
ಪರ್ತ್: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 7 ತಿಂಗಳ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದು, ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತ ತಂಡಕ್ಕೆ ಹೊಸ ನಾಯಕನ ನೇಮಕವಾಗಿದ್ದು, ಇತ್ತೀಚೆಗಷ್ಟೇ ನಾಯಕನಾಗಿ ಮೊದಲ ಟೆಸ್ಟ್ ಸರಣಿ ಗೆಲುವು ಸಾಧಿಸಿದ ಶುಭಮನ್ ಗಿಲ್ ಏಕದಿನದಲ್ಲೂ ಯಶಸ್ವಿ ಆರಂಭ ಪಡೆಯಲು ಕಾಯುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ಆಡಲಿರುವ ಮೊದಲ ಏಕದಿನ ಪಂದ್ಯ ಇದ್ದಾಗಿದ್ದು, ಈ ಮಧ್ಯದಲ್ಲಿ ತಂಡದಲ್ಲಿ ಕೆಲ ಬದಲಾವಣೆಗಳಾಗಿವೆ. ಕೊಹ್ಲಿ ಹಾಗೂ ರೋಹಿತ್ ಇಲ್ಲದೆ ಟೆಸ್ಟ್, ಟಿ20 ಪಂದ್ಯಗಳನ್ನು ನೋಡುವುದು ಅಭಿಮಾನಿಗಳಿಗೆ ಈಗ ಅಭ್ಯಾಸವಾಗಿ ಹೋಗಿದೆ. ಇನ್ನು, 2027ರ ಏಕದಿನ ವಿಶ್ವಕಪ್ ವರೆಗೂ ಇಬ್ಬರೂ ತಂಡದಲ್ಲಿ ಇರುತ್ತಾರಾ? ಇಬ್ಬರನ್ನೂ ಉಳಿಸಿಕೊಳ್ಳಲಾಗುತ್ತಾ ಎನ್ನುವ ಕುತೂಹಲಕ್ಕೆ ಈ ಸರಣಿಯಲ್ಲಿ ಸಂಪೂರ್ಣ ಉತ್ತರ ಸಿಗದಿದ್ದರೂ ಕೆಲ ಸುಳಿವಂತೂ ಖಂಡಿತವಾಗಿಯೂ ಸಿಗುವ ನಿರೀಕ್ಷೆ ಇದೆ. ಈ ಸರಣಿ ಕೊಹ್ಲಿ ಹಾಗೂ ರೋಹಿತ್ ಸುತ್ತಲೇ ಕೇಂದ್ರೀಕೃತವಾಗಿದೆ.
ಇವರಿಬ್ಬರ ಆಟದ ಮೇಲೆ ಹೆಚ್ಚು ಗಮನ ಇರಲಿದೆಯಾದರೂ, ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿರುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮೇಲೂ ಕಣ್ಣಿಡಲಾಗಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಏಕದಿನ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಕಾಯುತ್ತಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮೊಹಮ್ಮದ್ ಸಿರಾಜ್ ಭಾರತದ ವೇಗದ ದಾಳಿಯನ್ನು ಮುನ್ನಡೆಸಲಿದ್ದು, ಅರ್ಶದೀಪ್ ಸಿಂಗ್ ಹಾಗೂ ಪ್ರಸಿದ್ದ್ ಕೃಷ್ಣ ಸಾಥ್ ನೀಡುವ ಸಾಧ್ಯತೆಯಿದೆ. ಇನ್ನು ಕುಲ್ದೀಪ್ ಯಾದವ್ ತಜ್ಞ ಸ್ಪಿನ್ನರ್ ಅಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ
ಮತ್ತೊಂದೆಡೆ ಆಸ್ಟ್ರೇಲಿಯಾ ಹಲವು ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಆಡಲಿದ್ದು, ಮುಂದಿನ ತಿಂಗಳ ಆ್ಯಶಸ್ ಟೆಸ್ಟ್ ಸರಣಿಗೆ ಎಲ್ಲಾ ಆಟಗಾರರು ಲಭ್ಯರಿರುವಂತೆ ಎಚ್ಚರ ವಹಿಸುವುದು ತಂಡದ ಗುರಿಯಾಗಿರಲಿದೆ. ಯುವ ಆಟಗಾರರನ್ನು ಕಟ್ಟಿಕೊಂಡು ಮಿಚೆಲ್ ಮಾರ್ಷ್ ಯಾವ ರೀತಿ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ಅದರಲ್ಲೂ ಅನುಭವಿ ಆಟಗಾರ ಪ್ಯಾಟ್ ಕಮಿನ್ಸ್ ಹಾಗೂ ಕ್ಯಾಮರೋನ್ ಗ್ರೀನ್ ಅನುಪಸ್ಥಿತಿ ಕಾಂಗರೂ ಪಡೆಯನ್ನು ಕಾಡುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ಎರಡೂ ತಂಡಗಳು ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ತವರಿನ ಲಾಭ ಪಡೆದುಕೊಳ್ಳಲು ಕಾಂಗರೂ ಪಡೆ ಎದುರು ನೋಡುತ್ತಿದೆ.
ಭಾರತ: ರೋಹಿತ್ ಶರ್ಮಾ, ಶುಭ್ ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ /ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ/ ಅರ್ಶ್‌ದೀಪ್ ಸಿಂಗ್.
ಆಸ್ಟ್ರೇಲಿಯಾ: ಟ್ರ್ಯಾವಿಸ್ ಹೆಡ್, ಮಿಚ್ ಮಾರ್ಷ್ (ನಾಯಕ), ಮ್ಯಾಟ್ ಶಾರ್ಟ್, ಮ್ಯಾಟ್ ರೆನ್ಯಾ, ಫಿಲಿಪ್, ಓವನ್, ಕಾನೊಲಿ, ಸ್ಟಾರ್ಕ್, ಎಲ್ಲೀಸ್, ಕುಹೈಮನ್, ಹೇಜಲ್‌ವುಡ್.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ-ಹಾಟ್‌ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.