ರಣಜಿ ಟ್ರೋಫಿ: 11 ವರ್ಷಗಳ ಬಳಿಕ ಫೈನಲ್‌ಗೆ ಕರ್ನಾಟಕ ಎಂಟ್ರಿ; ಪ್ರಶಸ್ತಿಗಾಗಿ ಜಮ್ಮು& ಕಾಶ್ಮೀರ ಜತೆ ಫೈಟ್

Kannadaprabha News   | Kannada Prabha
Published : Feb 20, 2026, 08:40 AM IST
Devdutt Padikkal, KL rahul

ಸಾರಾಂಶ

ಬರೋಬ್ಬರಿ 11 ವರ್ಷಗಳ ಬಳಿಕ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಉತ್ತರಾಖಂಡ ವಿರುದ್ಧದ ಸೆಮಿಫೈನಲ್ ಪಂದ್ಯ ಡ್ರಾಗೊಂಡರೂ, ಮೊದಲ ಇನ್ನಿಂಗ್ಸ್‌ನ ಬೃಹತ್ ಮುನ್ನಡೆಯ ಆಧಾರದ ಮೇಲೆ ರಾಜ್ಯ ತಂಡ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಿತು.

ಲಖನೌ: 8 ಬಾರಿ ಚಾಂಪಿಯನ್‌ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಬಳಿಕ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್​ಗೇರಿದೆ. 2014-15ರಲ್ಲಿ ಕೊನೆ ಬಾರಿ ಫೈನಲ್‌ಗೇರಿ ಚಾಂಪಿಯನ್‌ ಆಗಿದ್ದ ರಾಜ್ಯ ತಂಡ, ಬಳಿಕ ಒಮ್ಮೆಯೂ ಪ್ರಶಸ್ತಿ ಸುತ್ತಿಗೇರಿರಲಿಲ್ಲ. ದಶಕದ ಕಾಯುವಿಕೆ ಬಳಿಕ ಈ ಬಾರಿ ಮತ್ತೆ ಟ್ರೋಫಿ ಸನಿಹಕ್ಕೆ ಬಂದಿದೆ.

ಲಖನೌದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ ಮತ್ತು ಕರ್ನಾಟಕ ನಡುವಿನ ಸೆಮಿಫೈನಲ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಆದರೆ ಮೊದಲ ಇನಿಂಗ್ಸ್​ನಲ್ಲಿ ಪಡೆದಿದ್ದ 503 ರನ್​ಗಳ ಬೃಹತ್‌ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ. ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸುವ ಉತ್ತರಾಖಂಡದ ಕನಸು ಭಗ್ನಗೊಂಡಿತು.

5 ದಿನಗಳ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಉತ್ತರಾಖಂಡ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆ.ಎಲ್.ರಾಹುಲ್(141), ರವಿಚಂದ್ರನ್ ಸ್ಮರಣ್‌(135) ಶತಕ ಬಾರಿಸಿದರೆ, ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದ್ದರು.

ಈ ಮೂಲಕ ಕರ್ನಾಟಕ 194.4 ಓವರ್​ಗಳಲ್ಲಿ ಬರೋಬ್ಬರಿ 736 ರನ್​ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕೇವಲ 233 ರನ್‌ಗೆ ಆಲೌಟಾಗಿ, 503 ರನ್‌ ಹಿನ್ನಡೆ ಅನುಭವಿಸಿತ್ತು.

ಆದರೆ ಫಾಲೋಆನ್‌ ಹೇರದ ಕರ್ನಾಟಕ ತಂಡ 2ನೇ ಇನ್ನಿಂಗ್ಸ್‌ ಆರಂಭಿಸಿ, 4ನೇ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟದಲ್ಲಿ 299 ರನ್‌ ಗಳಿಸಿತ್ತು. ಸ್ಮರಣ್‌ 127 ರನ್‌ ಗಳಿಸಿ ಔಟಾಗಿದ್ದರು. ಗುರುವಾರವೂ ಬ್ಯಾಟ್‌ ಮಾಡಿದ ತಂಡ 323 ರನ್‌ಗೆ ಸರ್ವಪತನ ಕಂಡಿತು. ಕೆ.ಎಲ್‌.ರಾಹುಲ್‌ 86 ರನ್‌ ಗಳಿಸಿ ಅಜೇಯವಾಗಿ ಉಳಿದರು. ಪಂದ್ಯದಲ್ಲಿ ರಾಜ್ಯ ತಂಡ ಒಟ್ಟು 1059 ರನ್‌ ಕಲೆಹಾಕಿತು.

