ವಿರಾಟ್ ಕೊಹ್ಲಿ ಶತಕದ ಹೋರಾಟ ವ್ಯರ್ಥ: ಭಾರತದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!

Kannadaprabha News   | Kannada Prabha
Published : Jan 19, 2026, 09:09 AM IST
virat kohli

ಸಾರಾಂಶ

ಇಂದೋರ್‌ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅಮೋಘ ಶತಕ (124) ವ್ಯರ್ಥವಾಯಿತು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಶತಕಗಳ ನೆರವಿನಿಂದ ನ್ಯೂಜಿಲೆಂಡ್ 337 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ, ಕೊಹ್ಲಿಯ ಹೋರಾಟದ ಹೊರತಾಗಿಯೂ ಸೋಲನುಭವಿಸಿತು.

ಇಂದೋರ್‌: ಚೇಸ್ ಮಾಸ್ಟರ್‌, ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಮತ್ತೊಂದು ಅತ್ಯಾಕರ್ಷಕ ಶತಕ ಸಿಡಿಸಿದ್ದಾರೆ. ಆದರೆ ಈ ಬಾರಿ ಭಾರತಕ್ಕೆ ಗೆಲುವು ಮಾತ್ರ ಸಿಗಲಿಲ್ಲ. ನಿತೀಶ್‌ ಕುಮಾರ್‌, ಹರ್ಷಿತ್‌ ರಾಣಾ ಜೊತೆಗೂಡಿ ತಮ್ಮ ಅಮೋಘ ಹೋರಾಟದ ಮೂಲಕ ಕೊಹ್ಲಿ ಭಾರತವನ್ನು ಸರಣಿ ಗೆಲುವಿನತ್ತ ಕೊಂಡೊಯ್ದರೂ, ಕೊನೆ ಕ್ಷಣದಲ್ಲಿ ಕಿವೀಸ್‌ ವಿಜಯಮಾಲೆಯನ್ನು ಕೊರಳಿಗೇರಿಸಿಕೊಂಡಿದೆ. ಇದರೊಂದಿಗೆ ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ(2-1) ಗೆಲುವನ್ನೂ ತನ್ನದಾಗಿಸಿಕೊಂಡಿತು.

ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 8 ವಿಕೆಟ್‌ಗೆ 337 ರನ್‌ ಕಲೆಹಾಕಿತು. 5 ರನ್‌ಗೆ 2 ವಿಕೆಟ್‌ ಉರುಳಿದರೂ, 4ನೇ ವಿಕೆಟ್‌ಗೆ ಜೊತೆಯಾದ ಡ್ಯಾರಿಲ್‌ ಮಿಚೆಲ್‌(131 ಎಸೆತಕ್ಕೆ 137) ಹಾಗೂ ಗ್ಲೆನ್‌ ಫಿಲಿಪ್ಸ್‌(88 ಎಸೆತಕ್ಕೆ 106) ಪಂದ್ಯದ ಚಿತ್ರಣ ಬದಲಿಸಿದರು. ಈ ಜೋಡಿ 219 ರನ್‌ ಜೊತೆಯಾಟವಾಡಿತು. ಭಾರತದ ಪರ ಹರ್ಷಿತ್‌, ಅರ್ಶ್‌ದೀಪ್‌ ಸಿಂಗ್‌ ತಲಾ 3 ವಿಕೆಟ್‌ ಕಿತ್ತರು.

ಕೊಹ್ಲಿ ಆರ್ಭಟ ವ್ಯರ್ಥ:

