
ಕೊಲಂಬೊ: ಇತ್ತೀಚೆಗಷ್ಟೇ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸೋಲುಣಿಸಿ, ಅವರನ್ನು ಟೂರ್ನಿಯಿಂದಲೇ ಹೊರಹಾಕಿದ್ದ ಜಿಂಬಾಬ್ವೆ ತಂಡ ಈಗ ಆತಿಥೇಯ ಶ್ರೀಲಂಕಾ ತಂಡಕ್ಕೂ ಆಘಾತ ನೀಡಿದೆ. ಗುರುವಾರ ಜಿಂಬಾಬ್ವೆ 179 ರನ್ ಗುರಿ ಬೆನ್ನತ್ತಿ, 6 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿತು. ತಂಡ 4 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದು, ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಲಂಕಾ 4 ಪಂದ್ಯದಲ್ಲಿ ಮೊದಲ ಸೋಲು ಕಂಡು ‘ಸಿ’ ಗುಂಪಿನಲ್ಲಿ 2ನೇ ಸ್ಥಾನಿಯಾಯಿತು. ಈ ಎರಡೂ ತಂಡಗಳು ಈಗಾಗಲೇ ಸೂಪರ್-8 ಪ್ರವೇಶಿಸಿದ್ದವು.
ಮೊದಲು ಬ್ಯಾಟ್ ಮಾಡಿದ ಲಂಕಾ 7 ವಿಕೆಟ್‌ಗೆ 178 ರನ್ ಗಳಿಸಿತು. ಪಥುಮ್ ನಿಸ್ಸಾಂಕ 62, ಪವನ್ ರತ್ನಾಯಕೆ 44 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಜಿಂಬಾಬ್ವೆ 19.3 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಔಟಾಗದೆ 63 ರನ್ ಗಳಿಸಿದರೆ, ನಾಯಕ ಸಿಕಂದರ್ ರಝಾ 26 ಎಸೆತಗಳಲ್ಲಿ 45 ರನ್ ಸಿಡಿಸಿ ಗೆಲುವಿನ ರೂವಾರಿಗಳಾದರು. ಮರುಮಾನಿ 34, ರ್‍ಯಾನ್ ಬರ್ಲ್ 23 ರನ್ ಕೊಡುಗೆ ನೀಡಿದರು.
ಈ ವಿಶ್ವಕಪ್‌ನ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದ 4ನೇ ತಂಡ ಜಿಂಬಾಬ್ವೆ. ಭಾರತ, ವಿಂಡೀಸ್, ದ.ಆಫ್ರಿಕಾ ಕೂಡಾ ಒಂದೂ ಪಂದ್ಯದಲ್ಲಿ ಸೋತಿಲ್ಲ.
ವಿಂಡೀಸ್ ಈ ಬಾರಿ ವಿಶ್ವಕಪ್‌ನಲ್ಲಿ ಸತತ 4 ಗೆಲುವು ಸಾಧಿಸಿದೆ. ಗುರುವಾರ ಇಟಲಿ ವಿರುದ್ಧ 41 ರನ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 6 ವಿಕೆಟ್‌ಗೆ 165 ರನ್ ಕಲೆಹಾಕಿತು. ಶಾಯ್ ಹೋಪ್ 75 ರನ್ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಟಲಿ 18 ಓವರ್‌ಗಳಲ್ಲಿ 123 ರನ್‌ಗೆ ಆಲೌಟಾಯಿತು. ಶಾಮರ್ ಜೋಸೆಫ್ 4 ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.