ಮಧ್ಯ ಪ್ರದೇಶ ವಿರದ್ಧ ಹಿನ್ನಡೆ; ಕರ್ನಾಟಕ ರಣಜಿ ಕ್ವಾರ್ಟರ್ ಫೈನಲ್ ಹಾದಿ ಕಠಿಣ!

By Kannadaprabha NewsFirst Published Feb 8, 2020, 7:46 AM IST
Highlights

ರಣಜಿ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಕರ್ನಾಟಕ ಮಹತ್ವದ ಘಟ್ಟದಲ್ಲಿ ಹಿನ್ನಡೆ ಅನುಭವಿಸಿದೆ. ಮಧ್ಯ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಹಿನ್ನಡೆ ಅನುಭವಿಸುವ ಮೂಲಕ ಕ್ವಾರ್ಟರ್ ಫೈನಲ್ ಹಾದಿ ಮುಳ್ಳಾಗಿಸಿದೆ.

ಶಿವಮೊಗ್ಗ(ಫೆ.08): 2019-20ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಕ್ವಾರ್ಟರ್‌ ಫೈನಲ್‌ ಹಾದಿ ಕಠಿಣಗೊಂಡಿದೆ. ಮಧ್ಯಪ್ರದೇಶ ವಿರುದ್ಧ ಶುಕ್ರವಾರ ಇಲ್ಲಿ ಮುಕ್ತಾಯವಾದ ‘ಬಿ’ ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ ಉಭಯ ತಂಡಗಳು ಜಿದ್ದಾಜಿದ್ದಿ ನಡೆಸಿದವು. ಆದರೆ ಮಧ್ಯಪ್ರದೇಶ ಕೇವಲ 5 ರನ್‌ ಮುನ್ನಡೆ ಪಡೆದು, 3 ಅಂಕ ಸಂಪಾದಿಸಿದರೆ, ಕರ್ನಾಟಕಕ್ಕೆ ಕೇವಲ 1 ಅಂಕ ದೊರೆಯಿತು.

ಇದನ್ನೂ ಓದಿ: RCB ತಂಡದಿಂದ ಹೊರಬಿದ್ದ ಬಳಿಕ ಅಬ್ಬರಿಸುತ್ತಿದ್ದಾರೆ ಸರ್ಫರಾಜ್..!.

7 ಪಂದ್ಯಗಳ ಬಳಿಕ 25 ಅಂಕಗಳನ್ನು ಹೊಂದಿರುವ ಕರ್ನಾಟಕ, ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಗುಂಪು ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಆ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ರಾಜ್ಯ ತಂಡ ಸಿಲುಕಿದೆ. ‘ಎ’ ಹಾಗೂ ‘ಬಿ’ ಗುಂಪಿನಿಂದ ಅಗ್ರ 5 ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಲಿವೆ. 24 ಅಂಕ ಹೊಂದಿರುವ ಪಂಜಾಬ್‌, 6ನೇ ಸ್ಥಾನದಲ್ಲಿದ್ದು ಕ್ವಾರ್ಟರ್‌ ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 20 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಉತ್ತರ ಪ್ರದೇಶ ಕೊನೆ ಪಂದ್ಯದಲ್ಲಿ ಬೋನಸ್‌ ಅಂಕದೊಂದಿಗೆ ಗೆದ್ದರೆ, ಆ ತಂಡಕ್ಕೂ ನಾಕೌಟ್‌ ಪ್ರವೇಶಿಸುವ ಅವಕಾಶವಿರಲಿದೆ.

ಇದನ್ನೂ ಓದಿ: ರಣಜಿ ಟ್ರೋಫಿ: ಕರ್ನಾಟಕಕ್ಕೆ ಬೋನಸ್‌ ಗೆಲುವು!

ಕರ್ನಾಟಕಕ್ಕೆ ಕುಲ್ದೀಪ್‌ ಶಾಕ್‌!: 3ನೇ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದ್ದ ಮಧ್ಯಪ್ರದೇಶ, ಶುಕ್ರವಾರ ಬ್ಯಾಟಿಂಗ್‌ ಕುಸಿತ ಕಂಡಿತು. 381 ರನ್‌ ಗಳಿಸುವಷ್ಟರಲ್ಲಿ 9 ವಿಕೆಟ್‌ ಕಳೆದುಕೊಂಡು ಮುನ್ನಡೆ ಬಿಟ್ಟುಕೊಡುವ ಹಂತ ತಲುಪಿತ್ತು. ಆದರೆ ಕೊನೆ ವಿಕೆಟ್‌ಗೆ ಕುಲ್ದೀಪ್‌ ಸೆನ್‌ ಜತೆ ಸೇರಿದ ಆದಿತ್ಯ ಶ್ರೀವಾಸ್ತವ, 50 ರನ್‌ ಜೊತೆಯಾಟವಾಡಿ ತಂಡಕ್ಕೆ ಮುನ್ನಡೆ ಒದಗಿಸಿದರು. ಕುಲ್ದೀಪ್‌ ಈ ಸಾಲಿನ ರಣಜಿ ಟ್ರೋಫಿಯ ಈ ಹಿಂದಿನ ಪಂದ್ಯಗಳಲ್ಲಿ ಒಂದೂ ರನ್‌ ಗಳಿಸಿರಲಿಲ್ಲ. ಆದರೆ 3 ಸಿಕ್ಸರ್‌ಗಳೊಂದಿಗೆ 19 ಎಸೆತಗಳಲ್ಲಿ ಅಜೇಯ 23 ರನ್‌ ಸಿಡಿಸಿ, ಕರ್ನಾಟಕಕ್ಕೆ ಆಘಾತ ನೀಡಿದರು. ಆದಿತ್ಯ 192 ರನ್‌ ಗಳಿಸಿ ಔಟಾಗುತ್ತಿದ್ದಂತೆ 431 ರನ್‌ಗಳಿಗೆ ಮಧ್ಯಪ್ರದೇಶದ ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಂಡಿತು. ಕೇವಲ 5 ರನ್‌ ಮುನ್ನಡೆ ಪಡೆದ ಮಧ್ಯಪ್ರದೇಶ 3 ಅಂಕ ಗಳಿಸಿತು.

2ನೇ ಇನ್ನಿಂಗ್ಸ್‌ ಆರಂಭಿಸಿದ ಕರ್ನಾಟಕ, ಆರ್‌.ಸಮಥ್‌ರ್‍ (12) ವಿಕೆಟ್‌ ಕಳೆದುಕೊಂಡಿತು. ದೇವದತ್‌ ಪಡಿಕ್ಕಲ್‌ (31) ಹಾಗೂ ರೋಹನ್‌ ಕದಂ (16) ಅಜೇಯರಾಗಿ ಉಳಿದರು. ಕರ್ನಾಟಕ 1 ವಿಕೆಟ್‌ಗೆ 62 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

ಸ್ಕೋರ್‌: ಕರ್ನಾಟಕ 426 ಹಾಗೂ 62/1, ಮಧ್ಯಪ್ರದೇಶ 431 (ಆದಿತ್ಯ 192, ವೆಂಕಟೇಶ್‌ 86, ಮಿಥುನ್‌ 3-69)

click me!