
ರಾಜ್‌ಕೋಟ್: 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದು ತಡವಾಗಿದ್ದರಿಂದ ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲ್ಲುವ ಅವಕಾಶ ಕೈತಪ್ಪಿತು. ಎಲೈಟ್ 'ಬಿ' ಗುಂಪಿನ ಪಂದ್ಯ ಡ್ರಾಗೊಂಡ ಕಾರಣ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಆಧಾರದಲ್ಲಿ ಸೌರಾಷ್ಟ್ರ 3 ಅಂಕ ಗಳಿಸಿದರೆ ಕರ್ನಾಟಕ 1 ಅಂಕಕ್ಕೆ ತೃಪ್ತಿಪಟ್ಟಿತು.
2ನೇ ಇನ್ನಿಂಗ್ನಲ್ಲಿ 3ನೇ ದಿನದಂತ್ಯಕ್ಕೆ 1 ವಿಕೆಟ್ ಗೆ 89 ರನ್ ಗಳಿಸಿದ್ದ ಕರ್ನಾಟಕ, 4ನೇ ಹಾಗೂ ಕೊನೆಯ ದಿನವಾದ ಶನಿವಾರ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿತು. ಆದರೆ, ಭೋಜನ ವಿರಾಮದ ಬಳಿಕವೂ ಒಂದು ಗಂಟೆ ಕಾಲ ಬ್ಯಾಟ್ ಮಾಡಿ ಇನ್ನಿಂಗ್ಸ್ ಡಿಕ್ಟೇರ್ ಮಾಡಿಕೊಳ್ಳಲು ತಡ ಮಾಡಿದ್ದು, ಕರ್ನಾಟಕಕ್ಕೆ ಮುಳುವಾದಂತೆ ಕಂಡುಬಂತು. 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 74.2 ಓವರ್ ಬ್ಯಾಟ್ ಮಾಡಿ 232 ರನ್ ಕಲೆಹಾಕಿತು. ಗೆಲ್ಲಲು ಒಂದೂವರೆ ಅವಧಿಯಲ್ಲಿ 227 ರನ್ ಗುರಿ ಪಡೆದ ಸೌರಾಷ್ಟ್ರ, ಮತ್ತೊಮ್ಮೆ ಶ್ರೇಯಸ್ ಗೋಪಾಲ್ ಸ್ಪಿನ್ ದಾಳಿ ಎದುರಿಸಲು ಪರದಾಡಿತು.
ಒಂದು ಹಂತದಲ್ಲಿ ಸೌರಾಷ್ಟ್ರ 13ನೇ ಓವರಲ್ಲಿ 43 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ದಿನದಾಟದಲ್ಲಿ ಇನ್ನೂ 40 ಓವರ್ ಬಾಕಿ ಇದ್ದ ಕಾರಣ, ಕರ್ನಾಟಕ ರೋಚಕ ಗೆಲುವು ಸಾಧಿಸುವ ಆಸೆ ಇಟ್ಟುಕೊಂಡಿತ್ತು. ಆದರೆ ಗಜ್ಜಾರ್ ಸಮರ್ (110 ಎಸೆತದಲ್ಲಿ ಔಟಾಗದೆ 43) ಹಾಗೂ ಜಯ್ ಗೊಹಿಲ್ (73 ಎಸೆತದಲ್ಲಿ 41 ರನ್) 5ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡು 81 ರನ್ ಸೇರಿಸಿದರು. ಈ ಜೋಡಿ 26 ಓವರ್ ಕ್ರೀಸ್‌ನಲ್ಲಿ ನೆಲೆಯೂರಿ, ಕರ್ನಾಟಕದ ಜಯದ ಆಸೆಗೆ ತಣ್ಣೀರೆರೆಚಿತು. ಅಂತಿಮವಾಗಿ 43 ಓವರಲ್ಲಿ 5 ವಿಕೆಟ್‌ಗೆ 128 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ನಲ್ಲಿ 8 ವಿಕೆಟ್ ಕಿತ್ತಿದ್ದ ಶ್ರೇಯಸ್ 2ನೇ ಇನ್ನಿಂಗ್ನಲ್ಲಿ 3 ವಿಕೆಟ್ ಕಬಳಿಸಿದರು.
ಕರ್ನಾಟಕ ದಿನದಾಟದ ಮೊದಲ ಅವಧಿಯ ವೇಳೆಗೆ 180 ರನ್ ಮುನ್ನಡೆ ಪಡೆದಿತ್ತು. ಆಗಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರೆ ಎದುರಾಳಿಯನ್ನು ಆಲೌಟ್‌ಗೆ ಪ್ರಯತ್ನಿಸಲು ಇನ್ನೊಂದು ಗಂಟೆ ಹೆಚ್ಚು ಸಮಯಾವಕಾಶ ಸಿಗುತ್ತಿತ್ತು. ಮಯಾಂಕ್ 64, ಕೆ.ಎಲ್.ಶ್ರೀಜಿತ್ 31 ರನ್ ಗಳಿಸಿದರು.
ಸ್ಕೋರ್:
ಕರ್ನಾಟಕ 372 ಹಾಗೂ 232 (ಮಯಾಂಕ್ 64, ಶ್ರೀಜಿತ್ 31, ದೊಡಿಯಾ 3-40, ಧರ್ಮೇಂದ್ರಸಿನ್ಸ್ 3-79)
ಸೌರಾಷ್ಟ್ರ 376 ಹಾಗೂ 128/5 (ಗಜ್ಜಾರ್ 43, ಜಯ್ 41, ಶ್ರೇಯಸ್ 3-43)
ಇನ್ನು ತಿರುವನಂತಪುರಂನಲ್ಲಿ ನಡೆದ ಕೇರಳ ಹಾಗೂ ಮಹಾರಾಷ್ಟ್ರ ನಡುವಿನ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಪ್ರವಾಸಿ ಮಹಾರಾಷ್ಟ್ರ ತಂಡವು ಮೂರು ಅಂಕ ತನ್ನದಾಗಿಸಿಕೊಂಡರೆ, ಆತಿಥೇಯ ಕೇರಳ ಕೇವಲ ಒಂದು ಅಂಕ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ 239 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಗುರಿ ಬೆನ್ನತ್ತಿದ ಕೇರಳ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಕೇವಲ 219 ರನ್‌ಗಳಿಗೆ ಸರ್ವಪತನ ಕಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 20 ರನ್‌ಗಳ ಅಲ್ಪ ಮುನ್ನಡೆ ಪಡೆದ ಮಹಾರಾಷ್ಟ್ರ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 224 ರನ್ ಬಾರಿಸಿದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಮಹಾರಾಷ್ಟ್ರ ಪರ ಪೃಥ್ವಿ ಶಾ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.