ಗೆಲುವಿಗೆ 827 ರನ್‌ ಗುರಿ ಪಡೆದ ಉತ್ತರಾಖಂಡ 6 ವಿಕೆಟ್‌ಗೆ 260 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. ಅವ್ನೀಶ್‌ ಸುಧಾ(66), ಸೌರಭ್‌ ರಾವತ್‌(ಔಟಾಗದೆ 53) ಹಾಗೂ ಅಭಯ್‌ ನೇಗಿ(ಔಟಾಗದೆ 57) ಸಿಡಿಸಿದರು. ಶ್ರೇಯಸ್‌ ಗೋಪಾಲ್‌ 3 ವಿಕೆಟ್‌ ಕಿತ್ತರು.

ಸ್ಕೋರ್: ಕರ್ನಾಟಕ 736/10 ಮತ್ತು 323/10 (ರಾಹುಲ್‌ ಔಟಾಗದೆ 86, ಮಯಾಂಕ್‌ ಮಿಶ್ರಾ 4-69), ಉತ್ತರಾಖಂಡ 233/10 ಮತ್ತು 260/6 (ಅವ್ನೀಶ್‌ 66, ಅಭಯ್‌ ಔಟಾಗದೆ 57, ಸೌರಭ್‌ ಔಟಾಗದೆ 53, ಶ್ರೇಯಸ್ ಗೋಪಾಲ್ 3-83)

ಪಂದ್ಯಶ್ರೇಷ್ಠ: ದೇವದತ್‌ ಪಡಿಕ್ಕಲ್‌

ರಣಜಿ: 15ನೇ ಬಾರಿ ಕರ್ನಾಟಕ ಫೈನಲ್‌ಗೆ

ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ 15ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಈ ಹಿಂದಿನ 14 ಫೈನಲ್‌ಗಳ ಪೈಕಿ 8 ಬಾರಿ ಚಾಂಪಿಯನ್‌ ಆಗಿದ್ದರೆ, 6 ಬಾರಿ ರನ್ನರ್‌-ಅಪ್‌ ಆಗಿತ್ತು. 1973-74, 1977-78, 1982-83, 1995-96, 1997-98, 1998-99, 2013-14, 2014-15ರಲ್ಲಿ ತಂಡ ಟ್ರೋಫಿ ಗೆದ್ದಿತ್ತು. 1941-42, 1959-60, 1974-75, 1978-79, 1981-82, 2009-10ರಲ್ಲಿ ರನ್ನರ್‌-ಅಪ್‌ ಆಗಿದೆ.

ಫೆ.24ರಿಂದ ಜಮ್ಮು-ಕಾಶ್ಮೀರ ವಿರುದ್ಧ ಫೈನಲ್‌ ಫೈಟ್‌

ಈ ಬಾರಿ ಟೂರ್ನಿಯ ಫೈನಲ್‌ ಪಂದ್ಯ ಫೆ.24ರಿಂದ ಹುಬ್ಬಳ್ಳಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡದ ಸವಾಲು ಎದುರಾಗಲಿದೆ. ಜಮ್ಮು-ಕಾಶ್ಮೀರ 67 ವರ್ಷಗಳಲ್ಲೇ ಮೊದಲ ಬಾರಿ ರಣಜಿ ಫೈನಲ್‌ಗೇರಿದೆ.

2015ರಲ್ಲಿ ಟೀಂನಲ್ಲಿದ್ದ ನಾಲ್ವರು ಕನ್ನಡಿಗರು ಈ ಸಲವೂ ಫೈನಲ್‌ಗೆ

ತಂಡ ಕೊನೆ ಬಾರಿ(2014-15)ರಲ್ಲಿ ವಿನಯ್‌ ಕುಮಾರ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿತ್ತು. ಆಗ ತಂಡದಲ್ಲಿದ್ದ ನಾಲ್ವರು ಈ ಬಾರಿಯೂ ಫೈನಲ್‌ಗೇರಿದ್ದಾರೆ. ಕೆ.ಎಲ್.ರಾಹುಲ್‌, ಕರುಣ್‌ ನಾಯರ್, ಶ್ರೇಯಸ್‌ ಗೋಪಾಲ್‌ ಆ ವರ್ಷ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಆಡಿದ್ದರು. ಕರುಣ್‌ 328, ರಾಹುಲ್‌ 188 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದ್ದರು. ಮಯಾಂಕ್‌ ಅಗರ್‌ವಾಲ್‌ ತಂಡದ ಭಾಗವಾಗಿದ್ದರೂ ಆಡುವ 11ರಲ್ಲಿ ಇರಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ಬಳಿಕ ಲಂಕಾಗೂ ಶಾಕ್ ಕೊಟ್ಟ ಜಿಂಬಾಬ್ವೆ!
ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