಿಂಗ್‌ ಸಿಬ್ಬಂದಿಯಾಗದಿದ್ದರೆ, ಪ್ರಸಾದ್‌ಗೆ ಮೈದಾನಕ್ಕೆ, ಡಗೌಟ್‌ಗೆ ಪ್ರವೇಶವೇ ಸಿಗುವುದಿಲ್ಲ. ಹೀಗಾಗಿ, ಪ್ರಸಾದ್‌ ತಂಡದ ಕೋಚ್‌ ಅಥವಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗುತ್ತದೆ.

ಬಿಸಿಸಿಐ ನಿಯಮವೇನು?: 

ಬಿಸಿಸಿಐನ ನಿಯಮ 38(4) ಪ್ರಕಾರ, ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಹುದ್ದೆಯಲ್ಲಿರುವಂತಿಲ್ಲ. ಪ್ರಸಾದ್‌ ರಾಜ್ಯ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದುಕೊಂಡು, ತಂಡವೊಂದರ ಕೋಚಿಂಗ್‌ ಸಿಬ್ಬಂದಿಯಾಗಿರುವುದು ಖಂಡಿತವಾಗಿಯೂ ಸ್ವಹಿತಾಸಕ್ತಿ ಸಂಘರ್ಷಕ್ಕೆ ಒಳಪಡುತ್ತದೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಕ್ರಿಕೆಟ್‌ ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದ ಪ್ರಸಾದ್‌, ಈಗ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ರಾಜ್ಯ ಕ್ರಿಕೆಟ್‌ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬರುತ್ತಿದೆ.

ಇತ್ತೀಚೆಗೆ ಅಧ್ಯಕ್ಷ ಹುದ್ದೆಗೇರಿದ್ದರು: ಕಳೆದ ತಿಂಗಳಷ್ಟೇ ಪ್ರಸಾದ್‌ ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಭಾರೀ ಕುತೂಹಲ ಮೂಡಿಸಿದ್ದ, ಕೋರ್ಟ್‌ ಮೆಟ್ಟಿಲೇರಿದ್ದ ಚುನಾವಣೆಯಲ್ಲಿ ವೆಂಕಟೇಶ್‌ ಪ್ರಸಾದ್‌ರ ತಂಡ ಜಯಭೇರಿ ಬಾರಿಸಿತ್ತು. ಅಧ್ಯಕ್ಷರಾಗುತ್ತಿದ್ದಂತೆ ಕಾರ್ಯಪ್ರವೃತರಾಗಿದ್ದ ಪ್ರಸಾದ್‌, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್‌ ವಾಪಸ್‌ ತರಲು ಪ್ರಯತ್ನ ಆರಂಭಿಸಿದ್ದರು. ನ್ಯಾ.ಕುನ್ಹಾ ಸಮಿತಿ ಶಿಫಾರಸಿನಂತೆ ಕೆಎಸ್‌ಸಿಎನಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಪ್ರಸಾದ್‌ ನುಡಿದಂತೆ ನಡೆಯುತ್ತಿದ್ದಾರೆ ಎನ್ನುವಾಗಲೇ ಅವರು ವಿವಾದಕ್ಕೆ ತುತ್ತಾಗಿದ್ದಾರೆ.

ಪ್ರತಿಕ್ರಿಯೆ ಇಲ್ಲ: ತಮ್ಮ ವಿರುದ್ಧ ಎದ್ದಿರುವ ಸ್ವಹಿತಾಸಕ್ತಿ ಸಂಘರ್ಷ ವಿವಾದ ಕುರಿತು ಪ್ರತಿಕ್ರಿಯೆ ಕೇಳಲು ‘ಕನ್ನಡಪ್ರಭ’ ವೆಂಕಟೇಶ್‌ ಪ್ರಸಾದ್‌ರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿತು. ಅವರಿಗೆ ಕಳುಹಿಸಿದ ವ್ಯಾಟ್ಸ್‌ಆ್ಯಪ್‌ ಸಂದೇಶಕ್ಕೆ ಪತ್ರಿಕೆ ಮುದ್ರಣಕ್ಕೆ ಹೋಗುವ ವರೆಗೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ.

ಈ ಹಿಂದೆಯೂ ಸ್ವಹಿತಾಸಕ್ತಿ ಆರೋಪ ಎದುರಿಸಿದ್ದ ಪ್ರಸಾದ್‌!

ವೆಂಕಟೇಶ್‌ ಪ್ರಸಾದ್ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ಅವರು ಬಿಸಿಸಿಐ ಕಿರಿಯರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾಗ ಅವರ ವಿರುದ್ಧ ಸ್ವಹಿತಾಸಕ್ತಿ ಆರೋಪ ಕೇಳಿಬಂದಿತ್ತು. ಪ್ರಸಾದ್‌ ತಮ್ಮ ಸ್ನೇಹಿತ, ಈಗ ಕೆಎಸ್‌ಸಿಎ ಉಪಾಧ್ಯಕ್ಷರಾಗಿರುವ ಸುಜಿತ್‌ ಸೋಮಸುಂದರ್‌ ಅವರ ಜೊತೆ ಕ್ರಿಕೆಟ್‌ ಅಕಾಡೆಮಿ ನಡೆಸುತ್ತಿದ್ದಾರೆ. ಅಕಾಡೆಮಿಯಲ್ಲಿ ಶೇ.50ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಎಂದು ಬಿಸಿಸಿಐನ ಸ್ವತಂತ್ರ ತನಿಖಾಧಿಕಾರಿ (ಓಂಬುಡ್ಸ್‌ಮನ್‌)ಗೆ ದೂರು ಸಲ್ಲಿಕೆಯಾಗಿತ್ತು. ಆಗ ಒಂದು ಹುದ್ದೆಯನ್ನು ಕೈಬಿಡುವಂತೆ ಪ್ರಸಾದ್‌ಗೆ ಸೂಚನೆ ಓಂಬುಡ್ಸ್‌ಮನ್‌ ಸೂಚಿಸಿದ್ದರು. ಪ್ರಸಾದ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತಮ್ಮ ಪಾಲುದಾರಿಕೆಯನ್ನು ತ್ಯಜಿಸಿರುವುದಾಗಿ ತಿಳಿಸಿದ್ದರು.

ಬಳಿಕ 2018ರಲ್ಲಿ ಪ್ರಸಾದ್‌ ಐಪಿಎಲ್‌ ತಂಡದ ಬೌಲಿಂಗ್‌ ಕೋಚ್‌ ಹುದ್ದೆ ಅಲಂಕರಿಸುವ ಮೊದಲು ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜಸ್ಥಾನ್ ರಾಯಲ್ಸ್ ಖರೀದಿಗೆ 'ಉಕ್ಕಿನ ಮನುಷ್ಯ' ಎಂಟ್ರಿ: ಬಿರ್ಲಾ ಗ್ರೂಪ್‌ಗೆ ಟಕ್ಕರ್ ಕೊಡಲು ಬಂದ ಮಿತ್ತಲ್ ಫ್ಯಾಮಿಲಿ!
ಕ್ರಿಕೆಟ್ ಮಾತ್ರವಲ್ಲ, Smriti Mandhana ಫ್ಯಾಷನ್ ಸೆನ್ಸ್ ಕೂಡ ನಂ. 1… Photos Viral