
ಬೆಂಗಳೂರು(ನ.09): ಭಾರತೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಕ್ಕೆ ದೊಡ್ಡ ಹೆಸರಿದೆ. ಕರ್ನಾಟಕದ ಆಟಗಾರರ ಬಗ್ಗೆ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ವಿಶೇಷ ಪ್ರೀತಿ ಇದೆ. ಬಿ.ಎಸ್.ಚಂದ್ರಶೇಖರ್, ಇಎಎಸ್ ಪ್ರಸನ್ನ, ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ರಂತಹ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ರಾಜ್ಯ ಕೊಡುಗೆ ನೀಡಿದೆ. ಹೆಚ್ಚಿನ ವಿವಾದಗಳಿಲ್ಲದೆ ದೇಶದ ಕ್ರಿಕೆಟ್‌ಗೆ ಪ್ರತಿಭೆಗಳನ್ನು ಪೂರೈಸುತ್ತಿದ್ದ ಕರ್ನಾಟಕದಲ್ಲೀಗ ಕೆಪಿಎಲ್ ಟಿ20 ಟೂರ್ನಿಯಿಂದಾಗಿ ಕಳಂಕ ಮೆತ್ತಿಕೊಂಡಿದೆ.
KPL ಫಿಕ್ಸಿಂಗ್: ಗೌತಮ್, ಖಾಜಿ ಅಮಾನತು ಮಾಡಿದ KSCA
ಕರ್ನಾಟಕ ಪ್ರೀಮಿಯರ್ ಲೀಗ್‌ನ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣ ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಆಘಾತ ಮೂಡಿಸಿದೆ. ರಾಜ್ಯದ ಯುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತಂದು, ಭಾರತ ತಂಡ ಇಲ್ಲವೇ ಐಪಿಎಲ್ ತಂಡಗಳಲ್ಲಿ ಸ್ಥಾನ ಗಿಟ್ಟಿಸಲು ನೆರವಾಗುವ ಉದ್ದೇಶದಿಂದ ಆರಂಭಗೊಂಡ ಟೂರ್ನಿ ಇದೀಗ ಅನಗತ್ಯ ವಿವಾದಕ್ಕೆ ಸಿಲುಕಿದೆ.
KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್
ಕೆಪಿಎಲ್‌ನಿಂದಾಗೇ ಕೆ.ಸಿ.ಕಾರ್ಯಪ್ಪ, ಶಿವಿಲ್ ಕೌಶಿಕ್ರಂತಹ ಆಟಗಾರರು ಐಪಿಎಲ್ ತಂಡಗಳಿಗೆ ಆಯ್ಕೆಯಾದರು. ದೇಶದ ನಂ.1 ಟಿ20 ಲೀಗ್ ಎಂದು ಕರೆಸಿಕೊಳ್ಳುವ ಕೆಪಿಎಲ್, ಭ್ರಷ್ಟಾಚಾರದ ಗೂಡಾಗಿರುವುದು ಕ್ರಿಕೆಟ್ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ಸಿ.ಎಂ.ಗೌತಮ್, ಅಬ್ರಾರ್ ಖಾಜಿಯಂತಹ ಹಿರಿಯ ಹಾಗೂ ರಣಜಿ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿದ ಆಟಗಾರರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಅಭಿಮಾನಿಗಳಿಗೆ ಇನ್ನೂ ನಂಬಲಾಗದ ಸಂಗತಿಯಾಗಿದೆ.
ಆಜೀವ ನಿಷೇಧಕ್ಕೆ ಆಗ್ರಹ: ಆಟಕ್ಕೆ ಕಳಂಕ ತಂದಿರುವ ಆಟಗಾರರನ್ನು ಕೆಎಸ್‌ಸಿಎ ತಕ್ಷಣ ಅಮಾನತುಗೊಳಿಸಿದೆ. ಆದರೆ ಅವರ ಮೇಲೆ ಆಜೀವ ನಿಷೇಧ ಹೇರಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿದ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು 2 ವರ್ಷಗಳ ಕಾಲ ನಿಷೇಧಗೊಳಿಸಲಾಗಿತ್ತು. ಕೆಪಿಎಲ್‌ನಲ್ಲಿ ಭ್ರಷ್ಟಾಚಾರ ನಡೆಸಿರುವ ತಂಡಗಳನ್ನೂ ನಿಷೇಧಗೊಳಿಸುವಂತೆ ಕೂಗು ಕೇಳಿಬರುತ್ತಿದೆ. ನಂಬಲಾರ್ಹ ಮೂಲಗಳ ಪ್ರಕಾರ, ಕೆಪಿಎಲ್ ಪ್ರಕರಣ ಬಿಸಿಸಿಐಗೆ ಭಾರೀ ಮುಜುಗರ ತಂದಿದ್ದು, ಟೂರ್ನಿಯ ಮಾನ್ಯತೆಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೊಡ್ಡ ವ್ಯಕ್ತಿಗಳು ಭಾಗಿ?
ಕೆಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆಟಗಾರರು, ಕೋಚ್, ತಂಡಗಳ ಮಾಲೀಕ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ ಮತ್ತಷ್ಟು ಆಟಗಾರರು ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲ, ಹಗರಣದಲ್ಲಿ ರಾಜ್ಯ ಕ್ರಿಕೆಟ್‌ನ ಕೆಲ ದೊಡ್ಡ ವ್ಯಕ್ತಿಗಳ ಹೆಸರು ಸಹ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಈ ಪ್ರಕರಣದಲ್ಲಿ ಇನ್ನೂ ಕೆಲವರು ಸಿಕ್ಕಿಬೀಳಬಹುದು ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.