ದೊಡ್ಡ ಮೊತ್ತ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಬೇಕಿತ್ತು. ಅದು ಸಾಧ್ಯವಾಗಲಿಲ್ಲ. ರೋಹಿತ್‌ 11, ಗಿಲ್‌ 23, ಶ್ರೇಯಸ್‌ 3, ಕೆ.ಎಲ್‌.ರಾಹುಲ್‌ 1 ರನ್‌ಗೆ ವಿಕೆಟ್‌ ಒಪ್ಪಿಸಿದರು. 71ಕ್ಕೆ 4 ವಿಕೆಟ್‌ ಪತನಗೊಂಡ ಬಳಿಕ ತಂಡವನ್ನು ಮೇಲೆತ್ತಿದ್ದು ಕೊಹ್ಲಿ-ನಿತೀಶ್‌. ಈ ಜೋಡಿ 88 ರನ್‌ ಸೇರಿಸಿತು. ನಿತೀಶ್‌ 53 ರನ್‌ಗೆ ಔಟಾದ ಬಳಿಕ, ಹರ್ಷಿತ್‌ ಜೊತೆಗೂಡಿದ ಕೊಹ್ಲಿ 7ನೇ ವಿಕೆಟ್‌ಗೆ 99 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಹಂತದಲ್ಲಿ ಹರ್ಷಿತ್‌ 52 ರನ್‌ಗೆ ಔಟಾದರು. ಏಕಾಂಗಿಯಾಗಿ ಹೋರಾಡಿದ ಕೊಹ್ಲಿ ಏಕದಿನದಲ್ಲಿ 54ನೇ ಶತಕ ಬಾರಿಸಿದರೂ, 108 ಎಸೆತಕ್ಕೆ 124 ರನ್‌ ಗಳಿಸಿದ್ದಾಗ ಇನ್ನಿಂಗ್ಸ್‌ನ 46ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ತಂಡದ ಹೋರಾಟ ಅಂತ್ಯವಾಯಿತು. 46 ಓವರ್‌ಗಳಲ್ಲಿ ಭಾರತ 296ಕ್ಕೆ ಆಲೌಟಾಯಿತು.

ಸ್ಕೋರ್‌: ನ್ಯೂಜಿಲೆಂಡ್‌ 337/8 (ಡ್ಯಾರಿಲ್‌ 137, ಫಿಲಿಪ್ಸ್‌ 106, ಅರ್ಶ್‌ದೀಪ್‌ 3-63, ಹರ್ಷಿತ್‌ 3-84), ಭಾರತ 46 ಓವರಲ್ಲಿ 296/10 (ಕೊಹ್ಲಿ 124, ನಿತೀಶ್‌ 53, ಹರ್ಷಿತ್ 52, ಕ್ಲಾರ್ಕ್‌ 3-54, ಪೋಲ್ಕ್ಸ್ 3-77)

 

ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ: ಡ್ಯಾರಿಲ್‌ ಮಿಚೆಲ್‌

38 ವರ್ಷ, 8 ಸರಣಿ: ಕೊನೆಗೂ ಕಿವೀಸ್‌ಗೆ ಭಾರತದಲ್ಲಿ ಯಶಸ್ಸು

ಕಿವೀಸ್‌ ತಂಡ ಇದೇ ಮೊದಲ ಬಾರಿ ಭಾರತದಲ್ಲಿ ಏಕದಿನ ಸರಣಿ ಗೆದ್ದಿದೆ. ತಂಡ 1988ರಿಂದಲೂ ಭಾರತದಲ್ಲಿ ಏಕದಿನ ಸರಣಿ ಆಡುತ್ತಿದೆ. ಆದರೆ ಒಮ್ಮೆಯೂ ಗೆದ್ದಿರಲಿಲ್ಲ. ಇದೀಗ 8ನೇ ಪ್ರಯತ್ನದಲ್ಲಿ ಸರಣಿ ಗೆದ್ದು ಸಂಭ್ರಮಿಸಿದೆ. 2024ರಲ್ಲಿ ಟೆಸ್ಟ್‌ ಸರಣಿ ವೈಟ್‌ವಾಶ್‌ ಮಾಡಿದ್ದ ಕಿವೀಸ್‌, ಈಗ ಏಕದಿನ ಸರಣಿಯಲ್ಲೂ ಭಾರತಕ್ಕೆ ಆಘಾತ ನೀಡಿದೆ.

01ನೇ ಬಾರಿ: ಭಾರತ ತಂಡ ಇಂದೋರ್‌ನಲ್ಲಿ ಮೊದಲ ಬಾರಿ ಏಕದಿನ ಪಂದ್ಯ ಸೋತಿದೆ. ಈ ಮೊದಲು 7ರಲ್ಲೂ ಗೆದ್ದಿತ್ತು.

01ನೇ ಬಾರಿ: 2022ರ ಬಳಿಕ ಭಾರತ ಟಾಸ್‌ ಗೆದ್ದ ಪಂದ್ಯದಲ್ಲಿ ಸೋತಿದ್ದು ಇದೇ ಮೊದಲು. ಈ ಮೊದಲು 13 ಏಕದಿನದಲ್ಲಿ ಗೆದ್ದಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾದ ಸೋಲಿಸಿದ ಡ್ಯಾರಿಲ್ ಮಿಚೆಲ್ ಬ್ಯೂಟಿಫುಲ್ ಫ್ಯಾಮಿಲಿ!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; ಅಭಿಮಾನಿಗಳು ಹೇಳಿದ್ದೇನು?